ನವದೆಹಲಿ : 260 ಜನರ ಸಾವಿಗೆ ಕಾರಣವಾದ ಏರ್ ಇಂಡಿಯಾ ಬೋಯಿಂಗ್ ಡ್ರೀಮ್ ಲೈನರ್ ವಿಮಾನದ ಕ್ಯಾಪ್ಟನ್ ಹಾಗೂ ಪೈಲಟ್ ಇನ್ ಕಮಾಂಡ್ ಆಗಿದ್ದ ಸುಮಿತ್ ಸಭರ್‌ವಾಲ್ ಅವರ ತಂದೆಗೆ ಈಗ ಸುಪ್ರೀಂಕೋರ್ಟ್ ಸಾಂತ್ವಾನ ಹೇಳುವ ಪ್ರಯತ್ನ ಮಾಡಿದೆ. ಈ ದುರಂತದಲ್ಲಿ ಸುಮಿತ್ ಸಭರ್‌ವಾಲ್ ಕೂಡ ಮಡಿದಿದ್ದಾರೆ. ಮಗನ ಸಾವಿನ ಜೊತೆಗೆ ಈ ಸಾವಿಗೆ ಪೈಲಟ್‌ಗಳೇ ಕಾರಣ ಎಂಬ ವರದಿಗಳು ಸುಮಿತ್ ಅವರ 91ರ ಹರೆಯ ವೃದ್ಧ ತಂದೆ ಪುಷ್ಕರ್‌ರಾಜ್ ಸಭರ್‌ವಾಲ್ ಅವರನ್ನು ಇನ್ನಷ್ಟು ರೋಧಿಸುವಂತೆ ಮಾಡಿತ್ತು. ಹೀಗಾಗಿ ಅವರು ಈ ವರದಿಗಳ ಸಂಬಂಧ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಾಧೀಶರು ಪುಷ್ಕರ್ ಸಭರ್‌ವಾಲ್ ಅವರಿಗೆ ಸಾಂತ್ವಾನ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ದುರಂತಕ್ಕೆ ನಿಮ್ಮ ಮಗನನ್ನು ದೂಷಿಸುವುದಿಲ್ಲ, ಈ ದುರಂತದಲ್ಲಿ ನಿಮ್ಮ ಮಗನ ತಪ್ಪಿಲ್ಲ ಎಂದು ಇದೊಂದು ಅಪಘಾತ ಎಂದು ಸುಪ್ರೀಂಕೋರ್ಟ್ ಪುಷ್ಕರ್‌ರಾಜ್ ಅವರಿಗೆ ಭರವಸೆ ನೀಡಿದೆ. ಅಲ್ಲದೇ ಈ ದೂಷಣೆಯ ಹೊರೆಯನ್ನು ನೀವು ಹೊರುವುದು ಬೇಡ ಎಂದು ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು, ಸುಮಿತ್ ಸಭರ್‌ವಾಲ್ ಅವರ 91 ವರ್ಷದ ತಂದೆಗೆ, ನೀವು ನಿಮ್ಮ ಮೇಲೆ ಈ ಹೊರೆ ಹೊತ್ತುಕೊಳ್ಳಬಾರದು. ವಿಮಾನ ಅಪಘಾತಕ್ಕೆ ಪೈಲಟ್ ಅವರನ್ನು ದೂಷಿಸಬಾರದು. ಅದು ಅಪಘಾತ. ಪ್ರಾಥಮಿಕ ವರದಿಯಲ್ಲಿಯೂ ಸಹ ಅವರ ವಿರುದ್ಧ ಯಾವುದೇ ಆರೋಪಗಳಿಲ್ಲ ಎಂದು ಹೇಳಿದೆ.
