ಉತ್ತರಾಖಂಡ : ಮೇಘಸ್ಫೋಟ ಸಂಭವಿಸಿದ ಬಳಿಕ ಉದ್ಭವಿಸಿದ ಭಾರಿ ಪ್ರವಾಹದಿಂದಾಗಿ ಇಲ್ಲಿನ ಧರಾಲಿ ಗ್ರಾಮದ ಅರ್ಧದಷ್ಟು ಪ್ರದೇಶವೇ ನಾಶವಾಗಿ ಹೋಗಿದೆ. ಈಗಾಗಲೇ ನಾಲ್ವರು ಸಾವನ್ನಪ್ಪಿದ್ದು, ಇನ್ನೂ ಕನಿಷ್ಠ 60 ಮಂದಿ ಕಾಣೆಯಾಗಿರುವ ಕುರಿತು ಮಾಹಿತಿ ದೊರೆತಿದೆ. ಭಾರತೀಯ ಸೇನೆ ಸೇರಿದಂತೆ ಇತರೆ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ಪುನರಾರಂಭಿಸಿದ್ದು, ಅವಶೇಷಗಳ ನಡುವೆ ಸಿಲುಕಿಕೊಂಡವರಿಗೆ ಹುಡುಕಾಟ ನಡೆಸುತ್ತಿದೆ.
ಗಂಗಾ ನದಿ ಹುಟ್ಟುವ ಸ್ಥಳದಿಂದ ಗಂಗೋತ್ರಿಗೆ ತೆರಳುವ ಹಾದಿಯಲ್ಲಿ ಈ ಗ್ರಾಮವಿದ್ದು, ಮೇಘಸ್ಫೋಟದ ನಂತರದ ಪ್ರವಾಹದಲ್ಲಿ ಇದುವರೆಗೆ ನಾಲ್ವರು ಸಾವನ್ನಪ್ಪಿದ್ದು, ಸುಮಾರು 130 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ಸೇನೆ ಎಂಐ-17 ಮತ್ತು ಚಿನೂಕ್ ಹೆಲಿಕಾಪ್ಟರ್‌ಗಳನ್ನು ಬಳಸಿದೆ.ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಮೇಘಸ್ಫೋಟ ಸಂಭವಿಸಿದ ಧರಾಲಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
ಪ್ರವಾಹದಲ್ಲಿ ಕನಿಷ್ಠ 60 ಮಂದಿ ಕಾಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ. ಪ್ರಕೃತಿ ವಿಕೋಪ ಘಟಿಸಿದಾಗ ಧರಾಲಿ ಗ್ರಾಮದಲ್ಲಿ ಹರ್ ದೂದ್ ಜಾತ್ರೆ ನಡೆಯುತ್ತಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ಜನ ಸೇರಿದ್ದರು. ಹಾಗಾಗಿ, ಮೃತರ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.ಕಾಣೆಯಾದವರಲ್ಲಿ 11 ಭಾರತೀಯ ಸೇನಾಪಡೆಯ ಸೈನಿಕರೂ ಇದ್ದಾರೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮನೀಶ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.
ಕಮಾಂಡಿಂಗ್ ಆಫೀಸರ್ ಕರ್ನಲ್ ಹರ್ಷವರ್ಧನ್ 150 ಸೈನಿಕರ ತಂಡದೊಂದಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದ್ದಾರೆ. ನಮ್ಮ ತಂಡ ಧೈರ್ಯ ಮತ್ತು ದೃಢ ನಿಶ್ಚಯದಿಂದ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.