ಜಮ್ಮು &ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಪರಿಣಾಮ ಜಮ್ಮುನಲ್ಲಿ ಅನೇಕ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಭಾರತೀಯ ಹವಾಮಾನ ಇಲಾಖೆಯು ಭಾನುವಾರ ಎಲ್ಲಾ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿ, ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಸಂಭಾವ್ಯ ಮೋಡಸ್ಫೋಟ, ದಿಢೀರ್ ಪ್ರವಾಹ ಮತ್ತು ಭೂಕುಸಿತಗಳ ಬಗ್ಗೆಯೂ ಎಚ್ಚರಿಕೆ ನೀಡಿತ್ತು. ಜೊತೆಗೆ ನದಿ ಪ್ರವಾಹ ಮತ್ತು ಭೂಕುಸಿತ ಪೀಡಿತ ಪ್ರದೇಶಗಳತ್ತ ತೆರಳಂತೆ ಜನರಿಗೆ ಎಚ್ಚರಿಕೆ ನೀಡಿತ್ತು. ಭಾರೀ ಮಳೆಯಿಂದಾಗಿ ಜಮ್ಮು-ಪಠಾಣ್‌ಕೋಟ್ ರಾಷ್ಟ್ರೀಯ ಹೆದ್ದಾರಿ ಮತ್ತು ಕಥುವಾ ಜಿಲ್ಲೆಯ ಸಹರ್ ಖಾದ್ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಪ್ರಮುಖ ಸೇತುವೆಗೆ ಹಾನಿಯಾಗಿದೆ. ಇದರಿಂದಾಗಿ ಸೇತುವೆಗಳ ಮೇಲೆ ಸಂಚಾರವನ್ನು ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕಥುವಾ ಉಪ ಆಯುಕ್ತ ರಾಜೇಶ್ ಶರ್ಮಾ, ಒಂದು ಸೇತುವೆಗೆ ಭಾರೀ ಹಾನಿಯಾಗಿದೆ. ಇನ್ನೊಂದು ಸೇತುವೆಗೂ ಅಲ್ಪ ಪ್ರಮಾಣ ಹಾನಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆಗಳ ಮೇಲೆ ಸಂಚಾರ ನಿರ್ಬಂಧಿಸಿದ್ದೇವೆ ಎಂದು ಅವರು ಹೇಳಿದರು. ಹೆದ್ದಾರಿ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಸೇತುವೆಯನ್ನು ಪರಿಶೀಲಿಸಿದ್ದಾರೆ. ಧಾರಾಕಾರ ಮಳೆ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಹೈ ಅಲರ್ಟ್ ಹೊರಡಿಸಿ, ಸಂಬಂಧಿತ ಎಲ್ಲ ಇಲಾಖೆಗಳು ಜಾಗರೂಕರಾಗಿರಲು ನಿರ್ದೇಶಿಸಿದ್ದಾರೆ.
ನಿಯಂತ್ರಣ ಕೊಠಡಿಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುವಂತೆ ಮತ್ತು ತಕ್ಷಣವೇ ಸ್ಪಂದಿಸಬೇಕೆಂದು ಸೂಚಿಸಿದ್ದಾರೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಭಾರೀ ಮಳೆಯಿಂದ ಜಮ್ಮು ನಗರದ ಹಲವಾರು ಪ್ರದೇಶಗಳು ಜಲಾವೃತವಾಗಿವೆ. ಜಾನಿಪುರ, ರೂಪ್ ನಗರ, ತಲಾಬ್ ಟಿಲ್ಲೂ, ಜ್ಯುವೆಲ್ ಚೌಕ್, ನ್ಯೂ ಪ್ಲಾಟ್ ಮತ್ತು ಸಂಜಯ್ ನಗರದಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಮನೆಗಳ ಗೋಡೆಗಳು ಕುಸಿದಿದ್ದು, ಸುಮಾರು ಒಂದು ಡಜನ್ ವಾಹನಗಳು ಹಠಾತ್ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.