ಆಂಧ್ರ ಪ್ರದೇಶ : ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಅಮೆರಿಕ ವಿಧಿಸಿರುವ ಸುಂಕದಿಂದ ಆಂಧ್ರದ ಸೀಗಡಿ ರಫ್ತಿನ ಮೇಲಾಗುತ್ತಿರುವ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಸುಂಕ ಈ ವಲಯಕ್ಕೆ 25,000 ಕೋಟಿ ರೂ. ನಷ್ಟ ಉಂಟುಮಾಡಿದೆ ಮತ್ತು ಶೇ.50ರಷ್ಟು ರಫ್ತು ಆರ್ಡರ್ ರದ್ದಾಗಲು ಕಾರಣವಾಗಿದೆ ಎಂದು ಹೇಳಿದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಮೀನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್ ಅವರಿಗೆ ಪ್ರತ್ಯೇಕ ಪತ್ರ ಬರೆದಿರುವ ನಾಯ್ಡು, ಆಂಧ್ರ ಪ್ರದೇಶದಲ್ಲಿ ಸೀಗಡಿ ಸಾಕಣೆ ವಲಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ ಮತ್ತು ಬೆಂಬಲ ಕೋರಿದ್ದಾರೆ. ಬಿಕ್ಕಟ್ಟಿನ ನಡುವೆಯೂ ಸೀಗಡಿ ಮತ್ತು ಮೀನು ಸಾಕಣೆ ಮಾಡುವ ರೈತರಿಗೆ ಬೆಂಬಲ ನೀಡಲು ನಮ್ಮ ಸರ್ಕಾರ ಕ್ರಮ ಕೈಗೊಂಡಿದ್ದು, ಮೇವು ತಯಾರಕರು ಪ್ರತಿ ಕೆ.ಜಿಗೆ 9 ರೂ.ಗಳಷ್ಟು ಬೆಲೆ ಕಡಿತ ಮಾಡುವಂತೆ ಕೋರಿದೆ ಮತ್ತು ಸಬ್ಸಿಡಿ ವಿದ್ಯುತ್ ಟ್ರಾನ್ಸ್ಫಾರ್ಮರ್ಗಳನ್ನು ಪೂರೈಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ನಾಯ್ಡು ತಿಳಿಸಿದ್ದಾರೆ. ಸಮುದ್ರಾಹಾರ ಸೇವನೆಯನ್ನು ಉತ್ತೇಜಿಸಲು ಜಾಗೃತಿ ಅಭಿಯಾನಗಳ ಅಗತ್ಯವನ್ನು ಮುಖ್ಯಮಂತ್ರಿ ಒತ್ತಿ ಹೇಳಿದರು. ಮೀನುಗಾರಿಕೆ ಉತ್ಪನ್ನಗಳಲ್ಲಿ ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ ಮತ್ತು ಹೆಚ್ಚು ಪೌಷ್ಟಿಕಾಂಶವಿದೆ. ಪ್ರಸ್ತುತ, ಭಾರತದಲ್ಲಿ ತಲಾ ಸಮುದ್ರಾಹಾರ ಸೇವೆ ವರ್ಷಕ್ಕೆ ಕೇವಲ 12ರಿಂದ 13 ಕೆ.ಜಿ ಮಾತ್ರ. ಇದು ಜಾಗತಿಕ ಸರಾಸರಿಯಾದ 20 ರಿಂದ 30 ಕೆ.ಜಿಗೆ ಹೋಲಿಸಿದರೆ ಕಡಿಮೆ ಎಂದರು. ದಕ್ಷಿಣ ಭಾರತದಿಂದ ದೇಶದ ವಿವಿಧ ಭಾಗಗಳಿಗೆ ಮೀನುಗಾರಿಕೆ ಉತ್ಪನ್ನಗಳನ್ನು ಸಾಗಿಸಲು ಪ್ರತ್ಯೇಕ ರೈಲುಗಳನ್ನು ಓಡಿಸುವಂತೆ ನಾಯ್ಡು ಕೇಂದ್ರ ಸರ್ಕಾರವನ್ನು ವಿನಂತಿಸಿದ್ದಾರೆ. ಮೀನುಗಾರಿಕಾ ಸಮುದಾಯಕ್ಕೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಅಡಿಯಲ್ಲಿ 1 ಲಕ್ಷ ರೂ.ಗಳ ಒಂದು ಬಾರಿಯ ಸಾಲ ನೀಡುವಂತೆ ಹಾಗೂ ಹೊಸ ಮಾರುಕಟ್ಟೆಗಳಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಕೋಲ್ಡ್-ಚೈನ್ ಸೌಲಭ್ಯಗಳನ್ನು ಬಲಪಡಿಸಲು ಕೋರಿದ್ದಾರೆ. ಐಸಿಎಆರ್-ಸಿಐಬಿಎ ಮತ್ತು ಐಸಿಎಆರ್-ಎನ್‌ಬಿಎಫ್‌ಜಿಆರ್‌ನಂತಹ ಪ್ರಮುಖ ಸಂಶೋಧನಾ ಸಂಸ್ಥೆಗಳ ಪ್ರಾದೇಶಿಕ ಕಚೇರಿಗಳನ್ನು ಆಂಧ್ರ ಪ್ರದೇಶದಲ್ಲಿ ಸ್ಥಾಪಿಸಲು ಅವರು ಕೇಂದ್ರ ಸರ್ಕಾರವನ್ನು ವಿನಂತಿಸಿದ್ದಾರೆ.