ನವದೆಹಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ.50ರಷ್ಟು ಸುಂಕ ಹೇರಿದ್ದಾರೆ. ಇದಕ್ಕೆ ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿರುವುದೇ ಕಾರಣ ಎಂದು ಅಮೆರಿಕ ಹೇಳುತ್ತಿದೆ. ಆದರೆ, ಭಾರತದ ಮೇಲಿನ ಸುಂಕದ ಹಿಂದಿರುವ ಅಸಲಿ ಕಾರಣವನ್ನು ಅಮೆರಿಕದ ಸಂಸ್ಥೆಯೊಂದು ಬಹಿರಂಗಪಡಿಸಿದ್ದು, ಇದರಿಂದ ಟ್ರಂಪ್ಗೆ ಭಾರೀ ಮುಜುಗರವಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಮೇನಲ್ಲಿ ನಡೆದ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಲು ಡೊನಾಲ್ಡ್ ಟ್ರಂಪ್ ಅವರಿಗೆ ಅವಕಾಶ ನೀಡದ ಕಾರಣ ಅಮೆರಿಕವು ಭಾರತದ ಮೇಲೆ ಶೇ.50ರಷ್ಟು ಸುಂಕಗಳನ್ನು ಹೇರಿದೆ ಎಂದು ಅಮೆರಿಕದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಮತ್ತು ಹಣಕಾಸು ಸೇವಾ ಕಂಪನಿಯಾದ ಜೆಫರೀಸ್ ತನ್ನ ವರದಿಯಲ್ಲಿ ತಿಳಿಸಿದೆ. ಭಾರತದ ಮೇಲೆ ಈ ಹಿಂದೆಂದೂ ಕಂಡಿರದಷ್ಟು ಹೆಚ್ಚಿನ ಸುಂಕಗಳನ್ನು ಅಮೆರಿಕ ಹೇರಿದೆ. ಇದು ಟ್ರಂಪ್ ಅವರ ವೈಯಕ್ತಿಕ ಅಸಮಾಧಾನ ಪರಿಣಾಮ ಎಂದು ಜೆಫರೀಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ದಕ್ಷಿಣ ಏಷ್ಯಾದ ಎರಡು ಪರಮಾಣು ಶಕ್ತಿ ರಾಷ್ಟ್ರಗಳ ನಡುವಿನ ಮೇ ತಿಂಗಳ ಸಂಘರ್ಷದಲ್ಲಿ ಮಧ್ಯಪ್ರವೇಶಿಸಲು ಟ್ರಂಪ್ ಆಶಿಸಿದ್ದರು. ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ದೀರ್ಘಕಾಲದ ವೈಷಮ್ಯವನ್ನು ಕೊನೆಗಾಣಿಸುವ ಪ್ರಯತ್ನದಲ್ಲಿ ಪಾತ್ರ ವಹಿಸಲು ಅವಕಾಶ ನೀಡಲು ಭಾರತ ನಿರಾಕರಿಸಿದ ಕಾರಣಕ್ಕೆ ಅಮೆರಿಕ ಅಧ್ಯಕ್ಷರು ಅಸಮಾಧಾನಗೊಂಡು ಈ ಸುಂಕಗಳನ್ನು ಹೇರಿದ್ದಾರೆ ಎಂದು ವರದಿ ಹೇಳಿದೆ. ಪಾಕಿಸ್ತಾನದೊಂದಿಗಿನ ಸಂಘರ್ಷಗಳಲ್ಲಿ, ಕಾಶ್ಮೀರ ವಿಚಾರದಲ್ಲಿ ಬೇರೆ ದೇಶಗಳ ಮಧ್ಯಸ್ಥಿಕೆಯನ್ನು ತಾನು ಸ್ವಾಗತಿಸುವುದಿಲ್ಲ ಎಂದು ಭಾರತ ಪದೇ ಪದೇ ಸ್ಪಷ್ಟಪಡಿಸಿದೆ. ಇದು ಟ್ರಂಪ್ ಅನ್ನು ಕೆರಳಿಸಿದೆ ಎನ್ನಲಾಗಿದೆ. ಅಮೆರಿಕದ ಸುಂಕಗಳಿಗೆ ಮತ್ತೊಂದು ಕಾರಣ ಕೃಷಿ ಎಂದು ಜೆಫರೀಸ್ ವರದಿ ಹೇಳಿದೆ. ತನ್ನ ರೈತರನ್ನು ರಕ್ಷಿಸುವ ಸಲುವಾಗಿ ಭಾರತ ಸರ್ಕಾರ ಯಾವುದೇ ಕೃಷಿ ವಲಯವನ್ನು ಆಮದುಗಳಿಗೆ ತೆರೆಯಲು ಒಪ್ಪಿಲ್ಲ ಎಂದು ವರದಿ ಉಲ್ಲೇಖಿಸಿದೆ. ಭಾರತದಲ್ಲಿ ಸುಮಾರು 250 ದಶಲಕ್ಷ ರೈತರು ಮತ್ತು ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ ಮತ್ತು ದೇಶದ ಶೇ.40ರಷ್ಟು ಉದ್ಯೋಗಿಗಳು ಕೃಷಿ ವಲಯದಲ್ಲಿದ್ದಾರೆ. ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಈ ತಿಂಗಳ ಆರಂಭದಲ್ಲಿ, ಭಾರತವು ಅಮೆರಿಕದೊಂದಿಗಿನ ವ್ಯಾಪಾರ ಮಾತುಕತೆಗಳಲ್ಲಿ ಸ್ವಲ್ಪ ಮಟ್ಟಿಗೆ ಹಠಮಾರಿ ಧೋರಣೆ ತೋರುತ್ತಿದೆ ಎಂದು ಹೇಳಿದ್ದರು. ಈ ಸುಂಕಗಳಿಗೆ ಪ್ರತಿಕ್ರಿಯಿಸಿದ್ದ ಭಾರತ, ಭಾರತವನ್ನು ಗುರಿಯಾಗಿಸಿರುವುದು ಅನ್ಯಾಯ ಮತ್ತು ಅವಿವೇಕದ ಕ್ರಮ ಎಂದು ಹೇಳಿತ್ತು. ಭಾರತದ ಮೇಲೆ ಹೀಗೆ ಒತ್ತಡ ಹೇರುವುದು, ಅದನ್ನು ಚೀನಾದತ್ತ ಹತ್ತಿರವಾಗುವಂತೆ ಮಾಡುವ ಅಪಾಯವಿದೆ ಎಂದು ಜೆಫರೀಸ್ ವರದಿ ಎಚ್ಚರಿಸಿದೆ. ಐದು ವರ್ಷಗಳ ನಂತರ ಉಭಯ ದೇಶಗಳು ಸೆಪ್ಟೆಂಬರ್ನಿಂದ ನೇರ ವಿಮಾನಯಾನವನ್ನು ಪುನರಾರಂಭಿಸಲಿವೆ. ಅದಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1 ರಂದು ಎಸ್ಸಿಒ ಶೃಂಗಸಭೆಯಲ್ಲಿ ಭಾಗಿಯಾಗಲು ಚೀನಾಗೆ ಭೇಟಿ ನೀಡುತ್ತಿದ್ದಾರೆ. ಗಲ್ವಾನ್ ಸಂಘರ್ಷದ ಬಳಿಕ ಮೊದಲ ಭೇಟಿಯಾಗಿದ್ದು, ಅಮೆರಿಕದ ಆತಂಕವನ್ನು ಹೆಚ್ಚಿಸಿದೆ.