ನವದೆಹಲಿ: 79ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಭಾರತದ ರಕ್ಷಣಾ ಇತಿಹಾಸದಲ್ಲಿ ಆಪರೇಷನ್ ಸಿಂಧೂರ್ ಒಂದು ಮೈಲಿಗಲ್ಲು ಎಂದು ಶ್ಲಾಘಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ ಅವರು, ದೇಶದ ಅಭಿವೃದ್ಧಿ, ಎದುರಿಸುತ್ತಿರುವ ಸವಾಲುಗಳು ಹಾಗೂ ವಿಶೇಷವಾಗಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಮುಗ್ಧ ನಾಗರಿಕರ ಹತ್ಯೆಯನ್ನು ತಮ್ಮ ಭಾಷಣದಲ್ಲಿ ಖಂಡಿಸಿದ ರಾಷ್ಟ್ರಪತಿ, ದಾಳಿಗೆ ಉತ್ತರವಾಗಿ ಭಾರತೀಯ ಸಶಸ್ತ್ರ ಪಡೆಗಳು ಗಡಿಯುದ್ದಕ್ಕೂ ಭಯೋತ್ಪಾದಕ ತಾಣಗಳನ್ನು ನಾಶಮಾಡುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿವೆ. ಈ ವರ್ಷ, ನಾವು ಭಯೋತ್ಪಾದನೆಯ ಉಪದ್ರವವನ್ನು ಎದುರಿಸಬೇಕಾಯಿತು. ಭಯೋತ್ಪಾದನೆಯ ವಿರುದ್ಧದ ಜಾಗತಿಕ ಹೋರಾಟದಲ್ಲಿ ಆಪರೇಷನ್ ಸಿಂಧೂರ್ ಒಂದು ಹೆಗ್ಗುರುತು ಎಂದರು.
"ನಮ್ಮ ಸಶಸ್ತ್ರ ಪಡೆಗಳು, ಕಾರ್ಯತಂತ್ರದ ಸ್ಪಷ್ಟತೆ ಮತ್ತು ತಾಂತ್ರಿಕ ಸಾಮರ್ಥ್ಯದೊಂದಿಗೆ, ಗಡಿಯಾಚೆಗಿನ ಭಯೋತ್ಪಾದಕ ಕೇಂದ್ರಗಳನ್ನು ನಾಶಪಡಿಸಿದ್ದು ಹೆಮ್ಮೆಯ ವಿಚಾರ. ಭಯೋತ್ಪಾದನೆಯ ವಿರುದ್ಧ ಮಾನವೀಯತೆಯ ಹೋರಾಟದಲ್ಲಿ ಆಪರೇಷನ್ ಸಿಂಧೂರ್ ಒಂದು ಉದಾಹರಣೆಯಾಗಿ ಇತಿಹಾಸದಲ್ಲಿ ಉಳಿಯುತ್ತದೆ. ಭಾರತದ ಏಕತೆಯೇ ಅದರ ದೊಡ್ಡ ಶಕ್ತಿ ಎಂದು ಹೇಳಿದ ಮುರ್ಮು, ಇದು ಸಾರ್ವಜನಿಕರ ಪ್ರತಿಕ್ರಿಯೆಯಲ್ಲಿ ಮಾತ್ರವಲ್ಲದೆ, ಭಾರತದ ನಿಲುವನ್ನು ವಿವರಿಸಲು ವಿದೇಶಿ ಸರ್ಕಾರಗಳೊಂದಿಗೆ ತೊಡಗಿಸಿಕೊಂಡ ಬಹುಪಕ್ಷ ಸಂಸದೀಯ ನಿಯೋಗಗಳಲ್ಲಿಯೂ ಗೋಚರಿಸಿದೆ. ನಾವು ಆಕ್ರಮಣಕಾರಿ ಅಲ್ಲ, ಆದರೆ ನಮ್ಮ ನಾಗರಿಕರ ರಕ್ಷಣೆಗಾಗಿ ಪ್ರತೀಕಾರ ತೀರಿಸಿಕೊಳ್ಳಲು ನಾವು ಹಿಂಜರಿಯುವುದಿಲ್ಲ ಅನ್ನೋದನ್ನು ಜಗತ್ತು ಗುರುತಿಸಿದೆ" ಎಂದು ತಿಳಿಸಿದರು. "ರಾಷ್ಟ್ರವನ್ನು ವಿಭಜಿಸಲು ಪ್ರಯತ್ನಿಸಿದವರಿಗೆ ದೇಶದ ಏಕತೆ ಸೂಕ್ತ ಪ್ರತಿಕ್ರಿಯೆ ನೀಡಿದೆ. ಆಪರೇಷನ್ ಸಿಂಧೂರ್ ರಕ್ಷಣಾ ವಲಯದಲ್ಲಿ 'ಆತ್ಮನಿರ್ಭರ ಭಾರತ' (ಸ್ವಾವಲಂಬಿ ಭಾರತ) ಕಾರ್ಯಾಚರಣೆಯ ಯಶಸ್ಸಿಗೆ ಸಾಕ್ಷಿ ಎಂದು ಮುರ್ಮು ಒತ್ತಿ ಹೇಳಿದರು.
