ಪತ್ತನಂತಿಟ್ಟ: ಕೇರಳದಲ್ಲಿ ಕಳೆದ ಕೆಲ ತಿಂಗಳುಗಳಿಂದ ಪತ್ತೆಯಾಗುತ್ತಿರುವ 'ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್' ಎಂಬ ಮಿದುಳು ಜ್ವರ ಪ್ರಕರಣದ ಹಿನ್ನೆಲೆಯಲ್ಲಿ ಕೇರಳ ಸರ್ಕಾರವು ಶಬರಿಮಲೆಯ ವಾರ್ಷಿಕ ಯಾತ್ರೆ ಕೈಗೊಳ್ಳುವವರಿಗೆ ಸೂಚನೆ ನೀಡಿದ್ದು, ಮೂಗಿನೊಳಗೆ ನೀರು ಹೋಗದಂತೆ ಎಚ್ಚರ ವಹಿಸುವಂತೆ ಹೇಳಿದೆ. ಯಾವುದೇ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ತಮ್ಮ ದಾಖಲೆ ಹಾಗೂ ಔಷಧಗಳನ್ನು ಕೊಂಡೊಯ್ಯಬೇಕು. ಯಾತ್ರೆಯ ಸಂದರ್ಭದಲ್ಲಿ ನಿಯಮಿತ ಔಷಧಗಳನ್ನು ನಿಲ್ಲಸಬಾರದು. ಶಬರಿಮಲೆಗೆ ನಡೆಯುವಂತ ಸಂದರ್ಭದಲ್ಲಿ ಒತ್ತಡ ನಿರ್ವಹಣೆಯಾಗಿ ನಡಿಗೆಯಂತ ಲಘು ವ್ಯಾಯಾಮ ಮಾಡುವಂತೆಯೂ ಸಲಹೆ ನೀಡಿದೆ.
'ಬೆಟ್ಟವನ್ನು ನಿಧಾನವಾಗಿ ಹತ್ತಬೇಕು. ಮಧ್ಯದಲ್ಲಿ ಪುಟ್ಟ ವಿರಾಮ ತೆಗೆದುಕೊಳ್ಳಬೇಕು. ಸುಸ್ತು ಎನಿಸಿದರೆ, ಎದೆ ನೋವು ಕಂಡುಬಂದರೆ ವೈದ್ಯಕೀಯ ನೆರವು ಪಡೆಯಬೇಕು. ತುರ್ತು ಪರಿಸ್ಥಿತಿಯಲ್ಲಿ 04735 203232 ಸಂಖ್ಯೆಯನ್ನು ಸಂಪರ್ಕಿಸಬೇಕು' ಎಂದು ಕೇರಳ ಸರ್ಕಾರ ಹೇಳಿದೆ. 'ಕುದಿಸಿದ ನೀರನ್ನೇ ಕುಡಿಯಬೇಕು. ಕೈತೊಳೆಯಲು, ಅಡುಗೆಗೆ, ಹಣ್ಣುಗಳನ್ನು ತೊಳೆಯಲು ಕುದಿಸಿದ ನೀರನ್ನೇ ಬಳಸಬೇಕು. ಹಳಸಿದ ಹಾಗೂ ಹೊರಗೆ ತೆರೆದಿದ್ದ ಆಹಾರಗಳನ್ನು ಸೇವಿಸಬಾರದು. ಬಯಲು ಬಹಿರ್ದೆಸೆ ನಿಷೇಧಿಸಲಾಗಿದೆ. ಶೌಚಾಲಯಗಳನ್ನೇ ಬಳಸಬೇಕು ಹಾಗೂ ನಂತರ ಶುಚಿಯಾಗಿ ಕೈತೊಳೆದುಕೊಳ್ಳಬೇಕು. ತ್ಯಾಜ್ಯಗಳನ್ನು ನಿರ್ದಿಷ್ಟ ಜಾಗದಲ್ಲೇ ಹಾಕಬೇಕು' ಎಂದು ಸರ್ಕಾರ ಸೂಚಿಸಿದೆ. 'ಬೆಟ್ಟ ಹತ್ತುವಾಗ ಹಾವು ಕಚ್ಚಿದರೆ ತಕ್ಷಣ ವೈದ್ಯಕೀಯ ನೆರವು ಕೋರಬೇಕು. ಆಸ್ಪತ್ರೆಗಳಲ್ಲಿ ಹಾವು ಕಡಿತ ಔಷಧ ದಾಸ್ತಾನು ಇಡಲಾಗಿದೆ. ಯಾತ್ರಿಕರ ವೈದ್ಯಕೀಯ ನೆರವಿಗಾಗಿ ವಿವಿಧ ವೈದ್ಯಕೀಯ ಕಾಲೇಜುಗಳ ತರಬೇತಿ ಹೊಂದಿದ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರನ್ನು ನಿಯೋಜಿಸಲಾಗಿದೆ. ಇವರು ಯಾತ್ರೆ ಸಾಗುವ ಮಾರ್ಗದಲ್ಲೇ ಲಭ್ಯರಿರಲಿದ್ದಾರೆ. ದಿನದ 24 ಗಂಟೆಗಳ ಕಾಲ ಪಂಪಾದಲ್ಲಿರುವ ವೈದ್ಯಕೀಯ ಕೇಂದ್ರ ಕೆಲಸ ಮಾಡಲಿದೆ' ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.