ಅಮೆರಿಕ : ಭಾರತದ ಮೇಲೆ ಅಮೆರಿಕ ಸುಂಕಗಳನ್ನು ವಿಧಿಸುವುದರಿಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ತಡೆಯಲು ಅಥವಾ ಉಕ್ರೇನ್ ಆಕ್ರಮಣವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಅಮೆರಿಕದ ಹೌಸ್ ಫಾರಿನ್ ಅಫೇರ್ಸ್ ಕಮಿಟಿ ಹೇಳಿದೆ. ಈ ಬಗ್ಗೆ ಅಮೆರಿಕದ ಖಜಾನೆ ಕಾರ್ಯದರ್ಶಿ ಬೆಸೆಂಟ್ ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಹಾಕಿಕೊಂಡಿದ್ದಾರೆ. ಅವರ ಹೇಳಿಕೆ ಪ್ರಕಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಅಲಾಸ್ಕಾದಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಮಾತುಕತೆಗಳು ಸರಿಯಾಗಿ ಸಾಗದಿದ್ದರೇ, ರಷ್ಯಾದ ತೈಲವನ್ನು ಖರೀದಿಸುತ್ತಿರುವ ಭಾರತದ ಮೇಲೆ ವಿಧಿಸಲಾಗಿರುವ ದ್ವಿತೀಯಕ ನಿರ್ಬಂಧಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದಿದ್ದಾರೆ.
ಭಾರತದ ಮೇಲೆ ಸುಂಕ ವಿಧಿಸುವುದು ಪುಟಿನ್ ಅವರನ್ನು ತಡೆಯುವುದಿಲ್ಲ. ಟ್ರಂಪ್ ನಿಜವಾಗಿಯೂ ರಷ್ಯಾದ ಅಕ್ರಮ ಆಕ್ರಮಣವನ್ನು ನಿಲ್ಲಿಸಲು ಬಯಸುವುದಾದರೆ, ಪುಟಿನ್ಗೆ ಶಿಕ್ಷೆ ವಿಧಿಸಿ ಮತ್ತು ಉಕ್ರೇನ್ಗೆ ಅಗತ್ಯವಿರುವ ಮಿಲಿಟರಿ ನೆರವು ನೀಡಲಿ. ಉಳಿದದ್ದೆಲ್ಲಾ ಕೇವಲ ಕಣ್ಣೊರೆಸುವ ತಂತ್ರ ಎಂದು ಹೌಸ್ ಫಾರಿನ್ ಅಫೇರ್ಸ್ ಕಮಿಟಿ ಡೆಮಾಕ್ರಟ್ಗಳು ಹೇಳಿದ್ದಾರೆ. ಇದರ ಅರ್ಥ ಡೆಮಾಕ್ರಟಿಕ್ ಪಕ್ಷವು ಟ್ರಂಪ್ ಆಡಳಿತದ ವಿದೇಶಾಂಗ ನೀತಿಯನ್ನು ಟೀಕಿಸುತ್ತಿದೆ ಮತ್ತು ಉಕ್ರೇನ್ ಸಂಘರ್ಷವನ್ನು ಪರಿಹರಿಸಲು ಭಾರತದ ಮೇಲೆ ಒತ್ತಡ ಹೇರುವ ಬದಲು ರಷ್ಯಾದ ಮೇಲೆ ನೇರ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸುತ್ತಿದೆ.
ಬೆಸೆಂಟ್ ನೀಡಿದ ಒಂದು ಸಂದರ್ಶನದಲ್ಲಿ ಅಧ್ಯಕ್ಷ ಪುಟಿನ್ ಬಗ್ಗೆ ಎಲ್ಲರಿಗೂ ಬೇಸರವಾಗಿದೆ ಎಂದು ನಾನು ಭಾವಿಸುತ್ತೇನೆ. ಅವರು ಪೂರ್ಣ ಪ್ರಮಾಣದಲ್ಲಿ ಮಾತುಕತೆಗೆ ಬರುತ್ತಾರೆಂದು ನಾವು ನಿರೀಕ್ಷಿಸಿದ್ದೆವು. ಆದರೆ, ಪುಟಿನ್ ಯುದ್ಧವನ್ನು ಕೊನೆಗೊಳಿಸಲು ಅಥವಾ ಕೆಲವು ಬೇಡಿಕೆಗಳಿಗೆ ಒಪ್ಪಿಕೊಳ್ಳಲು ಸಿದ್ಧರಾಗಿರಬಹುದು ಎಂದು ಬೆಸೆಂಟ್ ಅಭಿಪ್ರಾಯ ಪಟ್ಟಿದ್ದಾರೆ. ಹೇಗೆ ಅಮೆರಿಕ ರಷ್ಯಾ ಮತ್ತು ಅದರ ಮಿತ್ರ ರಾಷ್ಟ್ರಗಳ ಮೇಲೆ ಒತ್ತಡ ಹೇರಲು ಆರ್ಥಿಕ ನಿರ್ಬಂಧಗಳನ್ನು ಸಾಧನವಾಗಿ ಬಳಸುತ್ತಿದೆ ಎಂಬುದನ್ನು ಇವರ ಹೇಳಿಕೆ ಅರ್ಥೈಸುತ್ತಿದೆ. ಈ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರತಿಕ್ರಿಯೆ ನೀಡಿದೆ: ಅದೇನೆಂದರೆ, ಭಾರತವನ್ನು ಗುರಿಯಾಗಿಸುವುದು ಅನಗತ್ಯ ಮತ್ತು ಅವಿವೇಕದ ಕ್ರಮವೆಂದಿದೆ. ಯಾವುದೇ ಪ್ರಮುಖ ಆರ್ಥಿಕತೆಯಂತೆ, ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆರ್ಥಿಕ ಭದ್ರತೆಯನ್ನು ರಕ್ಷಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಸಚಿವಾಲಯ ತಿರುಗೇಟು ನೀಡಿದೆ. ಇದರರ್ಥ, ಅಮೆರಿಕವು ಸುಂಕ ವಿಧಿಸಿದರೂ, ಭಾರತವು ತನ್ನ ಆರ್ಥಿಕ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ಪ್ರತಿಕ್ರಿಯೆ ನೀಡುತ್ತದೆ ಮತ್ತು ಅಗತ್ಯವಿದ್ದರೆ ಪ್ರತಿರೋಧ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಾಗಿದೆ ಎಂಬುದನ್ನು ತೋರಿಸಿದೆ.