image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಕೇರಳ ದೇವಾಲಯದಲ್ಲಿ 'ಆಪರೇಷನ್ ಸಿಂಧೂರ ಪೂಕಳಂ' : ಆರ್ ಎಸ್ ಎಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು

ಕೇರಳ ದೇವಾಲಯದಲ್ಲಿ 'ಆಪರೇಷನ್ ಸಿಂಧೂರ ಪೂಕಳಂ' : ಆರ್ ಎಸ್ ಎಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು

ತಿರುವನಂತಪುರ: ಕೊಲ್ಲಂ ಜಿಲ್ಲೆಯ ಮುತ್ತು ಪಿಲಕ್ಕಾಡುವಿನ ಶ್ರೀ ಪಾರ್ಥಸಾರಥಿ ದೇವಸ್ಥಾನದ ಬಳಿ ಓಣಂ ಪ್ರಯುಕ್ತ ಕೇಸರಿ ಧ್ವಜವನ್ನು ಹೋಲುವ ರೀತಿಯಲ್ಲಿ ಸಾಂಪ್ರದಾಯಿಕ ಹೂವಿನ ಅಲಂಕಾರ ʼಪೂಕ್ಕಳಂʼ ಅನ್ನು ರಚಿಸಿದ ಆರೋಪದಲ್ಲಿ 27 ಆರೆಸ್ಸೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರ ವಿರುದ್ಧ ಪೋಲಿಸರು ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ದಾಖಲಿಸಿದ್ದನ್ನು ಟೀಕಿಸಿರುವ ಬಿಜೆಪಿ, "ಇದು 'ಆಪರೇಷನ್ ಸಿಂಧೂರ ಪೂಕಳಂ' ವಿರುದ್ಧದ ಕ್ರಮ" ಎಂದು ಬಣ್ಣಿಸಿದೆ. ಪೂಕ್ಕಳಂ ಮೇಲೆ ಪುಷ್ಪಗಳಿಂದ 'ಆಪೇಷನ್ ಸಿಂಧೂರ' ಎಂದೂ ಬರೆಯಲಾಗಿತ್ತು. ದೇವಸ್ಥಾನದಿಂದ 100 ಮೀ.ವ್ಯಾಪ್ತಿಯಲ್ಲಿ ರಾಜಕೀಯ ಚಿಹ್ನೆಗಳು ಮತ್ತು ಧ್ವಜಗಳ ಬಳಕೆಯನ್ನು ಕೇರಳ ಉಚ್ಚ ನ್ಯಾಯಾಲಯವು ನಿಷೇಧಿಸಿದೆ,ಅದು 2023ರಲ್ಲಿ ದೇವಸ್ಥಾನದ ಬಳಿ ಕೇಸರಿ ಧ್ವಜಗಳನ್ನು ಹಾರಿಸಲು ಅನುಮತಿಯನ್ನು ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು ಎಂದು ಪೋಲಿಸರು ತಿಳಿಸಿದ್ದಾರೆ.

