ನವದೆಹಲಿ: ದೇಶದಲ್ಲಿ ಕ್ಷಯ ರೋಗ (ಟಿಬಿ) ನಿರ್ಮೂಲನೆ ಮಾಡುವ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಹೊಸ ರೋಗನಿರ್ಣಯ ಸಾಧನಗಳಿಗೆ ದೇಶದ ಉನ್ನತ ಆರೋಗ್ಯ ಸಂಶೋಧನಾ ಸಂಸ್ಥೆಯಾದ ಐಸಿಎಂಆರ್ (ICMR) ಅನುಮೋದನೆ ನೀಡಿದೆ. ಈ ಉಪಕರಣಗಳು ವೇಗವಾಗಿ ರೋಗ ಪತ್ತೆ ಮಾಡುವ ಸಾಮರ್ಥ್ಯದ ಜೊತೆಗೆ ಅಗ್ಗವೂ ಆಗಿವೆ ಎಂಬುದು ವಿಶೇಷ. ಸಮುದಾಯದಲ್ಲಿ ಟಿಬಿ ಹರಡುವುದನ್ನು ತಡೆಯಲು ಮತ್ತು ರೋಗಿಗಳಿಗೆ ಚಿಕಿತ್ಸೆ ಒದಗಿಸುವುದು ಮುಖ್ಯ. ಹೀಗಾಗಿ, ಕ್ಷಯ ರೋಗವನ್ನು ಶೀಘ್ರವಾಗಿ, ನಿಖರವಾಗಿ ಪತ್ತೆ ಮಾಡುವುದು ಅತ್ಯಂತ ನಿರ್ಣಾಯಕ ಅಂಶವಾಗಿದ್ದು, ಈ ಕಿಟ್ಗಳು ನೆರವಾಗಲಿವೆ ಎಂದು ಅಂದಾಜಿಸಲಾಗಿದೆ. ಐಸಿಎಂಆರ್ ನೀಡಿದ ಮಾಹಿತಿಯ ಪ್ರಕಾರ, ಇತ್ತೀಚೆಗೆ ತಾನು ಅನುಮೋದಿಸಿದ ಸಾಧನವಾದ ಕ್ವಾಂಟಿಪ್ಲಸ್ ಎಂಬಿಟಿ ಫಾಸ್ಟ್ ಡಿಟೆಕ್ಷನ್ ಕಿಟ್ ತೆಲಂಗಾಣದ ಹುವೆಲ್ ಲೈಫ್‌ಸೈನ್ಸಸ್ ಅಭಿವೃದ್ಧಿಪಡಿಸಿದೆ. ಇದು ಶ್ವಾಸಕೋಶ ಟಿಬಿ ಪತ್ತೆ ಮಾಡುವ ಮೊದಲ ಓಪನ್ ಸಿಸ್ಟಮ್ ಆರ್ಟಿ-ಪಿಸಿಆರ್ ಪರೀಕ್ಷೆಯಾಗಿದೆ. ಇದು ಸದ್ಯ ಅಸ್ತಿತ್ವದಲ್ಲಿರುವ ಯಾವುದೇ ಪಿಸಿಆರ್ (PCR) ಯಂತ್ರದ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದೆ. ಕ್ವಾಂಟಿಪ್ಲಸ್ ಸಾಧನವು ಏಕಕಾಲದಲ್ಲಿ 96 ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯ ಹೊಂದಿದೆ. ಇದರ ಮೂಲಕ ವಯಸ್ಕರಲ್ಲಿ ಕಫದ ಮಾದರಿಗಳ ಮೂಲಕ ಟಿಬಿ ಪತ್ತೆ ಮಾಡಬಹುದು. ಈ ಉತ್ಪನ್ನವು, ರೋಗನಿರ್ಣಯಿಸುವ ಸಾಮರ್ಥ್ಯ ಹೆಚ್ಚಳ ಜೊತೆಗೆ ವೆಚ್ಚವೂ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಟಿಬಿ ಪರೀಕ್ಷೆಯ ವೆಚ್ಚವನ್ನು ಇದು ಐದನೇ ಒಂದು ಭಾಗದಷ್ಟು ಕಡಿಮೆ ಮಾಡಬಹುದು ಎಂದು ಮೂಲಗಳು ತಿಳಿಸಿವೆ. ಐಸಿಎಂಆರ್ ಅನುಮೋದಿಸಿದ ಮತ್ತೊಂದು ಕಿಟ್ ಎಂದರೆ, ಯುನಿಎಎಮ್‌ಪಿ ಎಂಬಿಟಿ ನ್ಯೂಕ್ಲಿಯಿಕ್ ಆ್ಯಸಿಡ್ ಟೆಸ್ಟ್ ಕಾರ್ಡ್. ಇದನ್ನೂ ಸಹ ಹುವೆಲ್ ಲೈಫ್‌ಸೈನ್ಸಸ್ ತಯಾರಿಸಿದೆ. ಅಧಿಕೃತ ಮೂಲದ ಪ್ರಕಾರ, ಈ ಸಾಧನವು ರೋಗಿ ಸ್ನೇಹಿ ರೋಗನಿರ್ಣಾಯಕ ಕಿಟ್ ಆಗಿದೆ. ಮಕ್ಕಳು ಮತ್ತು ವೃದ್ಧರಿಗೆ ಕಷ್ಟಕರವಾದ ಕಫದ ಮಾದರಿಗಳ ಬದಲಿಗೆ, ನಾಲಿಗೆ ಸ್ವ್ಯಾಬ್‌ಗಳನ್ನು ಬಳಸಿಕೊಂಡು ರೋಗವನ್ನು ನಿರ್ಧರಿಸಬಹುದಾಗಿದೆ.