image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

AIADMK ಭಿನ್ನಮತ ಸ್ಫೋಟ: 9 ಬಾರಿಯ ಶಾಸಕ ಸೆಂಗೊಟ್ಟೈಯನ್ ಉಚ್ಚಾಟನೆ

AIADMK ಭಿನ್ನಮತ ಸ್ಫೋಟ: 9 ಬಾರಿಯ ಶಾಸಕ ಸೆಂಗೊಟ್ಟೈಯನ್ ಉಚ್ಚಾಟನೆ

ಚೆನ್ನೈ : ಮುಂದಿನ ವರ್ಷ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು ವಿಪಕ್ಷ ಎಐಎಡಿಎಂಕೆ ಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಹಿರಿಯ ನಾಯಕ 9 ಬಾರಿಯ ಶಾಸಕ ಕೆ.ಎ. ಸೆಂಗೊಟ್ಟೈಯನ್ ಅವರನ್ನು ಪಕ್ಷದಿಂದ ಹೊರ ಹಾಕಲಾಗಿದೆ. ಮಾಜಿ ಮುಖ್ಯಮಂತ್ರಿ ಓ ಪನ್ನೀರ್‌ಸೆಲ್ವಂ, ಪಕ್ಷದ ಐಕಾನ್ ಜಯಲಲಿತಾ ಅವರ ಆಪ್ತವಲಯದಲ್ಲಿದ್ದ ವಿ.ಕೆ.ಶಶಿಕಲಾ ಮತ್ತು ಟಿಟಿವಿ ದಿನಕರನ್ ಅವರಂತಹ ವಜಾಗೊಂಡ ಇತರರು ಪಕ್ಷಕ್ಕೆ ಮರಳಲು ಅವಕಾಶ ನೀಡಬೇಕು ಎಂಬ ಸಲಹೆ ನೀಡಿದ ಸೆಂಗೊಟ್ಟೈಯನ್ ಅವರನ್ನೇ ಪಕ್ಷದಿಂದ ಹೊರ ಹಾಕಲಾಗಿದೆ. "ನನ್ನ ಉಚ್ಚಾಟನೆಯಿಂದ ನನಗೆ ನೋವಾಗಿದೆ, ಕಣ್ಣೀರು ಬರುತ್ತಿದೆ, ನಿದ್ರೆ ಇಲ್ಲದೆ ಕಾಲ ಕಳೆಯಬೇಕಾಗಿದೆ ಎಂದು 77 ರ ಹರೆಯದ ಸೆಂಗೊಟ್ಟೈಯನ್ ನೋವಿನ ನುಡಿಗಳನ್ನಾಡಿದ್ದಾರೆ.ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಪಕ್ಷದಲ್ಲಿ ಕೆಲಸ ಮಾಡಿದ ನನಗೆ ಕನಿಷ್ಠ ನೋಟಿಸ್ ಅಥವಾ ಅವರ ವಿರುದ್ಧದ ಆರೋಪಗಳಿಗೆ ಉತ್ತರಿಸಲು ಅವಕಾಶ ನೀಡಲಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. "ಪಕ್ಷದಿಂದ ಹೊರಹಾಕಿರುವ ಪ್ರಮುಖ ನಾಯಕರನ್ನು ಮತ್ತೆ ಸೇರಿಸಿಕೊಳ್ಳುವಂತೆ ನಾನು ಯಾವುದೇ ಅಂತಿಮ ಗಡುವು ನೀಡಿಲ್ಲ. ಚರ್ಚೆಯ ನಂತರವೇ ನಾನು ನಿರ್ಧಾರ ಹೇಳಲು ಬಯಸಿದ್ದೆ. ಎಐಎಡಿಎಂಕೆಯನ್ನು ನವೀಕರಿಸುವುದು ಮತ್ತು ಎಂಜಿಆರ್ ಮತ್ತು ಜಯಲಲಿತಾ ಅವರ ಕನಸುಗಳನ್ನು ನನಸಾಗಿಸುವುದು ನನ್ನ ಸಲಹೆಯಾಗಿತ್ತು" ಎಂದು ಹೇಳಿದ್ದಾರೆ. ಆಡಳಿತಾರೂಢ ಡಿಎಂಕೆಯ "ಬಿ-ಟೀಮ್ " ಎಂದು ಕರೆದಿದ್ದಕ್ಕಾಗಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್) ವಿರುದ್ಧ ಸೆಂಗೊಟ್ಟೈಯನ್ ಕಿಡಿ ಕಾರಿದ್ದಾರೆ. "ನಾನು ಪಕ್ಷದಿಂದ ಹೊರಹಾಕಲ್ಪಟ್ಟ ನಾಯಕರೊಂದಿಗೆ ಸಹಕಾರ ಕೋರಿ ಮಾತನಾಡಿದ್ದು ನಿಜ. ಆದರೆ ಇಪಿಎಸ್ ನಾನು ಡಿಎಂಕೆಯ ಬಿ-ಟೀಮ್ ಎಂದು ಹೇಳಿದ್ದಾರೆ. ಅದು ಯಾರೆಂದು ದೇಶಕ್ಕೆ ತಿಳಿದಿದೆ. ನಾನು ಯಾರ ಬಿ-ಟೀಮ್ ಅಲ್ಲ, ಆದರೆ ಪಳನಿಸ್ವಾಮಿ ಎ-ಟೀಮ್" ಎಂದಿದ್ದಾರೆ. ನಾನು ಎಂಜಿಆರ್ ಕಾಲದಿಂದಲೂ ಎಐಎಡಿಎಂಕೆಗೆ ಸಮರ್ಪಿತನಾಗಿ ಕೆಲಸ ಮಾಡಿದ್ದೇನೆ. ನಾನು ಎಂಜಿಆರ್ ಅವರ ಮೆಚ್ಚುಗೆಯನ್ನು ಗಳಿಸಿದ್ದೆ. ಜಯಲಲಿತಾ ಸ್ವತಃ ನನ್ನ ಪ್ರಾಮಾಣಿಕತೆಯನ್ನು ಒಪ್ಪಿಕೊಂಡಿದ್ದರು. ಅವರು ನನಗೆ ಎರಡು ಬಾರಿ ಪ್ರತಿಫಲ ನೀಡಿದರು, ಆದರೆ ಎಐಎಡಿಎಂಕೆಯ ವಿಭಜನೆ ತಪ್ಪಿಸಲು ಪಕ್ಷವನ್ನು ಮುನ್ನಡೆಸುವ ಅವಕಾಶವನ್ನು ನಾನು ಬಿಟ್ಟುಕೊಟ್ಟೆ. ಪಕ್ಷದ ಸೇವೆಗಾಗಿ ಮಾಡಿರುವ ತ್ಯಾಗಗಳ ಪಟ್ಟಿ ದೊಡ್ಡದಾಗಿದೆ ಎಂದು ಸೆಂಗೊಟ್ಟೈಯನ್ ಹೇಳಿದರು.

