ತಿಯಾಂಜಿನ್: "ಭಯೋತ್ಪಾದನೆಯ ವಿರುದ್ಧ ದ್ವಿಮುಖ ನೀತಿಯನ್ನು ಅನುಸರಿಸಬಾರದು' ಎಂದು ಪ್ರಧಾನಿ ಮೋದಿ ಅವರು ಚೀನದ ತಿಯಾಂಜಿನ್ನಲ್ಲಿ ನಡೆದ ಶಾಂಘೈ ಶೃಂಗ ಸಭೆಯಲ್ಲಿ ಹೇಳಿದ್ದಾರೆ. ಈ ಮೂಲಕ ಚೀನ ಹಾಗೂ ಪಾಕಿಸ್ಥಾನಕ್ಕೆ ತಿರುಗೇಟು ನೀಡಿದ್ದಾರೆ. ಶಾಂಘೈ ಸಹಕಾರ ಸಂಘಟನೆಯ ವಾರ್ಷಿಕ ಶೃಂಗದಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ಪಹಲ್ಗಾಮ್ನಲ್ಲಿ ನಡೆದ ದಾಳಿ ಕೇವಲ ಭಾರತದ ಮೇಲಿನ ದಾಳಿಯಲ್ಲ, ಮಾನವೀಯತೆಯ ಮೇಲೆ ನಂಬಿಕೆಯನ್ನಿಡುವ ಎಲ್ಲ ದೇಶಗಳಿಗೂ ಬಹಿರಂಗ ಸವಾಲಾಗಿತ್ತು. ಹೀಗಾಗಿ ಭಯೋತ್ಪಾದನೆ ವಿರುದ್ಧ ದ್ವಿಮುಖ ನೀತಿ, ನಿಲುವುಗಳನ್ನು ಎಲ್ಲರೂ ಒಮ್ಮತದಿಂದ ತಿರಸ್ಕರಿಸಬೇಕು. ಇದು ಮಾನವೀಯತೆಯತ್ತ ನಮ್ಮ ಕರ್ತವ್ಯವಾಗಿದೆ' ಎಂದಿದ್ದಾರೆ. "ಕೆಲವು ದೇಶಗಳು ಭಯೋತ್ಪಾದನೆಗೆ ಬಹಿರಂಗವಾಗಿ ಬೆಂಬಲಿಸುವುದನ್ನು ಒಪ್ಪಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ' ಎಂದು ಹೇಳುವ ಮೂಲಕ ಪಾಕಿಸ್ಥಾನದ ಹೆಸರನ್ನು ಉಲ್ಲೇಖೀಸದೆಯೇ ಪ್ರಧಾನಿ ವಾಗ್ಧಾಳಿ ನಡೆಸಿದ್ದಾರೆ. ವಿಶೇಷವೆಂದರೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸಮ್ಮುಖದಲ್ಲೇ ಮೋದಿ ಈ ಮಾತು ಆಡಿದ್ದಾರೆ. "ಭಾರತ ನಾಲ್ಕು ದಶಕಗಳಿಂದ ಭಯೋತ್ಪಾದನೆಯ ನೋವನ್ನು ಅನುಭವಿಸುತ್ತಿದೆ. ಅನೇಕ ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ. ಅನೇಕ ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ' ಎಂದು ಅವರು ಹೇಳಿದ್ದಾರೆ.
ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಭಾರತ ಕೈಗೊಂಡಿದ್ದು, ಭಯೋತ್ಪಾದನೆಯ ವಿರುದ್ಧದ ನಿಖರ ದಾಳಿಯಾಗಿತ್ತು. ಅಲ್ ಕಾಯಿದಾ ಸಹಿತ ಭಯೋತ್ಪಾದನ ಸಂಘಟನೆಗಳಿಗೆ ಹಣಕಾಸಿನ ನೆರವು ಒದಗಿಸುವುದನ್ನು ಭಾರತ ಖಂಡಿಸಿತು. ಆಪರೇಷನ್ ಸಿಂದೂರ ಬಳಿಕ ಹಲವು ದೇಶಗಳು ಭಾರತಕ್ಕೆ ಬೆಂಬಲವಾಗಿ ನಿಂತವು ಎಂದು ಅವರು ಹೇಳಿದ್ದಾರೆ. ಅಲ್ಲದೆ ಬೆಂಬಲ ನೀಡಿದ ರಾಷ್ಟ್ರಗಳಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಪಾಕಿಸ್ಥಾನವನ್ನು ಸಂಪರ್ಕಿಸುವಂತೆ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ರಸ್ತೆ ನಿರ್ಮಾಣ ಮಾಡುತ್ತಿರುವ ಚೀನದ ಯೋಜನೆಯನ್ನು ಖಂಡಿಸಿರುವ ಪ್ರಧಾನಿ ಮೋದಿ, ರಸ್ತೆಗಳು ಸಾರ್ವಭೌಮತೆಯನ್ನು ಉಲ್ಲಂ ಸಬಾರದು ಎಂದರು. ಪ್ರತಿಯೊಂದು ರಾಷ್ಟ್ರವು ಮತ್ತೂಂದು ರಾಷ್ಟ್ರದ ಸಾರ್ವಭೌಮತೆಯನ್ನು ಗೌರವಿಸಬೇಕು. ಚೀನದ ಬಿಆರ್ಐ ಯೋಜನೆಯು ಮತ್ತೂಂದು ದೇಶದ ಸಾರ್ವಭೌಮತೆಯನ್ನು ಉಲ್ಲಂ ಸಬಾರದು ಎಂದರು.