image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಬಿಜೆಪಿಗೆ ಸೀಟು ಹಂಚಿಕೆ ಸಂಕಷ್ಟ ತಂದಿಟ್ಟ ಚಿರಾಗ್ : 40 ಸ್ಥಾನಗಳಿಗೆ ಪಟ್ಟು!

ಬಿಜೆಪಿಗೆ ಸೀಟು ಹಂಚಿಕೆ ಸಂಕಷ್ಟ ತಂದಿಟ್ಟ ಚಿರಾಗ್ : 40 ಸ್ಥಾನಗಳಿಗೆ ಪಟ್ಟು!

ಬಿಹಾರ : ಬಿಹಾರದಲ್ಲಿ ವಿಧಾನಸಭಾ ಚುನಾವಣ ರಣಕಣ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಸದ್ಯ ಪ್ರಮುಖ ಪಕ್ಷಗಳಿಗೆ ಅಭ್ಯರ್ಥಿ ಆಯ್ಕೆ ಮಾತ್ರವಲ್ಲದೆ ಸೀಟು ಹಂಚಿಕೆ ದೊಡ್ಡ ತಲೆನೋವು ತಂದಿಟ್ಟಿದೆ. ಮುಖ್ಯವಾಗಿ ಆಡಳಿತದಲ್ಲಿರುವ ಎನ್ ಡಿಎ ಮೈತ್ರಿಕೂಟಕ್ಕೆ ಸಮರ್ಥ ಅಭ್ಯರ್ಥಿಗಳ ಕೊರತೆ ಇಲ್ಲದಿದ್ದರೂ ಅನಿವಾರ್ಯ ಮಿತ್ರ ಪಕ್ಷಗಳ ಬೇಡಿಕೆ ಈಡೇರಿಸುವುದು ಬಿಸಿತುಪ್ಪವಾಗಿದೆ. ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂದಿರುವ ಯುವ ನಾಯಕ, ಎಲ್ ಜೆಪಿ ನಾಯಕ ಚಿರಾಗ್ ಪಾಸ್ವಾನ್ ಅವರು ಬಿಜೆಪಿ ಬಳಿ ಕನಿಷ್ಠ 40 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದಾರೆ. ಸೀಟು ಹಂಚಿಕೆ ಸಂಕಷ್ಟದ ಮಧ್ಯೆ, ಸಂಭಾವ್ಯ ಮೈತ್ರಿಗಾಗಿ ಕೇಂದ್ರ ಸಚಿವ ಪಾಸ್ವಾನ್ ಜನಾಸುರಾಜ್ ಪಕ್ಷ ಕಟ್ಟಿ ಸಂಘಟಿಸುತ್ತಿರುವ ಪ್ರಶಾಂತ್ ಕಿಶೋರ್ ಅವರಿಗೆ ಸಂದೇಶವನ್ನೂ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.ಇದು ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಪಾಟ್ನಾದಲ್ಲಿ ಎನ್‌ಡಿಎ ಮಿತ್ರಪಕ್ಷಗಳ ಪ್ರಮುಖ ಸಭೆಯ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಸೀಟು ಹಂಚಿಕೆ ಬಿಕ್ಕಟ್ಟನ್ನು ಪರಿಹರಿಸಲು ಪಾಸ್ವಾನ್ ಅವರನ್ನು ಸಮಾಧಾನಪಡಿಸಲು ಬಿಜೆಪಿ ಪ್ರಯತ್ನ ಜಾರಿಯಲ್ಲಿರಿಸಿದೆ. ಸೀಟು ಹಂಚಿಕೆ ಕುರಿತು ಮೊದಲ ಸುತ್ತಿನ ಮಾತುಕತೆ ಈಗಾಗಲೇ ಪೂರ್ಣಗೊಂಡಿದ್ದು, 243 ಸ್ಥಾನಗಳ ಪೈಕಿ ಸಿಎಂ ನಿತೀಶ್ ಕುಮಾರ್ ನಾಯಕತ್ವದ ಜೆಡಿಯುಗೆ 101-102 ಸ್ಥಾನಗಳನ್ನು, ಬಿಜೆಪಿ 100-101 ಸ್ಥಾನಗಳನ್ನು, ಪಾಸ್ವಾನ್ ಅವರ ಎಲ್ ಜೆಪಿಗೆ 24-25 ಸ್ಥಾನಗಳನ್ನು, ಜತನ್ ರಾಮ್ ಮಾಂಝಿ ಅವರ ಎಚ್‌ಎಎಂ 8-10 ಸ್ಥಾನ ಮತ್ತು ತನ್ನದೇ ಆದ ಮತಬ್ಯಾಂಕ್ ಹೊಂದಿರುವ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಸಮತಾ ಪಕ್ಷಕ್ಕೆ ಸುಮಾರು 7 ಸ್ಥಾನಗಳನ್ನು ನೀಡಲು ತೀರ್ಮಾನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವ ಹುದ್ದೆಯಲ್ಲಿರುವ ಪಾಸ್ವಾನ್ ಮತ್ತು ಮಾಂಝಿ ರಾಜಕೀಯ ಪಟ್ಟು ಬಿಗಿ ಮಾಡಿದ್ದಾರೆ.'ಅಬ್ ಕಿ ಬಾರಿ, ಯುವ ಬಿಹಾರಿ' ಎಂಬ ಘೋಷಣೆಯನ್ನು ಮೊಳಗಿಸಿ ಪ್ರಚಾರಕ್ಕಿಳಿದಿರುವ 42 ರ ಹರೆಯದ ಪಾಸ್ವಾನ್ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ 100% ಸ್ಟ್ರೈಕ್ ರೇಟ್ ಅನ್ನು ಉಲ್ಲೇಖಿಸುತ್ತಿದ್ದಾರೆ. ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಎಲ್ಲಾ ಐದು ಸ್ಥಾನಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಬಿಗಿ ಪಟ್ಟಿನ ಹೊರತಾಗಿಯೂ, ಬಿಜೆಪಿ 24-25 ಸ್ಥಾನಗಳನ್ನು ಬಿಟ್ಟುಕೊಡುವ ಸಾಧ್ಯತೆಯಿಲ್ಲ ಎಂದು ಮೂಲಗಳು ತಿಳಿಸಿವೆ. ನಾನು''ಪ್ರಧಾನಿ ನರೇಂದ್ರ ಮೋದಿಯವರ ಹನುಮಾನ್' ಎಂದು ಕರೆದುಕೊಂಡಿದ್ದ ಪಾಸ್ವಾನ್ ಅವರ ಅಸಮಾಧಾನಕ್ಕೂ ಕಾರಣವಾಗಿದೆ. ಇನ್ನೊಂದೆಡೆ ಪಕ್ಷದೊಳಗಿನ ನಾಯಕರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸಚಿವ ಸ್ಥಾನದಲ್ಲೇ ಮುಂದುವರಿಯಲು ಬಿಜೆಪಿ ಉನ್ನತ ನಾಯಕತ್ವ ಪಾಸ್ವಾನ್ ಅವರಿಗೆ ಸೂಚನೆ ನೀಡಿರುವುದೂ ಮತ್ತೊಂದು ರೀತಿಯ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

Category
ಕರಾವಳಿ ತರಂಗಿಣಿ