image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮುಂಬೈಗೆ ಬಂದಿಳಿದ ಯುಕೆ ಪ್ರಧಾನಿ ಕೀರ್​ ಸ್ಟಾರ್ಮರ್​: ಮಹಾರಾಷ್ಟ್ರ ಸರ್ಕಾರದಿಂದ ಸ್ವಾಗತ

ಮುಂಬೈಗೆ ಬಂದಿಳಿದ ಯುಕೆ ಪ್ರಧಾನಿ ಕೀರ್​ ಸ್ಟಾರ್ಮರ್​: ಮಹಾರಾಷ್ಟ್ರ ಸರ್ಕಾರದಿಂದ ಸ್ವಾಗತ

ಮುಂಬೈ: ಇದೇ ಮೊದಲ ಬಾರಿಗೆ ಭಾರತಕ್ಕೆ ಬ್ರಿಟನ್​ ಪ್ರಧಾನಿ ಕೀರ್ ಸ್ಟಾರ್ಮರ್ ಆಗಮಿಸಿದ್ದಾರೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್​, ಡಿಸಿಎಂಗಳಾದ ಏಕನಾಥ್​ ಶಿಂಧೆ, ಅಜಿತ್​ ಪವಾರ್​ ಹಾಗು ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಆತ್ಮೀಯ ಸ್ವಾಗತ ಕೋರಿದರು. ಇದು ಯುಕೆ ಪ್ರಧಾನಿ ಸ್ಟಾಮರ್ಟ್​ ಅವರ ಭಾರತದ ಮೊದಲ ಅಧಿಕೃತ ಭೇಟಿಯಾಗಿದ್ದು, ಅವರು ನಾಳೆ ಅಂದರೆ, ಅಕ್ಟೋಬರ್​ 9ರಂದು ಮುಂಬೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಈ ಭೇಟಿಯಲ್ಲಿ 'ವಿಷನ್ 2035'ಗೆ ಅನುಗುಣವಾಗಿ ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ವಿವಿಧ ಅಂಶಗಳಲ್ಲಿನ ಪ್ರಗತಿ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಹಾಗೇ ಪ್ರಾದೇಶಿಕ ಹಾಗೂ ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ನಗರದಲ್ಲಿ ನಡೆಯಲಿರುವ ಸಿಇಒ ವೇದಿಕೆ ಮತ್ತು 6ನೇ ಆವೃತ್ತಿಯ ಗ್ಲೋಬಲ್ ಫಿನ್‌ಟೆಕ್ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಸ್ಟಾರ್ಮರ್​ ಎರಡು ದಿನದ ಭೇಟಿಯಲ್ಲಿ ಉಭಯ ನಾಯಕರು ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಂಬಂಧಗಳು ಸೇರಿದಂತೆ ದ್ವಿಪಕ್ಷೀಯ ಪಾಲುದಾರಿಕೆಯ ಬಗ್ಗೆ ಚರ್ಚಿಸಲಿದ್ದಾರೆ. ಜುಲೈನಲ್ಲಿ ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಕುರಿತು ಚರ್ಚಿಸಲಿದ್ದಾರೆ. ಕಳೆದ ಜುಲೈನಲ್ಲಿ ಪ್ರಧಾನಿ ಮೋದಿ ಯುಕೆಗೆ ಭೇಟಿ ನೀಡಿದ್ದರು. ಈ ಯಶಸ್ವಿ ಭೇಟಿ ಹಿನ್ನೆಲೆ ಇದೀಗ ಯುಕೆ ಪ್ರಧಾನಿ ಆಗಮಿಸಿದ್ದು, ಇದು ಭಾರತ ಮತ್ತು ಯುಕೆ ನಡುವೆ ಭವಿಷ್ಯದ ಪಾಲುದಾರಿಕೆಯನ್ನು ನಿರ್ಮಿಸುವ ಹಂಚಿಕೆಯ ದೃಷ್ಟಿಕೋನವನ್ನು ಪುನರುಚ್ಚರಿಸಲು ಅವಕಾಶ ನೀಡಲಿದೆ.

ಯುಕೆ ಸರ್ಕಾರದ ಪ್ರಕಟಣೆ ಪ್ರಕಾರ ಸ್ಟಾರ್ಮರ್ ಜೊತೆಗೆ ಯುಕೆಯ 125 ಪ್ರಮುಖ ಸಿಇಒಗಳು, ಪ್ರಮುಖ ಉದ್ಯಮಿಗಳು, ವಿಶ್ವವಿದ್ಯಾಲಯದ ಉಪಕುಲಪತಿಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಪ್ರತಿನಿಧಿಗಳು ಭಾರತಕ್ಕೆ ಆಗಮಿಸಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಬೆಳವಣಿಗೆ ಮತ್ತು ವಿಸ್ತರಿಸಲು ಅವಕಾಶಗಳನ್ನು ಪಡೆದುಕೊಳ್ಳುವ ಭರವಸೆಯನ್ನು ನಿಯೋಗ ವ್ಯಕ್ತಪಡಿಸಿದೆ. ರೋಲ್ಸ್ ರಾಯ್ಸ್, ಬ್ರಿಟಿಷ್ ಟೆಲಿಕಾಂ, ಡಿಯಾಜಿಯೊ, ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಮತ್ತು ಬ್ರಿಟಿಷ್ ಏರ್ವೇಸ್ ಪ್ರಮುಖ ಸಂಸ್ಥೆಗಳ ಪ್ರತಿನಿಧಿಗಳು ನಿಯೋಗದಲ್ಲಿದ್ದಾರೆ. ಮೋದಿ ಮತ್ತು ಸ್ಟಾರ್ಮರ್ ಗುರುವಾರ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿರುವ ಸಿಇಒ ಫೋರಂನಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಇಬ್ಬರು ನಾಯಕರು 6ನೇ ಆವೃತ್ತಿಯ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಭಾಗವಹಿಸಲಿದ್ದಾರೆ.

Category
ಕರಾವಳಿ ತರಂಗಿಣಿ