ಉತ್ತರಾಖಂಡ : ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಮಾಡಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉತ್ತರಾಖಂಡ, ಮತ್ತೊಂದು ಕಠಿಣ ಕಾನೂನನ್ನು ಜಾರಿ ಮಾಡಲು ಮುಂದಾಗಿದೆ. ಸಾಮಾಜಿಕ ಪಿಡುಗಾಗಿ ಕಾಡುತ್ತಿರುವ ಮತಾಂತರಕ್ಕೆ ಕಡಿವಾಣ ಹಾಕಲು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ನೇತೃತ್ವದ ಸಚಿವ ಸಂಪುಟವು, ಮತಾಂತರ ವಿರೋಧಿ ಕಾನೂನಿಗೆ ಮಹತ್ವದ ತಿದ್ದುಪಡಿ ತರಲು ಬುಧವಾರ ಅನುಮೋದನೆ ನೀಡಿದೆ. ಧಾರ್ಮಿಕ ಸ್ವಾತಂತ್ರ್ಯ ಮಸೂದೆಗೆ ಕಠಿಣ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಯಾವುದೇ ಮತದಿಂದ ಇನ್ನೊಬ್ಬರನ್ನು ಪರಿವರ್ತಿಸಿದಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ದೊಡ್ಡ ಮಟ್ಟದಲ್ಲಿ ದಂಡ ವಿಧಿಸುವ ಅವಕಾಶವನ್ನು ಕಾನೂನಿಗೆ ನೀಡಲು ಪ್ರಸ್ತಾಪಿಸಲಾಗಿದೆ.
ತಿದ್ದುಪಡಿ ಮಸೂದೆಯಲ್ಲಿ ಏನಿದೆ? ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಮಸೂದೆ-2025 ಅನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ ನಡೆಸಲಾಗಿದೆ. ಅದರಂತೆ ಮಸೂದೆಯಲ್ಲಿ ಮಹತ್ವದ ಅಂಶಗಳನ್ನು ಸೇರಿಸಲಾಗಿದೆ. ಅಕ್ರಮವಾಗಿ ಧಾರ್ಮಿಕ ಮತಾಂತರ ನಡೆಸಿದರೆ ಕಠಿಣ ಶಿಕ್ಷೆಯ ಜೊತೆಗೆ, ಡಿಜಿಟಲ್ ಮಾಧ್ಯಮದ ಮೂಲಕ ಮಾಡುವ ಪ್ರಚಾರಕ್ಕೆ ನಿಷೇಧ ಮತ್ತು ಸಂತ್ರಸ್ತರಿಗೆ ರಕ್ಷಣೆಯಂತಹ ನಿಬಂಧನೆಗಳನ್ನು ಸೇರಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಮತಾಂತರಕ್ಕೆ ಒಡ್ಡುವ ಆಮಿಷಗಳಾದ ಉಡುಗೊರೆಗಳು, ನಗದು, ಉದ್ಯೋಗ, ಉಚಿತ ಶಿಕ್ಷಣ, ವಿವಾಹದ ಭರವಸೆ, ಧಾರ್ಮಿಕ ನಂಬಿಕೆಗೆ ನೋವುಂಟು ಮಾಡುವುದು ಅಥವಾ ಇನ್ನೊಂದು ಧರ್ಮವನ್ನು ವೈಭವೀಕರಿಸುವುದು, ಇವೆಲ್ಲವನ್ನೂ ಅಪರಾಧ ಎಂದು ವರ್ಗೀಕರಿಸುದರ ಜೊತೆಗೆ, ಮಸೂದೆಯಲ್ಲಿ 'ಮತಾಂತರಕ್ಕೆ ಪ್ರಚೋದನೆ' ಎಂದರೇನು ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ.
ಸಾಮಾಜಿಕ ಮಾಧ್ಯಮ, ಚಾಟ್ ಆ್ಯಪ್ಗಳ ಮೂಲಕ ಸಂದೇಶ ರವಾನೆ, ಯಾವುದೇ ಆನ್ಲೈನ್ ಮಾಧ್ಯಮದ ಮೂಲಕ ಮತಾಂತರವನ್ನು ಉತ್ತೇಜಿಸುವುದು ಅಥವಾ ಪ್ರಚೋದಿಸುವಂತಹ ಕೃತ್ಯಗಳು ಶಿಕ್ಷಾರ್ಹ ಅಪರಾಧ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಮೂರು ವರ್ಗಗಳಲ್ಲಿ ಅಪರಾಧಗಳನ್ನು ವಿಂಗಡಿಸಲಾಗಿದೆ. ಸಾಮಾನ್ಯ ತಪ್ಪಿಗೆ ಮೂರರಿಂದ 10 ವರ್ಷಗಳ ಜೈಲು ಶಿಕ್ಷೆ, ಸೂಕ್ಷ್ಮ ವರ್ಗಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಐದರಿಂದ 14 ವರ್ಷಗಳ ಜೈಲು ಶಿಕ್ಷೆ ಮತ್ತು ಗಂಭೀರ ಪ್ರಕರಣಗಳಲ್ಲಿ 20 ವರ್ಷ ಅಥವಾ ಜೀವಾವಧಿ ಶಿಕ್ಷೆ ಮತ್ತು ಭಾರಿ ದಂಡ ವಿಧಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.