ನವದೆಹಲಿ : ಭಾರತದಲ್ಲಿ ಸಾಲಗಳು ಬೆಟ್ಟಗಳಂತೆ ಬೆಳೆಯುತ್ತಿವೆ. ಮಹಾಲೇಖಪಾಲರ (ಸಿಎಜಿ) ವರದಿಯೊಂದರ ಪ್ರಕಾರ, ಭಾರತದ ವಿವಿಧ ರಾಜ್ಯಗಳು ಮಾಡಿರುವ ಸಾಲ ಒಂದು ದಶಕದಲ್ಲಿ ಮೂರು ಪಟ್ಟು ಹೆಚ್ಚಿದೆ. 2022-23ರಲ್ಲಿ 28 ರಾಜ್ಯಗಳಿಂದ ಒಟ್ಟು ಆಗಿರುವ ಸಾಲ 59.60 ಲಕ್ಷ ಕೋಟಿ ರೂ ಎನ್ನಲಾಗಿದೆ. 2013-14ರಲ್ಲಿ ರಾಜ್ಯಗಳ ಒಟ್ಟು ಸಾಲ 17.57 ಲಕ್ಷ ಕೋಟಿ ರೂ ಮಾತ್ರವೇ ಇತ್ತು. ಹತ್ತು ವರ್ಷದಲ್ಲಿ 3.3 ಪಟ್ಟು ಸಾಲ ಹೆಚ್ಚಳ ಆಗಿದೆ. ಭಾರತದ ಒಟ್ಟು ಜಿಡಿಪಿಯ (GDP) ಶೇ. 22.17ರಷ್ಟು ಸಾಲವನ್ನು ರಾಜ್ಯಗಳು ಹೊಂದಿವೆ. ಸಿಎಜಿ ವಿಶ್ಲೇಷಣಾತ್ಮಕ ದತ್ತಾಂಶ ಆಧರಿಸಿ ರಾಷ್ಟ್ರೀಯ ಮಾಧ್ಯಮ ವರದಿ ಮಾಡಿ ಈ ಮಾಹಿತಿ ಪ್ರಸ್ತುತಪಡಿಸಿದೆ. ಆದಾಯಕ್ಕೆ ತಕ್ಕಂತೆ ಸಾಲ ಮಾಡಬೇಕು ಎನ್ನುವ ಅರಿವು ವೈಯಕ್ತಿಕವಾಗಿಯೂ ಅನ್ವಯ ಆಗುತ್ತದೆ, ದೇಶಗಳಿಗೂ ಅನ್ವಯ ಆಗುತ್ತದೆ. ಅಂತೆಯೇ, ಒಂದು ದೇಶದ ಆದಾಯಕ್ಕೆ ಸಂಕೇತವಾಗಿರುವುದು ಜಿಡಿಪಿ. ರಾಜ್ಯಗಳಿಗೆ ಅದು ಜಿಎಸ್ಡಿಪಿ. 2013-14ರಲ್ಲಿ ರಾಜ್ಯಗಳ ಸರಾಸರಿ ಜಿಎಸ್ಡಿಪಿಗೆ ಹೋಲಿಸಿದರೆ ಸಾಲ ಶೇ.16.66 ಇತ್ತು. 2022-23ರಲ್ಲಿ ಇದು ಶೇ. 23ಕ್ಕೆ ಏರಿದೆ. ಈ ಅನುಪಾತ ಅತಿ ಹೆಚ್ಚು ಇರುವುದು ಪಂಜಾಬ್ ರಾಜ್ಯದ್ದು. ಇದರ ಡೆಟ್ ಟು ಜಿಎಸ್ಡಿಪಿ ರೇಶಿಯೋ (Debt to GSDP ratio) ಶೇ. 40.35 ಇದೆ. ನಾಗಾಲ್ಯಾಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ನಂತರದ ಸ್ಥಾನಕ್ಕೆ ಬರುತ್ತವೆ. ಈ ಮೂರು ರಾಜ್ಯಗಳು ಸೇರಿ ಒಟ್ಟು ಎಂಟು ರಾಜ್ಯಗಳು ತಮ್ಮ ಜಿಎಸ್ಡಿಪಿಯ ಶೇ. 30 ಹಾಗೂ ಹೆಚ್ಚಿನ ಸಾಲ ಹೊಂದಿವೆ.
ಒಡಿಶಾ ರಾಜ್ಯ ಅತಿ ಕಡಿಮೆ ಸಾಲ ಅನುಪಾತ ಹೊಂದಿದೆ. ಈ ಕಳಿಂಗ ನಾಡಿನ ಸಾಲ ಶೇ. 8.45 ಮಾತ್ರವೇ ಇರುವುದು. ಅಷ್ಟರ ಮಟ್ಟಿಗೆ ಅದು ಆರ್ಥಿಕ ಶಿಸ್ತು ತೋರಿದೆ. ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳೂ ಕೂಡ ಶೇ. 20ಕ್ಕಿಂತ ಕಡಿಮೆ ಸಾಲ ಅನುಪಾತ ಹೊಂದಿವೆ. ಈ ಶೇ. 20ಕ್ಕಿಂತ ಕಡಿಮೆ ಮಟ್ಟದ ಸಾಲ ಹೊಂದಿರುವ ರಾಜ್ಯಗಳ ಸಂಖ್ಯೆ ಆರು ಇವೆ. ಕರ್ನಾಟಕದ ಸಾಲ ಮತ್ತು ಜಿಎಸ್ಡಿಪಿ ಅನುಪಾತ ಎಷ್ಟು ಎಂಬುದನ್ನು ಈ ವರದಿಯಲ್ಲಿ ನಮೂದಿಸಲಾಗಿಲ್ಲ. ಆದರೆ, ನೀತಿ ಆಯೋಗ್ ಮಾಡಿದ ಅಂದಾಜು ಪ್ರಕಾರ 2022-23ರಲ್ಲಿ ಕರ್ನಾಟಕದ ಸಾಲ ಮತ್ತು ಜಿಡಿಪಿ ಅನುಪಾತ ಶೇ. 23.9 ಇತ್ತು. 2021ರಲ್ಲಿ ಶೇ. 25.68ಕ್ಕೆ ಈ ಅನುಪಾತ ಏರಿಕೆ ಆಗಿದ್ದನ್ನು ಕಂಡಿದ್ದ ಕರ್ನಾಟಕ ನಂತರ ಸಾಲ ತಗ್ಗಿಸಿತ್ತು. ಆದರೆ, 2025-26ರಲ್ಲಿ ಕರ್ನಾಟಕದ ಸಾಲ ತೀವ್ರವಾಗಿ ಹೆಚ್ಚಾಗುವ ನಿರೀಕ್ಷೆ ಇದೆ. 2024-25ರ ಕರ್ನಾಟಕ ಆರ್ಥಿಕ ಸಮೀಕ್ಷೆ ಪ್ರಕಾರ 6.85 ಲಕ್ಷ ಕೋಟಿ ರೂ ಇರುವ ಕರ್ನಾಟಕದ ಒಟ್ಟು ಸಾಲ 2025-26ರಲ್ಲಿ 7.64 ಲಕ್ಷ ಕೋಟಿ ರೂಗೆ ಏರಿಕೆ ಆಗಬಹುದು.