"ನಾವು ಸರಿಯಾದ ಹಾದಿಯಲ್ಲಿದ್ದೇವೆ ಅನ್ನೋದಕ್ಕೆ ಇದು ಸಾಕ್ಷಿಯಾಗಿ ನಿಂತಿದೆ. ನಮ್ಮ ಸ್ಥಳೀಯ ಉತ್ಪಾದನೆಯು ನಮ್ಮ ಅನೇಕ ಭದ್ರತಾ ಅವಶ್ಯಕತೆಗಳನ್ನು ಪೂರೈಸುವಲ್ಲಿ ಹಾಗೂ ನಮ್ಮನ್ನು ಸ್ವಾವಲಂಬಿಗಳನ್ನಾಗಿ ಮಾಡುವ ನಿರ್ಣಾಯಕ ಮಟ್ಟ ತಲುಪಿದ್ದು ಹೆಮ್ಮೆಯ ವಿಚಾರ. ಸ್ವಾತಂತ್ರ್ಯಾ ನಂತರದ ಭಾರತದ ರಕ್ಷಣಾ ಇತಿಹಾಸದಲ್ಲಿ ಇವು ಹೆಗ್ಗುರುತುಗಳಾಗಿವೆ" ಎಂದು ಅವರು ಹೇಳಿದರು. ದೇಶದ ಅಭಿವೃದ್ಧಿ ಕುರಿತು ಪ್ರಸ್ತಾಪಿಸಿದ ಮುರ್ಮು, ಡಿಜಿಟಲ್ ಪಾವತಿಗಳು, ನಗರ ಮೂಲಸೌಕರ್ಯ ಮತ್ತು ಕೃಷಿ ಸುಧಾರಣೆಯಲ್ಲಿ ಭಾರತದ ಪ್ರಗತಿಯನ್ನು ಶ್ಲಾಘಿಸಿದರು. "ಗಾಂಧೀಜಿಯವರ ಆದರ್ಶವನ್ನು ಅರಿತುಕೊಳ್ಳಲು ಮತ್ತು ರಾಷ್ಟ್ರದಿಂದ ಭ್ರಷ್ಟಾಚಾರವನ್ನು ಕಿತ್ತೊಗೆಯಲು ಸಾರ್ವಜನಿಕರು ಪ್ರತಿಜ್ಞೆ ಮಾಡಬೇಕು" ಎಂದು ಒತ್ತಾಯಿಸಿದರು. ಕಳೆದ ವಾರ ನಡೆದ 'ರಾಷ್ಟ್ರೀಯ ಕೈಮಗ್ಗ ದಿನ' ಆಚರಣೆ ಉಲ್ಲೇಖಿಸಿ ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದರು.
'ಮೇಕ್-ಇನ್-ಇಂಡಿಯಾ' ಅಭಿಯಾನ ಮತ್ತು 'ಆತ್ಮನಿರ್ಭರ ಭಾರತ ಅಭಿಯಾನ'ದಂತಹ ರಾಷ್ಟ್ರೀಯ ಉತ್ಪನ್ನಗಳಿಗೆ ಪ್ರೇರಣೆ ನೀಡುತ್ತಿದೆ. ಭಾರತೀಯ ಉತ್ಪನ್ನಗಳನ್ನು ಖರೀದಿಸಲು ಮತ್ತು ಬಳಸಲು ನಾವು ಸಂಕಲ್ಪ ಮಾಡೋಣ" ಎಂದು ಹೇಳಿದ ಅವರು, ನಾಗರಿಕರು ದೇಶದ ಕುಶಲಕರ್ಮಿಗಳನ್ನು ಬೆಂಬಲಿಸಲು ಮತ್ತು ದೇಶದ ಸ್ವಾವಲಂಬನೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿದರು.