ಹಿಮಾಚಲ ಪ್ರದೇಶ : ಕೆಲವೊಂದು ಸರ್ಕಾರಗಳಿಗೆ ರಸ್ತೆ ರಿಪೇರಿ, ಮೂಲ ಸೌಕರ್ಯ ಕಲ್ಪಿಸಲು ದೇವಸ್ಥಾನಗಳ ದುಡ್ಡಿನ ಮೇಲೆ ಕಣ್ಣು ಹೋಗುತ್ತಿರುವುದನ್ನು ಮನಗಂಡಿರುವ ಹೈಕೋರ್ಟ್, ದೇವಸ್ಥಾನಗಳ ದುಡ್ಡನ್ನು ಹೀಗೆಲ್ಲಾ ಖರ್ಚು ಮಾಡುವ ಸರ್ಕಾರಗಳಿಗೆ ಬಿಸಿ ಮುಟ್ಟಿಸಿದೆ. ದೇವಸ್ಥಾನದಲ್ಲಿ ಭಕ್ತರು ನೀಡುವ ದುಡ್ಡು ದೇವರಿಗೆ ಸೇರಿದ್ದು, ಅದು ದೇವಸ್ಥಾನದ ದುಡ್ಡು. ಅದನ್ನು ಸರ್ಕಾರ ಮುಟ್ಟುವಂತಿಲ್ಲ ಎಂದು ಕೋರ್ಟ್ ಸರ್ಕಾರಕ್ಕೆ ತಾಕೀತು ಮಾಡಿದೆ. ಇದಾಗಲೇ ಇದೇ ರೀತಿಯ ತೀರ್ಪನ್ನು ಹಿಂದೆ ತಮಿಳುನಾಡಿನ ಹೈಕೋರ್ಟ್ ನೀಡಿತ್ತು. ಇದೀಗ ಹಿಮಾಚಲ ಪ್ರದೇಶದ ಹೈಕೋರ್ಟ್ ಕೂಡ ಇದೇ ತೀರ್ಪನ್ನು ಹೊರಡಿಸಿದ್ದು, ಇದೀಗ ಎಲ್ಲಾ ರಾಜ್ಯಗಳಿಗೂ ಅನ್ವಯ ಆಗುವ ಸಾಧ್ಯತೆ ಇದೆ. ದೇವಾಲಯಗಳಿಗೆ ದೇಣಿಗೆ ನೀಡುವವರು ದೇವಾಲಯ ಮತ್ತು ಧಾರ್ಮಿಕ ಮನೋಭಾವದಿಂದ ದೇಣಿಗೆ ನೀಡುತ್ತಾರೆ. ಆ ಹಣ ಇರುವುದು ಧಾರ್ಮಿಕ ಉದ್ದೇಶಗಳಿಗಾಗಿ ಅಥವಾ ದೇವಾಲಯ ನಿರ್ವಹಣೆಗೆ ಬಳಸಬಹುದು. ಅವುಗಳನ್ನು ವಾಣಿಜ್ಯಿಕವಾಗಿ ಬಳಸಲಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ. ಹಿಮಾಚಲ ಪ್ರದೇಶದಲ್ಲಿರುವ ಇಂಡಿ ಮೈತ್ರಿಕೂಟದ ಸರ್ಕಾರವು ದೇವಸ್ಥಾನದ ದುಡ್ಡನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿವೆ ಎಂಬ ಆರೋಪವೂ ಇರುವ ಹಿನ್ನೆಲೆಯಲ್ಲಿ, ಈ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಇದನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಈ ಹಿಂದೆ, ದೇವಾಲಯದ ನಿಧಿಯನ್ನು ಬಳಸಿಕೊಂಡು ಮದುವೆ ಮಂಟಪ ನಿರ್ಮಿಸಲು ತಮಿಳುನಾಡಿನ ಸರ್ಕಾರ ಮುಂದಾಗಿತ್ತು. ಆಗಲೂ ಕೋರ್ಟ್ ಇದೇ ಎಚ್ಚರಿಕೆಯನ್ನು ನೀಡಿತ್ತು. ಇದೀಗ ಹಿಮಾಚಲ ಪ್ರದೇಶದ ಹೈಕೋರ್ಟ್ ಕೂಡ ಮತ್ತೊಮ್ಮೆ ಎಚ್ಚರಿಸಿದೆ.
ದೇವಾಲಯದ ನಿಧಿ ದೇವರಿಗೆ ಮಾತ್ರ ಸೇರಿದ್ದು ಮತ್ತು ಸರ್ಕಾರಿ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ವಿವೇಕ್ ಸಿಂಗ್ ಠಾಕೂರ್ ಮತ್ತು ರಾಕೇಶ್ ಕೈಂತ್ಲಾ ಅವರ ವಿಭಾಗೀಯ ಪೀಠವು ಹೇಳಿದೆ. ದೇವಾಲಯಗಳಿಗೆ ದಾನ ಮಾಡುವ ನಿಧಿ ಮತ್ತು ಆಸ್ತಿ ದೇವರಿಗೆ ಸೇರಿದ್ದು, ಆದ್ದರಿಂದ ದೇವರು ಅದರ ನಿಜವಾದ ಮಾಲೀಕ ಎಂದು ಹೇಳಿದೆ. ದೇವಾಲಯಗಳು ಲಾಭ ಗಳಿಸುವ ಸಂಸ್ಥೆಗಳಲ್ಲ ಮತ್ತು ಅವುಗಳ ನಿಧಿಗಳು ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯ್ದೆಯ ವಿವಿಧ ವಿಭಾಗಗಳಲ್ಲಿ ವಿವರಿಸಿರುವ ಶಾಸನಬದ್ಧ ಉದ್ದೇಶಗಳೊಳಗೆ ಇರಬೇಕು ಎಂದು ಕೋರ್ಟ್ ಇದಾಗಲೇ ಹೇಳಿದೆ.