image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಪ್ರವಾಹ ಪೀಡಿತ ಧಾರಾಲಿ ಪ್ರದೇಶದಲ್ಲಿ ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಪ್ರವಾಹ ಪೀಡಿತ ಧಾರಾಲಿ ಪ್ರದೇಶದಲ್ಲಿ ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಉತ್ತರಕಾಶಿ: ಭೀಕರ ಪ್ರವಾಹಕ್ಕೆ ತುತ್ತಾಗಿರುವ ಉತ್ತರಾಖಂಡದ ಉತ್ತರಕಾಶಿಯಲ್ಲಿನ ಧಾರಾಲಿ ಗ್ರಾಮದಲ್ಲಿ ಸಿಲುಕಿರುವ ಜನರ ಸ್ಥಳಾಂತರ ಕಾರ್ಯಕ್ಕೆ ನಾಲ್ಕು ಹೆಲಿಕಾಪ್ಟರ್​ಗಳನ್ನು ನಿಯೋಜಿಸಲಾಗಿದೆ. ಧಾರಾಲಿಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಮಣ್ಣು ಕುಸಿತ ಮತ್ತು ಹಠಾತ್ ಪ್ರವಾಹದ ನಂತರ ಗ್ರಾಮ ಸಂಪರ್ಕ ಕಡಿತಗೊಂಡಿದ್ದು ಅಲ್ಲಿ ಕೆಲವು ಭಾಗಗಳಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಘಟನೆಯಲ್ಲಿ ಇದುವರೆಗೆ 5 ಮಂದಿ ಸಾವನ್ನಪ್ಪಿದ್ದು, 50 ಮಂದಿ ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಆಶ್ರಯ ಪಡೆದಿರುವ ಜನರನ್ನು ರಕ್ಷಿಸಲು ಉತ್ತರಾಖಂಡ ನಾಗರಿಕ ವಿಮಾನಯಾನ ಪ್ರಾಧಿಕಾರದ ನಾಲ್ಕು ಹೆಲಿಕಾಪ್ಟರ್‌ಗಳು ಐದನೇ ದಿನದ ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿದೆ. ಚಿನೂಕ್​ ಹೆಲಿಕಾಪ್ಟರ್​​ ಪರಿಹಾರ ಶಿಬಿರಕ್ಕೆ ಸಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ರಸ್ತೆ ಸಂಪರ್ಕವನ್ನು ಸುಧಾರಿಸಲು ಗಂಗ್ನಾನಿ ಬಳಿಯ ಲಿಮ್ಚಿಗಡ್‌ನಲ್ಲಿ ಬೈಲಿ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಇದನ್ನು ಸಿದ್ಧಪಡಿಸುವ ಎಲ್ಲಾ ಕಾರ್ಯಗಳು ಸಾಗಿವೆ. ಧಾರಾಲಿಯಲ್ಲಿ ಹಠಾತ್ ಪ್ರವಾಹದಿಂದ ಹಾನಿಗೊಳಗಾದ ಸ್ಥಳದಲ್ಲಿ ಬಿದ್ದಿರುವ ಟನ್‌ಗಟ್ಟಲೆ ಅವಶೇಷಗಳಲ್ಲಿ ಕಾಣೆಯಾದವರನ್ನು ಹುಡುಕಲು ಸುಧಾರಿತ ಉಪಕರಣಗಳನ್ನು ಸಾಗಿಸುವ ಪ್ರಯತ್ನ ನಡೆದಿದೆ. ಆದರೆ, ಗಂಗೋತ್ರಿ ಹೆದ್ದಾರಿಯಲ್ಲಿ ಹಲವಾರು ಹಂತಗಳಲ್ಲಿ ಅಡಚಣೆ ಅಥವಾ ಬಿರುಕು ಉಂಟಾಗಿದೆ.

ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯ ಸಾಗಿದ್ದು, ಇಂದು ಸುಮಾರು 52 ಜನರನ್ನು ಮತ್ಲಿಯಲ್ಲಿರುವ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಹರ್ಷಿಲ್-ಧಾರಾಲಿಯ ವಿಪತ್ತು ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ತಂಡಗಳ ಜೊತೆಗೆ, ಎಲ್ಲಾ ರೀತಿಯ ಪರಿಹಾರ ಸಾಮಗ್ರಿಗಳ ಲಭ್ಯತೆಯನ್ನು ನೋಡಿಕೊಳ್ಳುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದ್ದು, ಆಪರೇಷನ್ ಧಾರಾಲಿ ಅಡಿಯಲ್ಲಿ, ಭಾರತೀಯ ಸೇನೆ ಉತ್ತರಾಖಂಡದ ಹರ್ಷಿಲ್‌ನಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕವನ್ನು ಪುನಃಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ.

ಹರ್ಸಿಲ್ ಬಳಿಯ ಲಿಮ್ಚಿಗಡ್ ಬಳಿ ನಿರಂತರ ಮಳೆಯ ನಡುವೆ ಸೇತುವೆ ದುರಸ್ತಿ ಕಾರ್ಯ ನಡೆದಿದೆ. ವಿಪತ್ತು ನಿರ್ವಹಣಾ ಪಡೆಗಳು ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯಲು ಪ್ರಯತ್ನಿಸುತ್ತಿವೆ. ಇದಕ್ಕಾಗಿ ಅತ್ಯುತ್ತಮ ತಂತ್ರಜ್ಞಾನದ ಕ್ಯಾಮರಾ ಮತ್ತು ಥರ್ಮಲ್ ಇಮೇಜಿಂಗ್ ಕ್ಯಾಮರಾ ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಬಳಸುತ್ತಿದೆ. ಜೊತೆಗೆ ಸಂತ್ರಸ್ತರ ಪತ್ತೆಗೆ ಶ್ವಾನದಳವನ್ನು ಕೂಡ ನಿಯೋಜಿಸಲಾಗಿದೆ. ಹಿಮಾಲಯದ ತಪ್ಪಲಿನಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಭೂಕುಸಿತದಿಂದಾಗಿ ಚಾರ್ ಧಾಮ್ ಯಾತ್ರೆಗೂ ಕೂಡ ಅಡ್ಡಿಯಾಗಿದೆ.

Category
ಕರಾವಳಿ ತರಂಗಿಣಿ