ಜಯಲಲಿತಾ ನಿಧನ ಹೊಂದಿದ ನಂತರ ಶಶಿಕಲಾ ಅವರ ಪ್ರಾಬಲ್ಯ ಇದ್ದಾಗ ಪಕ್ಷ ವಿಭಜನೆಯನ್ನು ತಪ್ಪಿಸಲು ಇಪಿಎಸ್ ಅವರ ನಾಯಕತ್ವವನ್ನು ಅನುಮೋದಿಸಿದ್ದೆ ಎಂದರು. ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ನನ್ನನ್ನು ಉಚ್ಚಾಟಿಸಿರುವ ವಿರುದ್ಧ ಕಾನೂನು ಹೋರಾಟ ಪ್ರಾರಂಭಿಸುತ್ತೇನೆ. ಎಐಎಡಿಎಂಕೆಗೆ ನನ್ನ ನಿಷ್ಠೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. ಉಚ್ಚಾಟನೆಯ ನಂತರ, ಪಕ್ಷದ ಎಲ್ಲಾ ಸದಸ್ಯರು ಸೆಂಗೋಟ್ಟೈಯನ್ ಅವರೊಂದಿಗಿನ ಎಲ್ಲಾ ಸಂಪರ್ಕಗಳನ್ನು ಕಡಿದುಕೊಳ್ಳುವಂತೆ ಮತ್ತು ಅವರೊಂದಿಗೆ ಯಾವುದೇ ರೀತಿಯ ಸಂಪರ್ಕವನ್ನು ಹೊಂದಿರದಂತೆ ಇಪಿಎಸ್ ಆದೇಶ ಹೊರಡಿಸಿದ್ದಾರೆ. ಸೆಪ್ಟೆಂಬರ್ ಆರಂಭದಲ್ಲಿ, ಸೆಂಗೋಟ್ಟೈಯನ್ ಅವರನ್ನು ಈರೋಡ್ ಉಪನಗರ ಪಶ್ಚಿಮ ಜಿಲ್ಲೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮತ್ತು ಜಿಲ್ಲಾ ಕಾರ್ಯದರ್ಶಿ ಜವಾಬ್ದಾರಿಯಿಂದ ತೆಗೆದುಹಾಕಲಾಗಿತ್ತು. ಜಯಲಲಿತಾ ಅವರ ಮೊದಲ ಸಂಪುಟದಲ್ಲಿ ಸೆಂಗೊಟ್ಟೈಯನ್ 1991 ರಿಂದ 1996 ರವರೆಗೆ ಸಾರಿಗೆ ಸಚಿವರಾಗಿದ್ದರು.ಆ ಬಳಿಕವೂ ಜಯಲಲಿತಾ ಅವರ ಸಂಪುಟದಲ್ಲಿ ವಿಶ್ವಾಸಾರ್ಹ ಸಚಿವರಾಗಿದ್ದರು. ಆದರೆ ರಾಜಕೀಯ ಹೊಡೆತ ಎಂಬಂತೆ 2012 ರಲ್ಲಿ ಸೆಂಗೊಟ್ಟೈಯನ್ ಅವರ ಪಿ.ಎ, ನಟಿಯರಾದ ಭಾನುಪ್ರಿಯಾ ಮತ್ತು ಸುಕನ್ಯಾ ಅವರನ್ನೊಳಗೊಂಡಂತೆ ವೈಯಕ್ತಿಕ ಆರೋಪಗಳು ಕೇಳಿ ಬಂದ ಬಳಿಕ, ಜಯಲಲಿತಾ ಅವರು ಸಚಿವ ಸ್ಥಾನ, ಪಕ್ಷದ ಸ್ಥಾನ ಮತ್ತು ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಿದ್ದರು. 2016 ಡಿಸೆಂಬರ್ 5 ರಂದು ಜಯಲಲಿತಾ ಅವರು ನಿಧನ ಹೊಂದುವ ವರೆಗೂ ಸೆಂಗೊಟ್ಟೈಯನ್ ಪಕ್ಷದಿಂದ ದೂರ ಉಳಿದಿದ್ದರು.

Category
ಕರಾವಳಿ ತರಂಗಿಣಿ