image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

2021ರ ನ್ಯಾಯಮಂಡಳಿಗಳ ಸುಧಾರಣಾ ಕಾಯ್ದೆಯ ಅನೇಕ ನಿಬಂಧನೆಗಳನ್ನು ರದ್ದುಮಾಡಿದ ಸುಪ್ರೀಂಕೋರ್ಟ್‌

2021ರ ನ್ಯಾಯಮಂಡಳಿಗಳ ಸುಧಾರಣಾ ಕಾಯ್ದೆಯ ಅನೇಕ ನಿಬಂಧನೆಗಳನ್ನು ರದ್ದುಮಾಡಿದ ಸುಪ್ರೀಂಕೋರ್ಟ್‌

ನವದೆಹಲಿ: ಅಧ್ಯಕ್ಷರು, ಸದಸ್ಯರಿಗೆ ಕನಿಷ್ಠ, ಗರಿಷ್ಠ ವಯೋಮಿತಿ, ಅಧಿಕಾರಾವಧಿ ನಿಗದಿ ಸೇರಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ 2021ರ ನ್ಯಾಯಮಂಡಳಿಗಳ ಸುಧಾರಣಾ ಕಾಯ್ದೆಯ ಅನೇಕ ನಿಬಂಧನೆಗಳನ್ನು ಸುಪ್ರೀಂ ಕೋರ್ಟ್‌ ಬುಧವಾರ ರದ್ದುಮಾಡಿದೆ.ಅಲ್ಲದೆ, 'ಕೋರ್ಟ್‌ ಆದೇಶಗಳನ್ನೆಲ್ಲ ಸಂಸತ್ತು ಬುಡಮೇಲು ಮಾಡಲಾಗದು' ಎಂದು ಖಡಕ್ಕಾಗಿ ಹೇಳಿದೆ. ಈ ಆದೇಶದಿಂದ ಕೇಂದ್ರ ಸರ್ಕಾರಕ್ಕೆ ಭಾರಿ ಹಿನ್ನಡೆ ಆಗಿದೆ. 'ಈ ಹಿಂದೆ ನಾವು ಅಸಾಂವಿಧಾನಿಕ ಎಂದು ರದ್ದು ಮಾಡಿದ್ದ ನ್ಯಾಯಮಂಡಳಿಗಳ ಸುಧಾರಣಾ ಅಧಿಸೂಚನೆಯಲ್ಲಿರುವ ಅಂಶಗಳನ್ನೇ ಸಣ್ಣ ಪುಟ್ಟ ತಿದ್ದುಪಡಿಗಳೊಂದಿಗೆ 2021ರ ಕಾಯ್ದೆಯಲ್ಲಿ ಮರು ಜಾರಿಗೊಳಿಸಲಾಗಿದೆ. ಇದು ಸಂವಿಧಾನದಲ್ಲಿ ಹೇಳಲಾದ ಅಧಿಕಾರದ ಪ್ರತ್ಯೇಕತೆ, ನ್ಯಾಯಾಂಗ ಸ್ವಾತಂತ್ರ್ಯದ ತತ್ವಗಳ ಸ್ಪಷ್ಟ ಉಲ್ಲಂಘನೆ' ಎಂದು ಎಂದು ಕೋರ್ಟ್ ಹೇಳಿದೆ. 2020ರ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮಂಡಳಿಗಳ ಸದಸ್ಯರು, ಅಧ್ಯಕ್ಷರ ಅಧಿಕಾರಾವಧಿಯನ್ನು 5 ವರ್ಷಕ್ಕೆ ನಿಗದಿಪಡಿಸುವಂತೆ ಆದೇಶಿತ್ತು. ಆದರೆ, 2021ರಲ್ಲಿ ಈ ಕುರಿತು ಅಧಿಸೂಚನೆ ಹೊರಡಿಸಿದ ಸರ್ಕಾರವು ಅಧ್ಯಕ್ಷರು, ಸದಸ್ಯರ ಅಧಿಕಾರಾವಧಿಯನ್ನು 4 ವರ್ಷಕ್ಕೆ ಸೀಮಿತಗೊಳಿಸಿತ್ತು. ಈ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್‌ ನಂತರ ರದ್ದು ಮಾಡಿದ್ದು, ಆ ಬಳಿಕ ಈ ಅಧಿಸೂಚನೆಗೆ ಕೆಲ ತಿದ್ದುಪಡಿಗಳನ್ನು ತಂದು 2021ರ ನ್ಯಾಯಾಧಿಕರಣಗಳ ಸುಧಾರಣಾ ಕಾಯ್ದೆ ಜಾರಿ ತರಲಾಗಿತ್ತು.

ಅಧಿಕಾರಾವಧಿ ಜತೆಗೆ ನ್ಯಾಯಮಂಡಳಿ ಸದಸ್ಯರು, ಅಧ್ಯಕ್ಷರ ಕನಿಷ್ಠ ವಯೋಮಿತಿ 50 ವರ್ಷಕ್ಕೆ ನಿಗದಿ, ಅಧ್ಯಕ್ಷರಿಗೆ ಗರಿಷ್ಠ ವಯೋಮಿತಿ 70 ವರ್ಷ, ಸದಸ್ಯರಿಗೆ 67 ವರ್ಷ ಎಂದು ನಿಗದಿಪಡಿಸಿತ್ತು. ಜತೆಗೆ, ಈ ನ್ಯಾಯಮಂಡಳಿಗೆ ಇಬ್ಬರ ಹೆಸರು ಸೂಚಿಸಲು ಆಯ್ಕೆ ಸಮಿತಿಗೆ ಅ‍ವಕಾಶ ನೀಡಿ, ಅದರಲ್ಲಿ ಒಂದು ಹೆಸರನ್ನು ಸರ್ಕಾರವೇ ಅಂತಿಮಗೊಳಿಸುವ ಅಧಿಕಾರ ನೀಡಲಾಗಿತ್ತು. ಇದನ್ನು ಮದ್ರಾಸ್‌ ಬಾರ್‌ ಅಸೋಸಿಯೇಷನ್‌, ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಮತ್ತು ಇತರರು ಸುಪ್ರೀಂ ಕೋರ್ಟಲ್ಲಿ ಪ್ರಶ್ನಿಸಿದ್ದರು. ನ್ಯಾಯಮಂಡಳಿಗಳೂ ಅರೆ ನ್ಯಾಯಾಂಗ ವ್ಯವಸ್ಥೆಯಾಗಿದ್ದು, ನೀರಾವರಿ, ತೆರಿಗೆ ಸೇರಿ ಹಲವು ವಿಚಾರಗಳಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಕಾರಣ ಇವುಗಳನ್ನು ಸರ್ಕಾರದ ಹಸ್ತಕ್ಷೇಪದಿಂದ ಮುಕ್ತವಾಗಿರಿಸುವ ಅಗತ್ಯವಿದೆ ಎಂದು ಅರ್ಜಿದಾರರು ಆಗ್ರಹಿಸಿದ್ದರು.

Category
ಕರಾವಳಿ ತರಂಗಿಣಿ