ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ 2025ರ ಮೇ ತಿಂಗಳಿನಲ್ಲಿ ಯುದ್ಧ ಸಂಘರ್ಷ ಆರಂಭಗೊಂಡ ನಂತರ ಭಾರತೀಯ ಸೇನೆಯ ಸ್ಕ್ವಾರ್ಡನ್ ಲೀಡರ್ ಶಿವಾಂಗಿ ಸಿಂಗ್ ಅವರನ್ನು ಸೆರೆಹಿಡಿದಿರುವುದಾಗಿ ಪಾಕಿಸ್ತಾನದ ಹಲವು ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದವು. ಆದರೆ ಇದೀಗ ಪಾಕಿಸ್ತಾನದ ಸುಳ್ಳು ಮತ್ತೊಮ್ಮೆ ಬಟಾಬಯಲಾಗಿದೆ! ಆಪರೇಶನ್ ಸಿಂದೂರ ಕಾರ್ಯಾಚರಣೆ ವೇಳೆ ಯುದ್ಧ ವಿಮಾನವನ್ನು ಹೊಡೆದುರುಳಿಸಿ, ಸ್ಕ್ವಾರ್ಡನ್ ಲೀಡರ್ ಶಿವಾಂಗಿ ಸಿಂಗ್ ಅವರನ್ನು ಸೆರೆಹಿಡಿದಿದ್ದು, ನಮ್ಮ ಯುದ್ಧ ಕೈದಿಯಾಗಿರುವುದಾಗಿ ಪಾಕಿಸ್ತಾನದ ಮಾಧ್ಯಮಗಳು ಸುಳ್ಳು ವರದಿಯನ್ನು ಮಾಡಿದ್ದವು. ವಾರಾಣಸಿ ಮೂಲದ ಐಎಎಫ್ ಅಧಿಕಾರಿ ಶಿವಾಂಗಿ ಸಿಂಗ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜತೆ ಹರ್ಯಾಣದ ಅಂಬಾಲಾ ಏರ್ ಫೋರ್ಸ್ ನೆಲೆಯಲ್ಲಿ ರಫೇಲ್ ಯುದ್ಧ ವಿಮಾನ ಹಾರಾಟದ ವೇಳೆ ಕಾಣಿಸಿಕೊಳ್ಳುವ ಮೂಲಕ ಪಾಕಿಸ್ತಾನದ ಸುಳ್ಳು ಮತ್ತೊಮ್ಮೆ ಬಟಾಬಯಲಾಗಿದೆ ಎಂದು ವರದಿ ತಿಳಿಸಿದೆ.
ಅಂಬಾಲಾ ಏರ್ ಫೋರ್ಸ್ ನೆಲೆಯಲ್ಲಿ ರಫೇಲ್ ಯುದ್ಧ ವಿಮಾನದ ಮೆಟ್ಟಿಲ ಮೇಲೆ ಐಎಎಫ್ ಅಧಿಕಾರಿ ಶಿವಾಂಗಿ ಸಿಂಗ್ ಅವರು ಸೇನಾ ಸಮವಸ್ತ್ರ ಧರಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜತೆ ನಗು, ನಗುತ್ತಾ ನಿಂತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಪಾಕಿಸ್ತಾನದ ಸುಳ್ಳು ಜಗಜ್ಜಾಹೀರಾಗಿದೆ. ಐಎಎನ್ ಎಸ್ ವರದಿ ಪ್ರಕಾರ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಮುಂದುವರಿದ ವೇಳೆಯಲ್ಲಿ ಪಾಕಿಸ್ತಾನದ ಮೂಲದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಲಾಗುತ್ತಿತ್ತು. ಆ ಸಂದರ್ಭದಲ್ಲಿ ಪಾಕ್ ನ ವಿವಿಧ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣದಲ್ಲಿ ಭಾರತದ ಐಎಎಫ್ ಅಧಿಕಾರಿ ಶಿವಾಂಗಿಯನ್ನು ಪಾಕ್ ಸೇನೆ ಬಂಧಿಸಿರುವ ನಕಲಿ ಫೋಟೋಗಳನ್ನು ಹಂಚಿಕೊಂಡಿತ್ತು. ಅಲ್ಲದೇ ಗಲ್ಫ್ ಮೂಲದ ಟಿವಿ ಚಾನೆಲ್ ಗಳು ಕೂಡಾ ಈ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದವು.