image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಉತ್ತರಾಖಂಡದ ಧರಾಲಿ ಗ್ರಾಮದಲ್ಲಿ ಮೇಘಸ್ಫೋಟ : ದಿಢೀರ್​ ಪ್ರವಾಹ

ಉತ್ತರಾಖಂಡದ ಧರಾಲಿ ಗ್ರಾಮದಲ್ಲಿ ಮೇಘಸ್ಫೋಟ : ದಿಢೀರ್​ ಪ್ರವಾಹ

ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ಧರಾಲಿ ಗ್ರಾಮದಲ್ಲಿ ದಿಢೀರ್​ ಪ್ರವಾಹ ಉಂಟಾಗಿ ಅನೇಕ ಮನೆಗಳು ಕೊಚ್ಚಿ ಹೋಗಿದ್ದು, ಕನಿಷ್ಠ 4 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖೀರ್​ಗಂಗಾ ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ ಧರಾಲಿ ಗ್ರಾಮದ ಶಿಖರ ಪ್ರದೇಶದಲ್ಲಿ ಉಂಟಾದ ಭೂ ಕುಸಿತದಿಂದ ಮಣ್ಣು ಮಿಶ್ರಿತ ನೀರಿನ ಪ್ರವಾಹಕ್ಕೆ ಗ್ರಾಮದ ಹಲವು ಮನೆಗಳು ಕೊಚ್ಚಿ ಹೋಗಿದೆ ಎಂದು ಸೇನೆ ತಿಳಿಸಿದೆ. ಗಂಗೋತ್ರಿ ಸಾಗುವ ಪ್ರಮುಖ ಮಾರ್ಗ ಪ್ರದೇಶದಲ್ಲಿ ಈ ಧರಾಲಿ ಬರಲಿದ್ದು, ಇಲ್ಲಿ ಅನೇಕ ಹೋಟೆಲ್​, ರೆಸ್ಟೋರೆಂಟ್​ ಮತ್ತು ಹೋಂ ಸ್ಟೇಗಳಿವೆ. ಧರಾಲಿ ಗ್ರಾಮ ಮೇಲ್ಬಾಗದ ಪ್ರದೇಶದಲ್ಲಿ ಉಂಟಾದ ಮೇಘಸ್ಫೋಟವು ಈ ಹಾನಿಗೆ ಕಾರಣವಾಗಿದೆ. ಬೆಟ್ಟದಿಂದ ಹರಿದು ಬಂದ ಮಣ್ಣು ಮಿಶ್ರಿತ ನೀರಿನ ಪ್ರವಾಹಕ್ಕೆ ಇಡೀ ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ. ಕೆಲವರು ಪ್ರಾಣ ಉಳಿಸಿಕೊಳ್ಳಲು, ರಸ್ತೆಯಲ್ಲಿ ಓಡಿದರೆ, ಇನ್ನೂ ಕೆಲವರು ತಮ್ಮ ವಾಹನಗಳ ಸಮೇತ ಸ್ಥಳದಿಂದ ಕಾಲ್ಕಿತ್ತಿರುವ ದೃಶ್ಯ ಭಯಾನಕವಾಗಿದೆ. ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಸೇನಾ ಸಿಬ್ಬಂದಿ ಸ್ಥಳದಲ್ಲಿ ಜನರ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಭಾರತೀಯ ಸೇನೆಯ ಕ್ಯಾಂಪ್​ ಇರುವ ಸ್ಥಳದಿಂದ ಕೇವಲ ನಾಲ್ಕು ಕಿಲೋ ಮೀಟರ್​ ಅಂತರದಲ್ಲಿ ಈ ಪ್ರಾಕೃತಿಕ ವಿಕೋಪ ಸಂಭವಿಸಿದೆ. ಇದಾದ ಕೇವಲ 10 ನಿಮಿಷದಲ್ಲೇ ಸ್ಥಳಕ್ಕೆ ದೌಡಾಯಿಸಿದ ಸೇನಾ ಸಿಬ್ಬಂದಿ ಘಟನೆಯಿಂದ ನಾಪತ್ತೆಯಾದ ಜನರ ಶೋಧ ಕಾರ್ಯಾಚರಣೆಗಿಳಿದರು. 

ಈ ಭೀಕರ ಪ್ರವಾಹದಲ್ಲಿ 10-12 ಜನರು ಸಿಲುಕಿರುವ ಸಾಧ್ಯತೆ ಇದ್ದು, ಇಲ್ಲಿದ್ದ 20-25 ಹೋಟೆಲ್​, ಹೋಮ್​ಸ್ಟೇ ಎಲ್ಲವೂ ಕೊಚ್ಚಿಹೋಗಿವೆ. ಸದ್ಯ ಇಲ್ಲಿನ ಗ್ರಾಮಸ್ಥರು ಆಘಾತಕ್ಕೆ ಒಳಗಾಗಿದ್ದು, ಪ್ರವಾಹದ ಸಂದರ್ಭದಲ್ಲಿನ ಜನರ ಕಿರುಚಾಟ, ಆತಂಕದ ವಿಡಿಯೋಗಳು ಈ ಭೀಕರತೆಯನ್ನು ಬಿಚ್ಚಿಡುತ್ತಿವೆ. ಪ್ರಾಥಮಿಕ ವರದಿ ಪ್ರಕಾರ, ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಉತ್ತರಾಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್​ ಪ್ರಶಾಂತ್​ ಆರ್ಯ ತಿಳಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ರಕ್ಷಣಾ ಕಾರ್ಯಕ್ಕೆ ಹರ್ಸಿಲ್​ನಿಂದ ಸೇನಾ ತಂಡ ಆಗಮಿಸಿದೆ. ಘಟನೆ ಕುರಿತು ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಸಿಎಂ ಪುಷ್ಕರ್​ ಸಿಂಗ್​ ಧಾಮಿ, "ಮೇಘಸ್ಫೋಟದಿಂದಾಗಿ ಧರಾಲಿಯಲ್ಲಿ ಭಾರಿ ನಷ್ಟ ಉಂಟಾಗಿದೆ ಎಂಬ ಸುದ್ದಿಯು ಸಾಕಷ್ಟು ನೋವು ಮತ್ತು ದುಃಖವನ್ನು ತಂದಿದೆ. ಎಸ್​ಡಿಆರ್​ಎಫ್​, ಎನ್​ಡಿಆರ್​ಎಫ್​, ಜಿಲ್ಲಾಡಳಿತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಅಲ್ಲಿನ ಪರಿಸ್ಥಿತಿಯ ಕುರಿತು ಸೂಕ್ಷ್ಮ ಮೇಲ್ವಿಚಾರಣೆ ನಡೆಸಿದ್ದು, ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಪ್ರತಿಯೊಬ್ಬರು ಸುರಕ್ಷಿತವಾಗಿರಲಿ ಎಂದು ದೇವರನ್ನು ಪ್ರಾರ್ಥಿಸುತ್ತೇನೆ" ಎಂದು ತಿಳಿಸಿದ್ದಾರೆ.

ಘಟನೆ ಬೆನ್ನಲ್ಲೇ ತಕ್ಷಣಕ್ಕೆ ಐಬೆಕ್ಸ್​ ಬ್ರಿಗೇಡ್​ ತಂಡವು ಸ್ಥಳಕ್ಕೆ ಆಗಮಿಸಿದ್ದು, ಹಾನಿಗೊಂಡ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಘಟನೆ ಕುರಿತು ಮಾತನಾಡಿರುವ ಉತ್ತರಕಾಶಿ ಪೊಲೀಸರು, ಹರ್ಸಿಲ್​ ಪ್ರದೇಶದಲ್ಲಿನ ಖೀರ್​ಗಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಇದು ಧರಾಲಿ ಗ್ರಾಮದ ಹಾನಿಗೆ ಕಾರಣವಾಗಿದೆ ಎಂದಿದ್ದಾರೆ. ಎಸ್​ಡಿಆರ್​ಎಫ್​ ಐಜಿ ಅರುಣ್​ ಮೋಹನ್​ ಜೋಶಿ ಮಾತನಾಡಿ, ಮಾಹಿತಿ ಪಡೆದ ತಕ್ಷಣಕ್ಕೆ ಹತ್ತಿರದಲ್ಲಿದ್ದ ಎಸ್​ಡಿಆರ್​ಎಫ್​ ತಂಡ ಸ್ಥಳಕ್ಕೆ ತಲುಪಿದೆ. ಮತ್ತೆರಡು ತಂಡಗಳು ಆಗಮಿಸಿದ್ದು, ರಕ್ಷಣಾ ಕಾರ್ಯ ಸಾಗಿದೆ ಎಂದರು.

Category
ಕರಾವಳಿ ತರಂಗಿಣಿ