ನವದೆಹಲಿ : ದೇಶವನ್ನು 60 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಇದೀಗ ಕೆಲವೇ ರಾಜ್ಯಕ್ಕೆ ಸೀಮಿತವಾಗಿದೆ. ಕೇಂದ್ರ ಹಾಗೂ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಎನ್ಡಿಎ ಮೈತ್ರಿಕೂಟ ಆಡಳತದಲ್ಲಿದೆ. ಸೊರಗಿರುವ ಕಾಂಗ್ರೆಸ್ಗೆ ಜೀವ ನೀಡಲು ರಾಹುಲ್ ಗಾಂಧಿ ಸತತ ಕಸರತ್ತು ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಸಿಡಿಸಿದ ವೋಟ್ ಚೋರಿ ಬಾಂಬ್ ದೇಶದ ಜನತೆ ಮುಂದೆ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ. ಕಾಂಗ್ರೆಸ್ ನಾಯಕರು ಗಂಭೀರವಾಗಿ ಪರಿಗಣಿಸಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಾಕುತ್ತಿದ್ದಾರೆ. ಆದರೆ ಜನಸಾಮಾನ್ಯರು ಈ ಆರೋಪವನ್ನು ಗಂಭೀರವಾಗಿ ಪರಿಗಣಿಸದಂತಿಲ್ಲ. ಕಾರಣ ರಾಹುಲ್ ದೇಶವನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಅನ್ನೋ ಮಾತುಗಳು ಬಲವಾಗುತ್ತಿದೆ. ಕೇವಲ ಮಹದೇವಪುರ ಅಥವಾ ಆಲಂದ್ಗಳಲ್ಲಿ ಮಾತ್ರವಲ್ಲ, ಇಡೀ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿಯೂ ಮತ ಕಳ್ಳತನ ನಡೆದಿದೆ ಎಂದಿದ್ದಾರೆ. ಈ ಹೇಳಿಕೆ ಆಧಾರರಹಿತ ಮಾತ್ರವಲ್ಲದೆ, ಭಾರತದ ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ಸಾರ್ವಜನಿಕರ ನಂಬಿಕೆಯನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ. ಮಹಿಳೆಯೊಬ್ಬರ ಹೆಸರು ಮತದಾರರ ಪಟ್ಟಿಯಲ್ಲಿ 220 ಬಾರಿ ಕಾಣಿಸಿಕೊಂಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಆದರೆ, ರಾಹುಲ್ ಉಲ್ಲೇಖಿಸಿದ ಪಟ್ಟಿಯು ಸ್ವತಃ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆದ್ದ ಮುಲಾನಾ ವಿಧಾನಸಭಾ ಕ್ಷೇತ್ರದ ಪಟ್ಟಿಯಾಗಿದೆ. ರಾಹುಲ್ ಹೇಳಿಕೆ ಸುಳ್ಳು ಸೃಷ್ಟಿ ಅನ್ನೋದರ ಮೊದಲ ಸಾಕ್ಷಿ ಲಭ್ಯವಾಗುತ್ತದೆ.
2014, 2019 ಮತ್ತು 2024 ರಲ್ಲಿ ಸ್ವತಃ ರಾಹುಲ್ ಗಾಂಧಿ ಎಕ್ಸಿಟ್ ಪೋಲ್ ತಪ್ಪು ಮಾಹಿತಿ ನೀಡುತ್ತಿದೆ ಅನ್ನೋ ಆರೋಪವನ್ನು ತಳ್ಳಿಹಾಕಿದ್ದರು. ಆದರೆ ಈಗ ಎಕ್ಸಿಟ್ ಪೋಲ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. 2024 ರಲ್ಲಿ, ಎಕ್ಸಿಟ್ ಪೋಲ್ಗಳು ಬಿಜೆಪಿಗೆ 350+ ಸ್ಥಾನಗಳನ್ನು ಭವಿಷ್ಯ ನುಡಿದಿದ್ದವು. ಆದರೆ ಎಕ್ಸಿಟ್ ಪೋಲ್ ಹೇಳಿದಷ್ಟು ಸ್ಥಾನ ಗೆಲ್ಲದಿದ್ದರೂ ಬಿಜೆಪಿ ಅಭೂತಪೂರ್ವ ಗೆಲುವಿನೊಂದಿಗೆ 3ನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. 2014 ಮತ್ತು 2019 ರಲ್ಲಿ, ಕೆಲವು ಎಕ್ಸಿಟ್ ಪೋಲ್ಗಳು ಬಿಜೆಪಿಯ ಸಾಮರ್ಥ್ಯವನ್ನು ಕಡಿಮೆ ಅಂದಾಜು ಮಾಡಿತ್ತು. ಆದರೆ ಪಕ್ಷವು ಎರಡೂ ಬಾರಿ ಬೃಹತ್ ಜನಾದೇಶವನ್ನು ಗಳಿಸಿತು. ಕುತೂಹಲಕಾರಿಯಾಗಿ, ಜಾರ್ಖಂಡ್ನಲ್ಲಿ ಎಕ್ಸಿಟ್ ಪೋಲ್ಗಳು ಹೇಳಿದ ವರದಿ ತಪ್ಪಾಗಿದೆ. ಅಲ್ಲಿ ಬಿಜಿಪಿ ಗೆಲ್ಲಲಿಲ್ಲ, ಬದಲಿಗೆ ಕಾಂಗ್ರೆಸ್ ಹಾಗೂ ಜೆಎಂಎಂ ಮೈತ್ರಿಕೂಟ ಗೆಲುವು ಸಾಧಿಸಿದೆ. ಇಲ್ಲಿ ರಾಹುಲ್ ಗಾಂಧಿಗೆ ಎಕ್ಸಿಟ್ ಪೋಲ್ ಮಾತು ಸುಳ್ಳಾಗಿರುವುದಕ್ಕೆ ಯಾವುದೇ ಅಕ್ಷೇಪಣೆ ಇಲ್ಲ, ಇದರ ಪರಿಣಾಮ ಅವರ ಬಾಂಬುಗಳು ಠುಸ್ ಆಗಿವೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.