image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಡಾರ್ಜಿಲಿಂಗ್​ ಧಾರಾಕಾರ ಮಳೆ: ಗುಡ್ಡ ಮತ್ತು ಸೇತುವೆ ಕುಸಿದು 15 ಮಂದಿ ಮೃತ

ಡಾರ್ಜಿಲಿಂಗ್​ ಧಾರಾಕಾರ ಮಳೆ: ಗುಡ್ಡ ಮತ್ತು ಸೇತುವೆ ಕುಸಿದು 15 ಮಂದಿ ಮೃತ

ಡಾರ್ಜಿಲಿಂಗ್​ : ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಉತ್ತರ ಬಂಗಾಳದಲ್ಲಿ ಅವಾಂತರ ಸೃಷ್ಟಿಸಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲಾಡಳಿತವು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದೆ. ಭೂಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ 10 ರಲ್ಲಿ ಸಂಚಾರ ಸ್ಥಗಿತಗೊಂಡಿದೆ. ಡಾರ್ಜಿಲಿಂಗ್ ಜಿಲ್ಲಾಡಳಿತದ ಪ್ರಕಾರ, ಮಿರಿಯಲ್ಲಿ ಕಬ್ಬಿಣದ ಸೇತುವೆ ಕುಸಿದು ಬಿದ್ದು ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಸುಖಿಯಾದಲ್ಲಿ ಭೂಕುಸಿತದಿಂದಾಗಿ ನಾಲ್ವರು ಮೃತಪಟ್ಟಿದ್ದು, ಭೂಕುಸಿತ ಮುಂದುವರೆದಿದೆ. ಜಿಲ್ಲಾಡಳಿತವು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದೆ. ಈ ಕುರಿತು ಕುರ್ಸಿಯೊಂಗ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ರಾಯ್ ಮಾತನಾಡಿ, ಮಿರಿಕ್‌ನಲ್ಲಿ ಸಂಭವಿಸಿದ ಭೂಕುಸಿತದಿಂದ ಸಾವನ್ನಪ್ಪಿದ ಐವರ ಮೃತದೇಹವನ್ನು ಹೊರತೆಗೆಯಲಾಗಿದೆ. ಬೆಳಗ್ಗೆ ಇನ್ನೆರಡು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸುಖಿಯಾದಲ್ಲಿ ನಾಲ್ಕು ಸಾವುಗಳು ವರದಿಯಾಗಿವೆ. ಹವಾಮಾನ ವೈಪರೀತ್ಯದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಸದ್ಯ ಮಳೆ ಕಡಿಮೆಯಾಗಿದ್ದು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಸಿಲಿಗುರಿಯಿಂದ ಡಾರ್ಜಿಲಿಂಗ್‌ಗೆ ಮತ್ತು ಡಾರ್ಜಿಲಿಂಗ್​ನಿಂದ ರೋಹಿಣಿಗೆ ಸಂಪರ್ಕಿಸುವ ರಸ್ತೆಯಲ್ಲಿ ಭೂಕುಸಿತ ಸಂಭವಿಸಿರುವುದರಿಂದ ಹಲವಾರು ಸ್ಥಳಗಳಿಗೆ ಸಂಪರ್ಕ ಕಡಿತಗೊಂಡಿದೆ. ದಿಲಾರಾಮ್‌ಗೆ ಸಂರ್ಪರ್ಕಿಸುವ ರಸ್ತೆಯೂ ಬಂದ್​ ಆಗಿದೆ. ಮಿರಿಕ್‌ನಲ್ಲಿ ಭೂಕುಸಿತ ಭಯಾನಕವಾಗಿದೆ. ಅಲ್ಲಿಯೂ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ತಿಳಿಸಿದರು.

ಭೂಕುಸಿತದಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಜಿಟಿಎ ಮುಖ್ಯ ಕಾರ್ಯನಿರ್ವಾಹಕ ಅನಿತ್ ಥಾಪಾ ಮಾತನಾಡಿ, ಜಿಟಿಎಯ ವಿಪತ್ತು ಇಲಾಖೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಅಪಾಯದಲ್ಲಿರುವ ಜನರು ಪಂಚಾಯತ್ ಸದಸ್ಯರು, ಜಿಟಿಎ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ನಾವು ಕೇಳಿಕೊಂಡಿದ್ದೇವೆ. ಭೂಕುಸಿತದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಕ್ಕಳು ಮತ್ತು ಮಹಿಳೆಯರನ್ನು ಸುರಕ್ಷಿತವಾಗಿರಿಸಲು ನಮಗೆ ಆದೇಶಿಸಲಾಗಿದೆ. ಮಿರಿಕ್‌ನ ಬಿಡಿಒ, ಎಸ್‌ಡಿಒ, ಪುರಸಭೆ ಮತ್ತು ಇತರರು ಕ್ಷೇತ್ರದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಸೇವಕ್ ಬಳಿಯ ರಾಷ್ಟ್ರೀಯ ಹೆದ್ದಾರಿ 10 ರಲ್ಲಿ ಮರಗಳು ಬಿದ್ದು ಸಂಚಾರಕ್ಕೆ ಅಡ್ಡಿಯಾಯಿತು. ನಂತರ, ನಿರಂತರ ಮಳೆಯಿಂದಾಗಿ ವಿವಿಧ ಸ್ಥಳಗಳಲ್ಲಿ ಭೂಕುಸಿತ ಉಂಟಾಗಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಬಂದ್​ ಆಗಿದೆ. ದುಡಿಯಾದಲ್ಲಿನ ಕಬ್ಬಿಣದ ಸೇತುವೆ ಕುಸಿದ ನಂತರ ಸಿಲಿಗುರಿ ಮತ್ತು ಮಿರಿಕ್ ನಡುವಿನ ನೇರ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸಿಲಿಗುರಿ-ಡಾರ್ಜಿಲಿಂಗ್ ರಸ್ತೆಯ ದಿಲಾರಾಮ್ ಬಳಿ ಭೂಕುಸಿತ ಸಂಭವಿಸಿದೆ. ಪುಲ್ಬಜಾರ್ ಸೇತುವೆಗೂ ಹಾನಿಯಾಗಿದ್ದು, ಬಿಜನ್‌ಬರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳೊಂದಿಗಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ನಿರಂತರ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಪದೇ ಪದೇ ಅಡ್ಡಿಯಾಗುತ್ತಿದೆ. ಇದರ ಜೊತೆಗೆ, ತೀಸ್ತಾ ನದಿಯ ನೀರಿನ ಮಟ್ಟ ಸಹ ಹೆಚ್ಚಾಗಿದೆ. ಗೂರ್ಖಾಲ್ಯಾಂಡ್ ಸ್ಥಳೀಯ ಆಡಳಿತವು ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಡಾರ್ಜಿಲಿಂಗ್‌ನಲ್ಲಿರುವ ಟೈಗರ್ ಹಿಲ್, ರಾಕ್ ಗಾರ್ಡನ್ ಮತ್ತು ಇತರ ಪ್ರವಾಸಿ ತಾಣಗಳ ಭೇಟಿ ನಿರ್ಬಂಧ ಹೇರಿದೆ. ಮುಂದಿನ ಸೂಚನೆವರೆಗೆ ಪ್ರವಾಸಿಗರು ಈ ಸ್ಥಳಗಳಿಗೆ ಅನಗತ್ಯವಾಗಿ ಭೇಟಿ ನೀಡದಂತೆ ಸೂಚಿಸಲಾಗಿದೆ.

Category
ಕರಾವಳಿ ತರಂಗಿಣಿ