ನವದೆಹಲಿ : ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಅಮೆರಿಕ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿರುವುದು ತಿಳಿದುಬಂದಿದೆ. ಇವತ್ತು ಎರಡೂ ದೇಶಗಳ ತಂಡಗಳ ನಡುವೆ ಹೊಸ ಸುತ್ತಿನ ಮಾತುಕತೆ ನಡೆಯುತ್ತಿರುವ ಹೊತ್ತಲ್ಲೇ ಅಮೆರಿಕದ ಪ್ರಮುಖ ಬೇಡಿಕೆಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬರುತ್ತಿವೆ. ರಷ್ಯಾದೊಂದಿಗೆ ಭಾರತ ವ್ಯಾಪಾರ ಮೊಟಕುಗೊಳಿಸಬೇಕು ಎಂಬುದು ಒಂದು ಪ್ರಮುಖ ಬೇಡಿಕೆಯಾಗಿದೆ. ಹಾಗೆಯೇ, ಇಥನಾಲ್ ಉತ್ಪಾದನೆಗೆ ಅಮೆರಿಕದಿಂದ ಜೋಳ ಖರೀದಿಸಬೇಕು ಎಂಬುದು ಮತ್ತೊಂದು ಪ್ರಮುಖ ಬೇಡಿಕೆ. ಅಮೆರಿಕ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳಲ್ಲಿ ಇವೆರಡು ಸೇರಿವೆ.
ರಷ್ಯಾದಿಂದ ತೈಲ ಖರೀದಿಸಲಾಗುತ್ತಿದೆ ಎನ್ನುವ ಕಾರಣಕ್ಕೆ ಟ್ರಂಪ್ ಅವರು ಭಾರತದ ಮೇಲೆ ಹೆಚ್ಚುವರಿಯಾಗಿ ಶೇ. 25ರಷ್ಟು ಟ್ಯಾರಿಫ್ ಪ್ರಕಟಿಸಿದ್ದಾರೆ. ಇನ್ನು, ಭಾರತ ಹಾಗು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಏರ್ಪಡದೇ ಇರುವ ಕಾರಣಕ್ಕೆ ಶೇ. 25ರಷ್ಟು ಮೂಲ ತೆರಿಗೆಯನ್ನು ಅಮೆರಿಕ ಹಾಕಿದೆ. ವ್ಯಾಪಾರ ಒಪ್ಪಂದ ಏರ್ಪಡದೇ ಇರಲು ಕೃಷಿ ಹಾಗೂ ಸಂಬಂಧಿತ ವಲಯಗಳೇ ಕಾರಣ ಎಂಬುದು ಗಮನಾರ್ಹ. ಭಾರತವು ಕೋಟ್ಯಂತರ ಜನರ ಬದುಕಿಗೆ ಆಸರೆಯಾಗಿರುವ ಕೃಷಿ, ಮೀನುಗಾರಿಕೆ, ಡೈರಿ ಸೆಕ್ಟರ್ಗಳನ್ನು ಶತಾಯಗತಾಯ ರಕ್ಷಿಸಲು ಪಣತೊಟ್ಟಿದೆ. ಅತ್ತ, ಅಮೆರಿಕದಲ್ಲಿ ಈ ಕೃಷಿ ಉತ್ಪನ್ನಗಳು ಹೆಚ್ಚುವರಿಯಾಗಿದ್ದು, ಅವುಗಳನ್ನು ಸಾಗಹಾಕಲು ಭಾರತದಂತಹ ದೊಡ್ಡ ಮಾರುಕಟ್ಟೆ ಬೇಕಾಗಿದೆ. ಹೀಗಾಗಿ, ಈ ಸೆಕ್ಟರ್ಗಳನ್ನು ಮುಕ್ತಗೊಳಿಸಬೇಕೆಂದು ಅಮೆರಿಕ ಮೊದಲಿಂದಲೂ ಒತ್ತಡ ಹಾಕುತ್ತಲೇ ಇದೆ.
ಅಮೆರಿಕದಲ್ಲಿ ಕಾರ್ಪೊರೇಟ್ ಶೈಲಿಯಲ್ಲಿ ಕೃಷಿಗಾರಿಕೆ ನಡೆಯುತ್ತದೆ. ಸರ್ಕಾರ ಕೂಡ ಸಾಕಷ್ಟು ಉತ್ತೇಜನ ನೀಡುತ್ತದೆ. ಅಲ್ಲಿ ಹಸುಗಳಿಗೆ ರಕ್ತ ಇತ್ಯಾದಿ ಮಾಂಸಮಿಶ್ರಿತ ಆಹಾರವನ್ನು ನೀಡಲಾಗುತ್ತದೆ. ಭಾರತದಲ್ಲಿ ಹಾಲನ್ನು ಪರಿಶುದ್ಧ ಆಹಾರವಾಗಿ ಪರಿಗಣಿಸಲಾಗುತ್ತದೆ. ಅಮೆರಿಕದ ಈ ಹಾಲು ಹಾಗೂ ಹಾಲಿನ ಉತ್ಪನ್ನಗಳು ಭಾರತಕ್ಕೆ ಧರ್ಮ ಸಂಕಟ ತರುತ್ತವೆ. ಈ ಕಾರಣಕ್ಕೂ ಭಾರತವು ಅಮೆರಿಕದ ಡೈರಿ ಉತ್ಪನ್ನಗಳಿಗೆ ಅವಕಾಶ ಕೊಡಲು ಹಿಂದೇಟು ಹಾಕುತ್ತಿದೆ. ಅಮೆರಿಕದ ಕೃಷಿ ಉತ್ಪನ್ನಗಳು ಭಾರತದಕ್ಕಿಂತ ಕಡಿಮೆ ಬೆಲೆಯದ್ದಾಗಿದೆ. ಒಂದು ವೇಳೆ ಭಾರತದ ಮಾರುಕಟ್ಟೆಯಲ್ಲಿ ಅಮೆರಿಕದ ಈ ಉತ್ಪನ್ನಗಳನ್ನು ಮುಕ್ತವಾಗಿ ಬರಲು ಬಿಟ್ಟರೆ ಭಾರತೀಯ ಕೃಷಿಕರು, ರೈತರಿಗೆ ದೊಡ್ಡ ಹೊಡೆತ ಬೀಳುವ ಸಂಭವ ಇದೆ ಎಂದು ಹೇಳಲಾಗುತ್ತಿದೆ.