ನವದೆಹಲಿ: ಅಕ್ಟೋಬರ್ ತಿಂಗಳಾಂತ್ಯದ ವೇಳೆಗೆ ಭಾರತ ಮತ್ತು ಚೀನಾದ ನಡುವೆ ನೇರ ವಿಮಾನಯಾನ ಸೇವೆ ಪುನರಾರಂಭವಾಗಲಿವೆ. ಭಾರತ ಮತ್ತು ಚೀನಾದಲ್ಲಿ ಗೊತ್ತುಪಡಿಸಿದ ನಗರಗಳಿಂದ ನೇರ ವಿಮಾನಯಾನ ಸೇವೆಗಳು ಈ ತಿಂಗಳ ಕೊನೆಯಲ್ಲಿ ಪುನರಾರಂಭವಾಗಲಿವೆ ಎಂದು ವಿದೇಶಾಂಗ ಸಚಿವಾಲಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. "ಈ ವರ್ಷದ ಆರಂಭದಿಂದಲೂ ಚೀನಾ ನಡುವಿನ ಸಂಬಂಧ ಬಲಗೊಳಿಸಲು ಸರ್ಕಾರ ಕೈಗೊಂಡಿರುವ ಕ್ರಮದ ಭಾಗವಾಗಿ, ಎರಡೂ ದೇಶಗಳ ನಾಗರಿಕ ವಿಮಾನಯಾನ ಅಧಿಕಾರಿಗಳು ನೇರ ವಿಮಾನಯಾನ ಸೇವೆಗಳನ್ನು ಪುನರಾರಂಭಿಸುವ ಬಗ್ಗೆ ಮತ್ತು ಪರಿಷ್ಕೃತ ವಾಯು ಸೇವೆಗಳ ಒಪ್ಪಂದದ ಕುರಿತು ತಾಂತ್ರಿಕ ಮಟ್ಟದ ಚರ್ಚೆಗಳಲ್ಲಿ ತೊಡಗಿದ್ದಾರೆ. ನಾಗರಿಕ ವಿಮಾನಯಾನ ಅಧಿಕಾರಿಗಳ ಈ ಒಪ್ಪಂದವು ಭಾರತ ಮತ್ತು ಚೀನಾದ ಜನರ ಪ್ರಯಾಣವನ್ನು ಸುಗಮಗೊಳಿಸುತ್ತದೆ ಮತ್ತು ದ್ವಿಪಕ್ಷೀಯ ವಿನಿಮಯವನ್ನು ಕ್ರಮೇಣ ಸುಸ್ಥಿತಿಗೆ ತರಲು ಕೊಡುಗೆ ನೀಡುತ್ತದೆ ಎಂದು ಪ್ರಕಟಣೆ ಮಾಹಿತಿ ನೀಡಿದೆ.
ವಿಮಾನಯಾನ ಸಂಸ್ಥೆ ಇಂಡಿಗೋ ಕೋಲ್ಕತ್ತಾದಿಂದ ಚೀನಾದ ಗುವಾಂಗ್‌ಝೌಗೆ ಅಕ್ಟೋಬರ್ 26ರಿಂದ ನೇರ ವಿಮಾನಯಾನ ಸೇವೆಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ. "ಭಾರತ ಮತ್ತು ಚೀನಾದ ನಡುವೆ ದೈನಂದಿನ, ತಡೆರಹಿತ ವಿಮಾನ ಸೇವೆ ಪುನರಾರಂಭವನ್ನು ಘೋಷಿಸಲು ನಮಗೆ ಸಂತಸವಾಗುತ್ತಿದೆ. ಭಾರತದ ಎರಡು ನಗರಗಳಿಂದ ಚೀನಾಕ್ಕೆ ನೇರ ವಿಮಾನಯಾನ ಸೇವೆ ಪುನರಾರಂಭಿಸಿದ ಮೊದಲಿಗರಲ್ಲಿ ನಾವೂ ಒಬ್ಬರಾಗಿದ್ದೇವೆ ಎಂದು ಹೇಳಲು ಹೆಮ್ಮೆಪಡುತ್ತೇವೆ. ಈ ಪ್ರಮುಖ ಹೆಜ್ಜೆಯೊಂದಿಗೆ, ಚೀನಾಕ್ಕೆ ಹೆಚ್ಚಿನ ನೇರ ವಿಮಾನಗಳನ್ನು ಪರಿಚಯಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ತಿಳಿಸಿದ್ದಾರೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಈ ವರ್ಷದ ಆಗಸ್ಟ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯ ಸಮಯದಲ್ಲಿ, ನೇರ ವಿಮಾನ ಸಂಪರ್ಕವನ್ನು ಆದಷ್ಟು ಬೇಗ ಪುನರಾರಂಭಿಸಲು ಮತ್ತು ನವೀಕರಿಸಿದ ವಾಯು ಸೇವೆಗಳ ಒಪ್ಪಂದವನ್ನು ಅಂತಿಮಗೊಳಿಸಲು ಒಪ್ಪಿಕೊಂಡಿದ್ದರು. ಪ್ರವಾಸಿಗರು, ವ್ಯವಹಾರಗಳು, ಮಾಧ್ಯಮ ಮತ್ತು ಇತರ ಸಂದರ್ಶಕರಿಗೆ ಎರಡೂ ಕಡೆ ವೀಸಾ ಸೌಲಭ್ಯ ಕಲ್ಪಿಸುವ ಬಗ್ಗೆಯೂ ಅವರು ಒಪ್ಪಿಗೆ ಸೂಚಿಸಿದ್ದರು.