ಆದಾಗ್ಯೂ ಓಣಂ ಹಬ್ಬದ ಮುನ್ನಾ ದಿನ ಆರೆಸ್ಸೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ದೇವಸ್ಥಾನಕ್ಕೆ ಹೋಗುವ ಮುಖ್ಯಮಾರ್ಗದ ಬಳಿ ಹೂವುಗಳ ಕಾರ್ಪೆಟ್ ರಚಿಸಿದ್ದರು. ಅದರೊಂದಿಗೆ ದೇವಸ್ಥಾನದಿಂದ ಕೇವಲ 50 ಮೀ.ದೂರದಲ್ಲಿ ಕೇಸರಿ ಧ್ವಜವನ್ನು ಹೋಲುವ ಪೂಕ್ಕಳಂ ಅನ್ನು ವಿನ್ಯಾಸಗೊಳಿಸಿದ್ದರು ಮತ್ತು ಛತ್ರಪತಿ ಶಿವಾಜಿಯ ಫ್ಲೆಕ್ಸ್‌ ಅನ್ನೂ ಸ್ಥಾಪಿಸಿದ್ದರು. ಇದಕ್ಕಾಗಿ ಅವರು ದೇವಸ್ಥಾನದ ಆಡಳಿತ ಸಮಿತಿಯ ಅನುಮತಿಯನ್ನು ಪಡೆದಿರಲಿಲ್ಲ. ಪೂಕ್ಕಳಂ ರಚನೆಯಲ್ಲಿ ಆರೆಸ್ಸೆಸ್ ಚಿಹ್ನವನ್ನು ಬಳಸುವುದಿಲ್ಲ ಎಂದು ಅವರು ಸಮಿತಿಗೆ ಭರವಸೆ ನೀಡಿದ್ದರು. ಪೂಕ್ಕಳಂ ಜೊತೆ ಅವರು ಹೂವುಗಳಿಂದ 'ಆಪರೇಷನ್ ಸಿಂಧೂರ' ಎಂದೂ ಬರೆದಿದ್ದರು. ಇದರ ವಿರುದ್ಧ ಯಾರೂ ದೂರಿಲ್ಲ, ಆರೆಸ್ಸೆಸ್ ಧ್ವಜವನ್ನು ವಿನ್ಯಾಸಗೊಳಿಸಿದ್ದರ ವಿರುದ್ಧ ಮಾತ್ರ ದೂರು ಸಲ್ಲಿಸಲಾಗಿದೆ ಎಂದು ಪೋಲಿಸರು ತಿಳಿಸಿದರು. ಆರೆಸ್ಸೆಸ್ ಕಾರ್ಯಕರ್ತರು ಹಲವು ವರ್ಷಗಳಿಂದಲೂ ದೇವಸ್ಥಾನದ ಮೇಲೆ ನಿಯಂತ್ರಣಕ್ಕಾಗಿ ಇತರ ಗುಂಪುಗಳಿಗೆ ಸೇರಿದ ವ್ಯಕ್ತಿಗಳೊಂದಿಗೆ ಕಾದಾಡುತ್ತಿದ್ದಾರೆ. ಇದು ಹಿಂಸಾತ್ಮಕ ಘಟನೆಗಳಿಗೂ ಸಾಕ್ಷಿಯಾಗಿದ್ದು, ಕೇರಳ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು. 2020ರಲ್ಲಿ ಅದು ದೇವಸ್ಥಾನದ ಆವರಣಗಳಲ್ಲಿಯ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಿಗೆ ಸಂಬಂಧಿಸಿದ ಅಳವಡಿಕೆಗಳು/ಧ್ವಜಗಳು/ ಅಲಂಕಾರಿಕ ವಸ್ತುಗಳನ್ನು ತೆಗೆಯುವಂತೆ ಪೋಲಿಸರಿಗೆ ನಿರ್ದೇಶನ ನೀಡಿತ್ತು. 2023ರಲ್ಲಿ ಭಕ್ತರ ಒಂದು ವರ್ಗವು ಹಿಂದಿನ ತೀರ್ಪಿನಲ್ಲಿ ಸಡಿಲಿಕೆ ಕೋರಿ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿತ್ತಾದರೂ ಅದು ತಿರಸ್ಕರಿಸಲ್ಪಟ್ಟಿತ್ತು. ಪೂಕ್ಕಳಂ ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು, ಪೂಕ್ಕಳಂ ಮೇಲೆ 'ಆಪರೇಷನ್ ಸಿಂಧೂರ' ಎಂದು ಬರೆದಿದ್ದಕ್ಕಾಗಿ ಪ್ರಕರಣವನ್ನು ದಾಖಲಿಸುವ ಮೂಲಕ ಸರಕಾರವು ಯಾರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ.

Category
ಕರಾವಳಿ ತರಂಗಿಣಿ