ಟೊಕಿಯೋ : ಪ್ರಧಾನಿ ನರೇಂದ್ರ ಮೋದಿ ಅವರ ಜಪಾನ್ ಭೇಟಿ ವೇಳೆ ಮಹತ್ವದ ಘೋಷಣೆ ಆಗುವ ಸಾಧ್ಯತೆ ಇದೆ. ಕ್ಯೂಡೋ ನ್ಯೂಸ್ ಪ್ರಕಟಿಸಿದ ವರದಿ ಪ್ರಕಾರ ನರೇಂದ್ರ ಮೋದಿ (Narendra Modi) ಅವರು ಜಪಾನ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಪಾನ್ ಸರ್ಕಾರ 10 ಟ್ರಿಲಿಯನ್ ಯೆನ್ (ಸುಮಾರು 68 ಬಿಲಿಯನ್ ಡಾಲರ್) ಮೊತ್ತದ ಹೂಡಿಕೆಗಳನ್ನು (Investment) ಪ್ರಕಟಿಸುವ ಸಾಧ್ಯತೆ ಇದೆ. ಭಾರತದಲ್ಲಿ ಮುಂದಿನ ಕೆಲ ವರ್ಷಗಳಲ್ಲಿ ಜಪಾನ್ 6 ಲಕ್ಷ ಕೋಟಿ ರೂ ಮೌಲ್ಯದಷ್ಟು ಹೂಡಿಕೆ ಮಾಡಲು ಯೋಜಿಸಿರುವುದು ತಿಳಿದುಬಂದಿದೆ. ಜಪಾನ್ ಪ್ರಧಾನಿ ಫುಮಿಯೋ ಕಿಶಿದಾ ಅವರು 2022ರ ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಬಂದಿದ್ದಾಗ ಮುಂದಿನ ಐದು ವರ್ಷದಲ್ಲಿ ಜಪಾನ್ನಿಂದ 5 ಟ್ರಿಲಿಯನ್ ಯೆನ್ ಮೊತ್ತದಷ್ಟು ಹೂಡಿಕೆ ಮಾಡಲಾಗಿತ್ತು. ಈಗ ಅದನ್ನೂ ಒಳಗೊಂಡಂತೆ ಹೂಡಿಕೆಯನ್ನು 10 ಟ್ರಿಲಿಯನ್ ಯೆನ್ ಗೆ ಹೆಚ್ಚಿಸುವ ಘೋಷಣೆ ಆಗಬಹುದು. ಭಾರತದ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 29ಕ್ಕೆ ಜಪಾನ್ಗೆ ಹೋಗಲಿದ್ದಾರೆ. ಮೂರು ದಿನಗವರೆಗೆ ಅವರು ಇರಲಿದ್ದು, ಜಪಾನ್-ಭಾರತ ಸಮಿಟ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆ ಬಳಿಕ ಎರಡೂ ದೇಶಗಳ ಪ್ರಧಾನಿಗಳಿಂದ ಜಂಟಿ ಹೇಳಿಕೆ ಹೊರಡಬಹುದು. ನರೇಂದ್ರ ಮೋದಿ ಅವರು ಎರಡು ವರ್ಷದ ಬಳಿಕ ಜಪಾನ್ಗೆ ಹೋಗುತ್ತಿದ್ದಾರೆ. 2023ರ ಮೇನಲ್ಲಿ ಹೋದಾಗ ಜಪಾನ್ ಪ್ರಧಾನಿಯಾಗಿದ್ದವರು ಫುಮಿಯೋ ಕಿಶಿದಾ. ಆಗ ಗ್ರೂಪ್ ಆಫ್ ಸೆವೆನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ಈ ಬಾರಿ ಶಿಗೆರು ಇಶಿಬಾ ಅವರು ಪ್ರಧಾನಿಯಾಗಿದ್ದಾರೆ. ದ್ವಿಪಕ್ಷೀಯ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಮೋದಿ. ನರೇಂದ್ರ ಮೋದಿ ಅವರ ಜಪಾನ್ ಭೇಟಿ ವೇಳೆ ಮುಖ್ಯ ಗಮನ ಇರುವುದು ಮುಂಬೈ ಅಹ್ಮದಾಬಾದ್ ಬುಲೆಟ್ ಟ್ರೈನ್ ಪ್ರಾಜೆಕ್ಟ್ ಅನ್ನು ಬೇಗ ಮುಗಿಸುವುದರ ಕುರಿತಾಗಿ. ಹೊಸ ತಲೆಮಾರಿನ ಟ್ರೈನ್ ಮಾಡಲ್ ಎನಿಸಿದ ಇ10 ಸರಣಿಯ ಶಿಂಕನ್ಸೆನ್ ಅನ್ನು ಭಾರತಕ್ಕೆ ನೀಡಲಿದೆ ಜಪಾನ್. ಈ ಅಡ್ವಾನ್ಸ್ ರೈಲು ಎರಡೂ ದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಬಹುದು. ಭಾರತ ಮತ್ತು ಚೀನಾ ನಡುವಿನ ವ್ಯಾಪಾರ ಬಾಂಧವ್ಯದ ಗಟ್ಟಿತನಕ್ಕೆ ಇದು ಕನ್ನಡಿ ಹಿಡಿದಿದೆ.