ಇದೇ ಸಂದರ್ಭದಲ್ಲಿ ಅವರ ತಂದೆ ಪುಷ್ಕರ್ ಸಭರ್‌ವಾಲ್ ಅವರ ಮನವಿಯ ಮೇರೆಗೆ ಅದು ಕೇಂದ್ರ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ)ಗೆ ನೋಟಿಸ್ ನೀಡಿದೆ. ಪುಷ್ಕರ್ ಸಭರ್‌ವಾಲ್ ಪುತ್ರ ಸುಮೀತ್ ಸಭರ್ವಾಲ್ ಅಹ್ಮದಾಬಾದ್‌ನಲ್ಲಿ ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ ಪೈಲಟ್-ಇನ್-ಕಮಾಂಡ್ ಆಗಿದ್ದರು. ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ತನ್ನ ಪ್ರಾಥಮಿಕ ವರದಿಯಲ್ಲಿ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಕೆಯನ್ನು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಕಡಿತಗೊಳಿಸಲಾಗಿದೆ ಎಂದು ಉಲ್ಲೇಖಿಸಿದ ನಂತರ ಪೈಲಟ್‌ಗಳದ್ದೇ ದೋಷ ಎಂಬ ಊಹಾಪೋಹಾಗಳು ಹಬ್ಬಿದ್ದವು. ಈ ಹಿನ್ನೆಲೆಯಲ್ಲಿ ಸುಮಿತ್ ಅರ ತಮದೆ ಪುಷ್ಕರ್ ವಕೀಲರ ಮೂಲಕ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಪೈಲಟ್ ತಂದೆ ಪುಷ್ಕರ್ ಪರವಾಗಿ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ಕುರಿತು ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಪ್ರಕಟವಾದ ಸುದ್ದಿಯನ್ನು ಸುಪ್ರೀಂಕೋರ್ಟ್‌ನಲ್ಲಿ ಎತ್ತಿ ತೋರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್ ಇದೊಂದು ಭಾರತವನ್ನು ದೂಷಿಸಲು ಮಾಡಿದ ನಾಚಿಕೆಗೇಡಿನ ವರದಿ ಎಂದು ಸುಪ್ರೀಂಕೋರ್ಟ್ ಹೇಳಿದೆ. ವಿಮಾನ ಅಪಘಾತ ತನಿಖಾ ಮಂಡಳಿಯ ಜುಲೈ 12 ರಂದು ಸಲ್ಲಿಸಿದ್ದ ಪ್ರಾಥಮಿಕ ವರದಿಯನ್ನು ಒಳಗೊಂಡಿರುವ ವಾಲ್‌ಸ್ಟ್ರಿಟ್ ಜರ್ನಲ್‌ನಲ್ಲಿ ಪ್ರಕಟವಾದ ಈ ಲೇಖನದ ಪ್ಯಾರಾಗ್ರಾಫ್ ಅನ್ನು ಸುಪ್ರೀಂಕೋರ್ಟ್ ಓದಿದೆ ಮತ್ತು ಅಪಘಾತಕ್ಕೆ ಪೈಲಟ್ ಅನ್ನು ದೂಷಿಸಬೇಕೆಂದು ಎಲ್ಲಿಯೂ ಹೇಳಲಾಗಿಲ್ಲ, ಇದು ವಿಮಾನದ ಇಬ್ಬರು ಪೈಲಟ್‌ಗಳ ನಡುವಿನ ಸಂಭಾಷಣೆಯನ್ನು ಮಾತ್ರ ಉಲ್ಲೇಖಿಸಿದೆ ಎಂದು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ಹೇಳಿದೆ. ವಿಮಾನ ಅಪಘಾತ ತನಿಖಾ ಮಂಡಳಿಯ(ಎಎಐಬಿ) ತನಿಖೆಯ ವ್ಯಾಪ್ತಿಯು ದೂಷಿಸುವುದು ಅಲ್ಲ, ಬದಲಾಗಿ ಭವಿಷ್ಯದ ದುರಂತಗಳನ್ನು ತಪ್ಪಿಸಲು ಅಥವಾ ತಡೆಗಟ್ಟಲು ಕ್ರಮಗಳನ್ನು ಸೂಚಿಸುವುದು. ಅಗತ್ಯವಿದ್ದರೆ, ಪೈಲಟ್ ಅನ್ನು ದೂಷಿಸಬಾರದು ಎಂದು ನಾವು ಸ್ಪಷ್ಟಪಡಿಸುತ್ತೇವೆ ಎಂದು ಸುಪ್ರೀಂಕೋರ್ಟ್ ಸುಮಿತ್ ಅವರ ತಂದೆಗೆ ಹೇಳಿದೆ.