ನವದೆಹಲಿ: ನಿಮಗೆ ಸಮಸ್ಯೆ ಇದ್ದರೆ ನಮ್ಮಿಂದ ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸಬೇಡಿ ಎಂದು ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿರುವುದನ್ನು ವಿರೋಧಿಸುತ್ತಿರುವ ಅಮೆರಿಕ ಮತ್ತು ಯೂರೋಪ್ ದೇಶಗಳಿಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಶನಿವಾರ ತಿರುಗೇಟು ನೀಡಿದರು. ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವ ಮೂಲಕ ಭಾರತ ಭಾರೀ ಲಾಭ ಪಡೆಯುತ್ತಿದೆ ಎಂಬ ಅಮೆರಿಕದ ಟೀಕೆಯನ್ನು ಅವರು ತಿರಸ್ಕರಿಸಿದರು. ಭಾರತದ ತೈಲ ಖರೀದಿ ರಾಷ್ಟ್ರೀಯ ಮತ್ತು ಜಾಗತಿಕ ಹಿತಾಸಕ್ತಿಯಿಂದ ಕೂಡಿದೆ. ಈ ಬಗ್ಗೆ ನಾವು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅದು ನಮ್ಮ ಹಕ್ಕು ಕೂಡಾ. ಭಾರತದಿಂದ ತೈಲ ಅಥವಾ ಸಂಸ್ಕರಿಸಿದ ಉತ್ಪನ್ನಗಳನ್ನು ಖರೀದಿಸುವಲ್ಲಿ ನಿಮಗೆ ಸಮಸ್ಯೆಗಳಿದ್ದರೆ, ಖರೀದಿಸಬೇಡಿ. ಯಾರೂ ನಿಮ್ಮನ್ನು ಖರೀದಿಸುವಂತೆ ಒತ್ತಾಯಿಸುವುದಿಲ್ಲ ಎಂದು ತಿಳಿಸಿದರು. ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ರಿಯಾಯಿತಿ ದರದಲ್ಲಿ ಪಡೆದು, ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳನ್ನು ಯುರೋಪ್ ಮತ್ತು ಇತರ ಸ್ಥಳಗಳಿಗೆ ಪ್ರೀಮಿಯಂ ದರದಲ್ಲಿ ಮಾರಾಟ ಮಾಡಿ ಲಾಭ ಗಳಿಸುತ್ತಿದೆ ಎಂದು ಅಮೆರಿಕ ಸರ್ಕಾರದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಬುಧವಾರ ಆರೋಪಿಸಿದ್ದರು. ಈ ಹಿಂದೆಯೂ ಇವರು ಇಂಥದ್ದೇ ಆರೋಪಗಳನ್ನು ಮಾಡಿದ್ದರು. ರಷ್ಯಾದ ಅತಿ ದೊಡ್ಡ ಕಚ್ಚಾ ತೈಲ ಆಮದುದಾರ ಚೀನಾಕ್ಕೆ ನಮ್ಮ ಮೇಲೆ ಅನುಸರಿಸಿದ ಮಾನದಂಡವನ್ನು ನೀವು ಏಕೆ ಬಳಸುತ್ತಿಲ್ಲ?. ಭಾರತವನ್ನು ಗುರಿಯಾಗಿಸಲು ಪ್ರಯೋಗಿಸುವ ಅದೇ ನಿಮ್ಮ ವಾದಗಳನ್ನು ಚೀನಾಕ್ಕೆ ಅನ್ವಯಿಸಿಲ್ಲ. ಅಷ್ಟೇ ಅಲ್ಲ, ರಷ್ಯಾದ ಅತಿದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಆಮದುದಾರ ಯುರೋಪಿಯನ್ ಒಕ್ಕೂಟಕ್ಕೆ ಅನ್ವಯಿಸಿಲ್ಲ ಎಂದು ಜೈಶಂಕರ್ ಟೀಕಿಸಿದರು. ನಾವು ಯುದ್ಧಕ್ಕೆ (ರಷ್ಯಾ-ಉಕ್ರೇನ್) ಹಣಕಾಸು ಒದಗಿಸುತ್ತಿದ್ದೇವೆ ಅಥವಾ ಪುಟಿನ್ ಅವರ ಖಜಾನೆಗೆ ಹಣ ಹಾಕುತ್ತಿದ್ದೇವೆ ಎಂದು ಹೇಳುತ್ತೀರಿ. ಆದರೆ, ರಷ್ಯಾ-ಯುರೋಪಿಯನ್ ಒಕ್ಕೂಟದ ವ್ಯಾಪಾರ ಭಾರತ-ರಷ್ಯಾ ವ್ಯಾಪಾರಕ್ಕಿಂತಲೂ ದೊಡ್ಡದು. ಹಾಗಾದರೆ ಯುರೋಪ್, ಪುಟಿನ್ ಅವರ ಖಜಾನೆಗೆ ಹಣವನ್ನು ಹಾಕುತ್ತಿಲ್ಲವೇ? ಎಂದು ಜೈಶಂಕರ್ ಪ್ರಶ್ನಿಸಿದರು. ಇದೇ ಸಂದರ್ಭದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ರಷ್ಯಾದಿಂದ ಭಾರತದ ಕಚ್ಚಾ ತೈಲ ಖರೀದಿ ಹೆಚ್ಚಾಗಿದೆ ಎಂಬುದನ್ನು ಜೈಶಂಕರ್ ಒಪ್ಪಿಕೊಂಡಿದ್ದು, ಈ ಖರೀದಿ ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳಿಂದ ನಡೆಸಲ್ಪಡುತ್ತಿದೆ ಎಂದು ತಿಳಿಸಿದರು. ತೈಲ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ನಾವು ರಷ್ಯಾದಿಂದ ತೈಲ ಖರೀದಿಸುತ್ತಿದ್ದೇವೆ. ಅದು ನಮ್ಮ ರಾಷ್ಟ್ರೀಯ ಹಿತಾಸಕ್ತಿ ಎಂದರು. 2019-20ರಲ್ಲಿ ಭಾರತದ ಒಟ್ಟು ತೈಲ ಆಮದಿನಲ್ಲಿ ಶೇ 1.7ರಷ್ಟಿದ್ದ ರಷ್ಯಾದ ಪಾಲು 2024-25ರಲ್ಲಿ ಶೇ 35.1ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ರಷ್ಯಾ ಭಾರತದ ಅತಿದೊಡ್ಡ ತೈಲ ಪೂರೈಕೆ ದೇಶವಾಗಿದೆ.