image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ವಿವಾದ ಮುಗಿಯುವವರೆಗೂ ವ್ಯಾಪಾರದ ಮಾತೇ ಬೇಡ - ಭಾರತಕ್ಕೆ ಟ್ರಂಪ್ ಬೆದರಿಕೆ ಬಾಂಬ್!

ವಿವಾದ ಮುಗಿಯುವವರೆಗೂ ವ್ಯಾಪಾರದ ಮಾತೇ ಬೇಡ - ಭಾರತಕ್ಕೆ ಟ್ರಂಪ್ ಬೆದರಿಕೆ ಬಾಂಬ್!

ವಾಷಿಂಗ್ಟನ್: ಭಾರತೀಯ (India) ಸರಕುಗಳ ಆಮದುಗಳ ಮೇಲಿನ ಸುಂಕವನ್ನು (Tariff) ದ್ವಿಗುಣಗೊಳಿಸಲು ಅಮೆರಿಕ (America) ಆಡಳಿತ ನಿರ್ಧರಿಸಿದ ಬಳಿಕವೂ ಭಾರತ ಹಾಗೂ ಅಮೆರಿಕ ನಡುವೆ ವ್ಯಾಪಾರದ ಮಾತುಕತೆ ನಡೆಯುತ್ತಿದೆ ಎಂಬ ವದಂತಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ (Donald Trump) ಬ್ರೇಕ್ ಹಾಕಿದ್ದಾರೆ. ಭಾರತದೊಂದಿಗಿನ ಸುಂಕ ವಿವಾದ ಬಗೆಹರಿಯುವವರೆಗೂ ವ್ಯಾಪಾರದ ಬಗ್ಗೆ ಮಾತುಕತೆಗಳನ್ನು ಮುಂದುವರಿಸುವುದಿಲ್ಲ ಎಂದು ಟ್ರಂಪ್‌ ಹೇಳಿದ್ದಾರೆ. ಈ ಮೊದಲು 25% ಸುಂಕ ಹೇರಿದ ಬಳಿಕ ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಬೇಕು. ಇಲ್ಲದೇ ಹೋದರೆ ಸುಂಕವನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತದೆ ಎಂದು ಟ್ರಂಪ್ ಎಚ್ಚರಿಸಿದ್ದರು. ಇದಾವುದಕ್ಕೂ ಕಿವಿಗೊಡದ ಭಾರತ ರಷ್ಯಾದ ತೈಲ ಖರೀದಿಯನ್ನು ಮುಂದುವರಿಸಿತ್ತು. ಇದರಿಂದ ಕೆರಳಿದ ಟ್ರಂಪ್ ಸುಂಕವನ್ನು ದುಪ್ಪಟ್ಟು ಎಂದರೆ 50% ಗೆ ಏರಿಕೆ ಮಾಡುವ ಮೂಲಕ ಶಾಕ್ ನೀಡಿದ್ದಾರೆ.

ಭಾರತೀಯ ಆಮದುಗಳ ಮೇಲಿನ ಸುಂಕವನ್ನು ದ್ವಿಗುಣಗೊಳಿಸುವ ತಮ್ಮ ನಿರ್ಧಾರದ ನಂತರ ಪ್ರತಿಕ್ರಿಯಿಸಿರುವ ಟ್ರಂಪ್, ಸುಂಕದ ಕುರಿತಾದ ವಿವಾದ ಬಗೆಹರಿಯುವವರೆಗೆ ಭಾರತದೊಂದಿಗೆ ಯಾವುದೇ ವ್ಯಾಪಾರ ಮಾತುಕತೆಗಳನ್ನು ನಡೆಸಲಾಗುವುದಿಲ್ಲ ಎಂದು ಹೇಳಿದ್ದಾರೆ. ವೈಟ್ ಹೌಸ್ ಭಾರತೀಯ ಸರಕುಗಳ ಮೇಲೆ ಹೆಚ್ಚುವರಿ 25% ಸುಂಕಗಳನ್ನು ವಿಧಿಸುವ ಕಾರ್ಯಕಾರಿ ಆದೇಶವನ್ನು ಹೊರಡಿಸಿದೆ. ಈ ಮೂಲಕ ಒಟ್ಟು ಸುಂಕವನ್ನು 50% ಕ್ಕೆ ಹೆಚ್ಚಿಸಿದೆ. ಯುಎಸ್ ಆಡಳಿತ, ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಕಾಳಜಿಗಳನ್ನು ಉಲ್ಲೇಖಿಸಿದೆ. ನೇರ ಅಥವಾ ಮಧ್ಯವರ್ತಿಗಳ ಮೂಲಕ, ಯುನೈಟೆಡ್ ಸ್ಟೇಟ್ಸ್‌ಗೆ ಅಸಾಮಾನ್ಯ ಬೆದರಿಕೆಯನ್ನು ಒಡ್ಡುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಅಮೆರಿಕದ ಅಧಿಕಾರಿಗಳ ಪ್ರಕಾರ, ಆರಂಭಿಕ 25% ಸುಂಕ ಆಗಸ್ಟ್ 7 ರಂದು ಜಾರಿಗೆ ಬಂದಿದೆ. ಇನ್ನು ಹೆಚ್ಚುವರಿ ಸುಂಕ 21 ದಿನಗಳಲ್ಲಿ ಜಾರಿಗೆ ಬರಲಿದ್ದು, ಅಮೆರಿಕದ ಬಂದರುಗಳಿಗೆ ಪ್ರವೇಶಿಸುವ ಎಲ್ಲಾ ಭಾರತೀಯ ಸರಕುಗಳಿಗೆ ಅನ್ವಯಿಸುತ್ತದೆ. ಸದ್ಯ ಈಗಾಗಲೇ ಸಾಗಣೆಯಲ್ಲಿರುವ ವಸ್ತುಗಳು ಮತ್ತು ಕೆಲವು ವಿನಾಯಿತಿ ಪಡೆದ ವರ್ಗಗಳಿಗೆ ಮಾತ್ರ ವಿನಾಯಿತಿಗಳಿವೆ. ಅಮೆರಿಕದ ಸುಂಕ ಹೊಡೆತದ ನಡುವೆಯೂ ಭಾರತದ ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ನಡೆದ ಎಂಎಸ್ ಸ್ವಾಮಿನಾಥನ್ ಶತಮಾನೋತ್ಸವ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾಡಿದ ಭಾಷಣದಲ್ಲಿ ದಿಟ್ಟವಾಗಿ ಪ್ರತಿಕ್ರಿಯಿಸಿದ್ದಾರೆ. ಆರ್ಥಿಕ ಒತ್ತಡದ ನಡುವೆಯೂ ಭಾರತ ಹಿಂದೆ ಸರಿಯುವುದಿಲ್ಲ. ನಮಗೆ, ನಮ್ಮ ರೈತರ ಹಿತಾಸಕ್ತಿಯೇ ನಮ್ಮ ಪ್ರಮುಖ ಆದ್ಯತೆ. ಭಾರತದ ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಗಳ ಬಗ್ಗೆ ಎಂದಿಗೂ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಇದಕ್ಕಾಗಿ ನಾವು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ನನಗೆ ತಿಳಿದಿದೆ. ನಾನು ಅದಕ್ಕೆ ಸಿದ್ಧನಿದ್ದೇನೆ, ದೇಶವೂ ಅದಕ್ಕೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

Category
ಕರಾವಳಿ ತರಂಗಿಣಿ