image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮಲಯಾಳಂ ನಟ ಮೋಹನ್ ಲಾಲ್​​ಗೆ ಒಲಿದು ಬಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ಮಲಯಾಳಂ ನಟ ಮೋಹನ್ ಲಾಲ್​​ಗೆ ಒಲಿದು ಬಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ನವದೆಹಲಿ: ಮಲಯಾಳಂ ಸಿನಿಮಾ ರಂಗದ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರಿಗೆ 2023ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿತು. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವಾಲಯ, ಹಿರಿಯ ನಟ ಮೋಹನ್​ ಲಾಲ್​ ಅವರ ಸಿನಿ ಪ್ರಯಾಣವು ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತಿದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ನಟ, ನಿರ್ದೇಶಕರೂ ಆಗಿರುವ ಮಲಯಾಳಂ ನಟನನ್ನು ಗೌರವಿಸಲಾಗುತ್ತಿದೆ ಎಂದು ತಿಳಿಸಿದೆ. ಸೆಪ್ಟೆಂಬರ್ 23 ರಂದು ನಡೆಯಲಿರುವ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 65 ವರ್ಷ ವಯಸ್ಸಿನ ಮೋಹನ್ ಲಾಲ್ ಅವರಿಗೆ ಭಾರತೀಯ ಸಿನಿಮಾ ಪಿತಾಮಹ ದಾದಾಸಾಹೇಬ್​ ಫಾಲ್ಕೆ ಹೆಸರಿನಲ್ಲಿ ಕೊಡಮಾಡಲಾಗುವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಚಿವಾಲಯ ಹೇಳಿದೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿರುವ ಮೋಹನ್ ಲಾಲ್ ಅವರು ಮಲಯಾಳಂ, ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅತ್ಯಂತ ಜನಪ್ರಿಯ ಮತ್ತು ವಿಮರ್ಶಾತ್ಮಕ ಚಲನಚಿತ್ರಗಳಾದ ತನ್ಮಾತ್ರ, ಇರುವರ್, ದೃಶ್ಯಂ, ವನಪ್ರಸ್ಥಂ, ಕಂಪನಿ, ಮುಂದಿರಿವಲ್ಲಿಕಲ್ ತಳಿರ್ಕುಂಬೋಲ್ ಮತ್ತು ಪುಲಿಮುರುಗನ್ ಸಿನಿಮಾಗಳು ಅವರ ಖ್ಯಾತಿಯನ್ನು ಹೆಚ್ಚಿಸಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಹಲವು ಗಣ್ಯರು ಮಲಯಾಳಂ ಹಿರಿಯ ನಟನನ್ನು ಅಭಿನಂದಿಸಿದ್ದಾರೆ.

"ಮೋಹನ್​​ಲಾಲ್​ ಅವರ ದಶಕಗಳ ಕಾಲದ ಶ್ರೀಮಂತ ನಟನೆಯಿಂದ ಮಲಯಾಳಂ ಸಿನಿಮಾ, ರಂಗಭೂಮಿಯ ಪ್ರಮುಖ ಜ್ಯೋತಿಯಾಗಿ ನಿಂತಿದ್ದಾರೆ. ಕೇರಳದ ಸಂಸ್ಕೃತಿಯ ಬಗ್ಗೆ ಆಳವಾದ ಬೇರು ಹೊಂದಿದ್ದಾರೆ. ಅವರು ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಅವರ ಸಿನಿಮಾ ಮತ್ತು ರಂಗಭೂಮಿ ಪ್ರತಿಭೆ ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಅವರ ಸಾಧನೆಗಳು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲಿ" ಎಂದು ಪ್ರಧಾನಿ ಮೋದಿ ಹರಸಿದ್ದಾರೆ. ಮೋಹನ್​ ಲಾಲ್​ ಅವರು ತಮ್ಮ ಬಣ್ಣದ ಲೋಕದ ಅಪ್ರತಿಮ ಸಾಧನೆಗೆ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಒಂಬತ್ತು ಕೇರಳ ರಾಜ್ಯ ಪ್ರಶಸ್ತಿಗಳು ಮತ್ತು ಅಂತಾರಾಷ್ಟ್ರೀಯ ಗೌರವಗಳನ್ನು ಪಡೆದಿದ್ದಾರೆ. 2001 ರಲ್ಲಿ ಪದ್ಮಶ್ರೀ ಮತ್ತು 2019 ರಲ್ಲಿ ಪದ್ಮಭೂಷಣ ಪ್ರಶಸ್ತಿಯೂ ಅವರನ್ನು ಹುಡುಕಿಕೊಂಡು ಬಂದಿವೆ.

Category
ಕರಾವಳಿ ತರಂಗಿಣಿ