ನವದೆಹಲಿ: ಇಸ್ರೇಲ್ ಮತ್ತು ಭಾರತ ನಡುವಣ ದ್ವಿಪಕ್ಷೀಯ ಸಂಬಂಧ ಬಲಗೊಳಿಸುವ ನಿಟ್ಟಿನಲ್ಲಿ ಇಸ್ರೇಲಿ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ನೇತೃತ್ವದ ನಿಯೋಗ ಭಾರತಕ್ಕೆ ಬಂದಿಳಿದಿದೆ. ಮೂರು ದಿನಗಳ ಪ್ರವಾಸ ಕೈಗೊಂಡಿರುವ ಸ್ಮೋಟ್ರಿಚ್, ಎರಡು ದೇಶಗಳ ನಡುವಣ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ (ಬಿಐಟಿ) ಸಹಿ ಹಾಕುವ ನಿರೀಕ್ಷೆಯಿದೆ. ಇದು ಎರಡು ದೇಶಗಳ ನಡುವಿನ ವ್ಯಾಪಾರ ಹೆಚ್ಚಿಸಲು ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಹಾಯ ಮಾಡಲಿದೆ. ಈ ಭೇಟಿಯಲ್ಲಿ ಸ್ಮೋಟ್ರಿಚ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಷ್ ಗೋಯೆಲ್ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಲಿದ್ದಾರೆ. ಈ ಸಭೆಗಳ ಹೊರತಾಗಿ ಅವರು ಮುಂಬೈ ಮತ್ತು ಗಾಂಧಿ ನಗರದ ಗಿಫ್ಟ್ ಸಿಟಿಗೆ ಕೂಡ ಭೇಟಿ ನೀಡಲಿದ್ದಾರೆ. ಈ ಭೇಟಿಯಲ್ಲಿ ಭಾರತ ಮತ್ತು ಇಸ್ರೇಲ್ ನಡುವಣ ದ್ವಿಪಕ್ಷೀಯ ಮಾತುಕತೆಯಲ್ಲಿ ಆರ್ಥಿಕ ಮತ್ತು ಹಣಕಾಸಿನ ಸಂಬಂಧದ ಗುರಿ ಹೊಂದಲಾಗಿದ್ದು, ಎಫ್‌ಟಿಎ ಮತ್ತು ದ್ವಿಪಕ್ಷೀಯ ಒಪ್ಪಂದ ಸೇರಿದಂತೆ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗುವುದು ಎಂದು ಮೂಲಗಳು ತಿಳಿಸಿವೆ. ಎರಡು ದೇಶಗಳು ಈ ದ್ವಿಪಕ್ಷೀಯ ಹೂಡಿಕೆ ಒಪ್ಪಂದದ ಕುರಿತು ಮಾತುಕತೆ ನಡೆಸಲಿದೆ. ಈ ಭೇಟಿಯ ವೇಳೆ ಹಣಕಾಸು ಸಚಿವರು ಈ ಬಿಐಟಿಗೆ ಸಹಿ ಹಾಕುವ ನಿರೀಕ್ಷೆ ಇದೆ. ಎರಡೂ ದೇಶಗಳ ನಡುವಿನ ಬಿಐಟಿ, ಭಾರತದಲ್ಲಿ ಇಸ್ರೇಲಿ ಹೂಡಿಕೆದಾರರಿಗೆ ಮತ್ತು ಇಸ್ರೇಲ್‌ನಲ್ಲಿ ಭಾರತೀಯ ಹೂಡಿಕೆದಾರರಿಗೆ, ಸಂಬಂಧಿತ ಅಂತಾರಾಷ್ಟ್ರೀಯ ಪೂರ್ವ ನಿದರ್ಶನಗಳು ಮತ್ತು ಅಭ್ಯಾಸಗಳಿಗೆ ಸೂಕ್ತ ರಕ್ಷಣೆಯನ್ನು ಖಾತ್ರಿಪಡಿಸುತ್ತದೆ. ಇದು ಕನಿಷ್ಠ ಗುಣಮಟ್ಟದ ಚಿಕಿತ್ಸೆ ಮತ್ತು ತಾರತಮ್ಯರಹಿತತೆಯನ್ನು ಖಾತರಿಪಡಿಸುವ ಮೂಲಕ ಹೂಡಿಕೆದಾರರ ಸೌಕರ್ಯದ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗೇ ಮಧ್ಯಸ್ಥಿಕೆಯ ಮೂಲಕ ವಿವಾದ ಇತ್ಯರ್ಥಕ್ಕೆ ಸ್ವತಂತ್ರ ವೇದಿಕೆ ಒದಗಿಸುತ್ತದೆ.
ಆರ್ಥಿಕ ಸಹಕಾರ ಹೆಚ್ಚಿಸುವ ಮತ್ತು ಹೆಚ್ಚು ದೃಢವಾದ ಮತ್ತು ಸ್ಥಿತಿಸ್ಥಾಪಕ ಹೂಡಿಕೆ ವಾತಾವರಣವನ್ನು ಸೃಷ್ಟಿಸುವ ಬದ್ಧತೆಯನ್ನು ಈ ಬಿಐಟಿ ನೀಡಲಿದೆ. ಇದು ಹೆಚ್ಚಿನ ದ್ವಿಪಕ್ಷೀಯ ಹೂಡಿಕೆಗಳಿಗೆ ದಾರಿ ಮಾಡಿಕೊಡಲಿದೆ ಎಂಬ ನಿರೀಕ್ಷೆ ಇದೆ. ಎರಡೂ ದೇಶಗಳಲ್ಲಿನ ವ್ಯವಹಾರಗಳು ಮತ್ತು ಆರ್ಥಿಕತೆಗಳಿಗೆ ಪ್ರಯೋಜನ ನೀಡಲಿದೆ ಎಂದು ಮೂಲಗಳು ತಿಳಿಸಿವೆ. ಈ ವರ್ಷ ಭಾರತಕ್ಕೆ ಇಸ್ರೇಲಿ ಸಚಿವರ ನಾಲ್ಕನೇ ಭೇಟಿ ಇದಾಗಿದೆ. ಹಣಕಾಸು ಸಚಿವರಿಗಿಂತ ಮುನ್ನ ಈ ವರ್ಷದ ಆರಂಭದಲ್ಲಿ ಪ್ರವಾಸೋದ್ಯಮ ಸಚಿವ ಹೈಮ್ ಕಾಟ್ಜ್, ಆರ್ಥಿಕ ಮತ್ತು ಕೈಗಾರಿಕಾ ಸಚಿವ ನಿರ್ ಬರ್ಕತ್ ಮತ್ತು ಕೃಷಿ ಮತ್ತು ಆಹಾರ ಭದ್ರತಾ ಸಚಿವ ಅವಿ ಡಿಕ್ಟರ್ ಭೇಟಿ ನೀಡಿದ್ದರು.