ನವದೆಹಲಿ: ರಷ್ಯಾ ಸೇನೆ ಸೇರುವ ಯಾವುದೇ ಅವಕಾಶಕ್ಕೂ ಭಾರತೀಯರು ಮುಂದಾಗಬಾರದು ಎಂದು ಭಾರತ ಸೂಚನೆ ನೀಡಿದೆ. ಇದೇ ವೇಳೆ, ಭಾರತೀಯ ಪ್ರಜೆಗಳನ್ನು ಸಹಾಯಕ ಸಿಬ್ಬಂದಿಯಾಗಿ ನೇಮಕಾತಿ ಮಾಡುತ್ತಿರುವ ಪ್ರಕ್ರಿಯೆಯನ್ನು ನಿಲ್ಲಿಸುವಂತೆಯೂ ರಷ್ಯಾಗೆ ಬೇಡಿಕೆ ಸಲ್ಲಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ವಿದೇಶಾಂಗ ಸಚಿವಾಲಯ, ರಷ್ಯಾದ ಶಸ್ತ್ರಸಜ್ಜಿತ ಸೇನೆಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಭಾರತೀಯರನ್ನು ಬಿಡುಗಡೆ ಮಾಡುವಂತೆ ಕೋರಿದೆ. ರಷ್ಯಾ ಸೇನೆಗೆ ಭಾರತೀಯರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂಬ ಹೊಸ ವರದಿ ಬಂದಿದ್ದು, ಈ ಬೆನ್ನಲ್ಲೇ ಈ ಹೇಳಿಕೆ ಬಿಡುಗಡೆಯಾಗಿದೆ. ರಷ್ಯಾದ ಮಿಲಿಟರಿ ಅಂತರ್ಗತವಾಗಿರುವ ಬೆದರಿಕೆ ಮತ್ತು ಅಪಾಯಗಳನ್ನು ಹೊಂದಿದ್ದು, ಸುರಕ್ಷತೆಯ ದೃಷ್ಟಿಯಿಂದ ಭಾರತೀಯ ಪ್ರಜೆಗಳಿಗೆ ರಷ್ಯಾದ ಮಿಲಿಟರಿ ಸೇರಲು ನೀಡುವ ಯಾವುದೇ ಆಫರ್ಗಳನ್ನು ಸ್ವೀಕರಿಸದಂತೆಯೂ ತಿಳಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಅವರು ಈ ಕುರಿತು ಮಾತನಾಡಿ, ಇತ್ತೀಚಿಗೆ ರಷ್ಯಾದ ಸೇನೆಗೆ ಭಾರತೀಯರನ್ನು ನೇಮಕಾತಿ ಮಾಡಿಕೊಳ್ಳುತ್ತಿರುವ ಬಗ್ಗೆ ನಾವು ವರದಿಗಳನ್ನು ಗಮನಿಸಿದ್ದೇವೆ. ಕಳೆದೊಂದು ವರ್ಷದಿಂದಲೂ ರಷ್ಯಾಗೆ ಸೇರುವ ಅಪಾಯದ ಕುರಿತು ಭಾರತ ಅನೇಕ ಬಾರಿ ಹೇಳಿದೆ. ಆ ಸೇನೆ ಸೇರುವ ಕೋರ್ಸ್ಗಳ ಬಗ್ಗೆ ಭಾರತೀಯ ಪ್ರಜೆಗಳು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ. ಈ ಕುರಿತಾಗಿ ರಷ್ಯಾ ಅಧಿಕಾರಿಗಳೊಂದಿಗೂ ಕೂಡ ಮಾತನಾಡಿದ್ದೇವೆ. ದೆಹಲಿ ಮತ್ತು ಮಾಸ್ಕೋದಲ್ಲಿ ಅಧಿಕಾರಿಗಳು ಪ್ರಸ್ತಾಪಿಸಿದ್ದು, ಭಾರತೀಯರ ನೇಮಕಾತಿ ಅಭ್ಯಾಸವನ್ನು ನಿಲ್ಲಿಸಿ, ಅವರನ್ನು ಬಿಡುಗಡೆ ಮಾಡುವಂತೆ ಕೋರಿದ್ದೇವೆ. ಪರಿಣಾಮಕ್ಕೆ ಒಳಗಾದ ಭಾರತೀಯ ನಾಗರಿಕ ಕುಟುಂಬದವರೊಂದಿಗೂ ನಾವು ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ರಷ್ಯಾ ಸೇನಾ ಘಟಕದಲ್ಲಿ ಬಾಣಸಿಗ, ಬೆಂಬಲ ಸಿಬ್ಬಂದಿಯಾಗಿ ಅನೇಕ ಭಾರತೀಯರು ಕಾರ್ಯ ನಿರ್ವಹಿಸುವುದನ್ನು ಭಾರತ ಪದೇ ಪದೇ ಪ್ರಶ್ನಿಸುತ್ತಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ರಷ್ಯಾ ಭೇಟಿ ಸಂದರ್ಭದಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ರಷ್ಯಾದ ಸೇನೆ ಸೇರಿಕೊಂಡವರ ಪೈಕಿ 85 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ 20 ಮಂದಿಯನ್ನು ಬಿಡಿಸಿಕೊಂಡು ಬರುವ ಪ್ರಯತ್ನ ಸಾಗಿದೆ. ಈ ಕುರಿತು ಕಳೆದ ವರ್ಷದ ಅಕ್ಟೋಬರ್ನಲ್ಲಿ ಕೇಂದ್ರ ಸರ್ಕಾರ ತಿಳಿಸಿತ್ತು. ರಷ್ಯಾ ಸೇನೆಯಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ಕಳೆದ ವರ್ಷ ಕೇಂದ್ರ ವಿದೇಶಾಂಗ ಸಚಿವ ಎಸ್..ಜೈಶಂಕರ್ ತಿಳಿಸಿದ್ದರು. ಚಿಕ್ಕೋಡಿ ಪಟ್ಟಣದಲ್ಲಿ ಕೆ.ಎಲ್.ಇ ಸಂಸ್ಥೆಯ ಸಿ.ಬಿ.ಎಸ್.ಇ ಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದರು.