image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಆರ್ಥಿಕತೆಯು ಬಲಗೊಂಡಂತೆ ತೆರಿಗೆ ಹೊರೆ ಮತ್ತಷ್ಟು ತಗ್ಗಲಿದೆ: ಪ್ರಧಾನಿ ಮೋದಿ

ಆರ್ಥಿಕತೆಯು ಬಲಗೊಂಡಂತೆ ತೆರಿಗೆ ಹೊರೆ ಮತ್ತಷ್ಟು ತಗ್ಗಲಿದೆ: ಪ್ರಧಾನಿ ಮೋದಿ

ನೋಯಿಡಾ: ಭಾರತದ ಆರ್ಥಿಕತೆಯು ಹೆಚ್ಚು ಬಲಗೊಂಡಂತೆ ಜನರ ಮೇಲಿನ ತೆರಿಗೆ ಹೊರೆ ಮತ್ತಷ್ಟು ಕಡಿಮೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಜಿಎಸ್‌ಟಿ ಸುಧಾರಣೆ ನಿರಂತರ ಪ್ರಕ್ರಿಯೆ ಎಂದು ಪ್ರತಿಪಾದಿಸಿದ್ದಾರೆ. ಇಲ್ಲಿ ಯುಪಿ ಅಂತರರಾಷ್ಟ್ರೀಯ ವ್ಯಾಪಾರ ಪ್ರದರ್ಶನ (ಯುಪಿಐಟಿಎಸ್) ಉದ್ಘಾಟಿಸಿದ ನಂತರ ಮಾತನಾಡಿದ ಮೋದಿ, ಜಿಎಸ್‌ಟಿಯಲ್ಲಿನ ಇತ್ತೀಚಿನ ರಚನಾತ್ಮಕ ಸುಧಾರಣೆಗಳು ಭಾರತದ ಬೆಳವಣಿಗೆಗೆ ಹೊಸ ರೆಕ್ಕೆಗಳನ್ನು ನೀಡಲಿವೆ. ಜನರಿಗೆ ಹೆಚ್ಚಿನ ಉಳಿತಾಯಕ್ಕೆ ನೆರವಾಗುತ್ತವೆ ಎಂದು ಹೇಳಿದ್ದಾರೆ. 2017ರಲ್ಲಿ ಜಿಎಸ್‌ಟಿಯನ್ನು ಜಾರಿಗೆ ತರುವ ಮೂಲಕ ಸರ್ಕಾರವು ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಪರಿಚಯಿಸಿತ್ತು. ಇದು ಆರ್ಥಿಕತೆಯನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದ್ದು, ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮತ್ತಷ್ಟು ಸುಧಾರಣೆಗಳನ್ನು ಅನುಸರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

'ಜಿಎಸ್‌ಟಿ ಪರಿಷ್ಕರಣೆಯನ್ನು ನಾವು ಇಲ್ಲಿಗೇ ಸ್ಥಗಿತಗೊಳಿಸುವುದಿಲ್ಲ. ಆರ್ಥಿಕತೆ ಬಲಗೊಳ್ಳುತ್ತಾ ಹೋದಂತೆ ತೆರಿಗೆ ಹೊರೆಯು ಕಡಿತವಾಗುತ್ತಾ ಹೋಗುತ್ತದೆ. ದೇಶದ ಜನರ ಆಶೀರ್ವಾದದೊಂದಿಗೆ ಜಿಎಸ್‌ಟಿ ಪರಿಷ್ಕರಣೆಯು ಮುಂದುವರಿಯುತ್ತದೆ' ಎಂದಿದ್ದಾರೆ. ₹12 ಲಕ್ಷದವರಗೆ ಆದಾಯ ತೆರಿಗೆ ವಿನಾಯಿತಿ ಮತ್ತು ಜಿಎಸ್‌ಟಿ 2.0 ಸುಧಾರಣೆಯನ್ನು ಒತ್ತಿ ಹೇಳಿದ ಅವರು, ಇದು ಜನರಿಗೆ ಹೆಚ್ಚು ಉಳಿತಾಯ ಮಾಡಲು ನೆರವಾಗಿದೆ ಎಂದಿದ್ದಾರೆ. ದೇಶವು ಒಂದು ಚೈತನ್ಯಶೀಲ ರಕ್ಷಣಾ ವಲಯವನ್ನು ಅಭಿವೃದ್ಧಿಪಡಿಸುತ್ತಿದೆ. ಪ್ರತಿಯೊಂದು ಬಿಡಿಭಾಗವನ್ನೂದೇಶದಲ್ಲೇ ಉತ್ಪಾದಿಸುವ ಸುವ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಯತ್ನ ನಡೆಯುತ್ತಿದೆ ಎಂದು ಮೋದಿ ಹೇಳಿದ್ದಾರೆ. ರಷ್ಯಾದ ಸಹಯೋಗದೊಂದಿಗೆ ಉತ್ತರ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಕಾರ್ಖಾನೆಯಲ್ಲಿ AK-203 ರೈಫಲ್‌ಗಳ ಉತ್ಪಾದನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಭಾರತವು ಸ್ವಾವಲಂಬಿಯಾಗಬೇಕು ಎಂದು ಒತ್ತಿ ಹೇಳಿದ ಮೋದಿ, ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಹೆಚ್ಚಿನ ಹೂಡಿಕೆಗೆ ಕರೆ ನೀಡಿದರು. ನಾವು ಸಾಧ್ಯವಿರುವ ಪ್ರತಿಯೊಂದು ಉತ್ಪನ್ನವನ್ನೂ ಭಾರತದಲ್ಲಿ ತಯಾರಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ. ಭೌಗೋಳಿಕ ರಾಜಕೀಯ ಅಡೆತಡೆಗಳು ಮತ್ತು ಅನಿಶ್ಚಿತತೆಯ ಹೊರತಾಗಿಯೂ, ಭಾರತದಲ್ಲಿ ಬೆಳವಣಿಗೆ ಉತ್ತಮವಾಗಿಯೇ ಇದೆ ಎಂದರು.

Category
ಕರಾವಳಿ ತರಂಗಿಣಿ