ಬಿಹಾರ : ಮತದಾರರ ಪಟ್ಟಿಯಲ್ಲಿ ತನ್ನ ಹೆಸರೇ ಇಲ್ಲ, ನನ್ನ ಎಪಿಕ್ ಸಂಖ್ಯೆಯನ್ನು ಅಳಿಸಲಾಗಿದೆ ಎಂದು ಆರೋಪಿಸಿ ಕಾರ್ಡ್ ಅನ್ನು ದೊಡ್ಡ ಪರದೆಯ ಮೇಲೆ ಪ್ರದರ್ಶಿಸಿದ್ದ ಬಿಹಾರ ವಿಧಾನಸಭಾ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರಿಗೆ ಸಂಕಷ್ಟ ಎದುರಾಗಿದೆ. ಎರಡೆರಡು ಮತದಾರರ ಗುರುತಿನ ಚೀಟಿ (EPIC) ಹೊಂದಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಬಿಜೆಪಿ ಆಗ್ರಹಿಸಿದ್ದು, ಇದರ ಬೆನ್ನಲ್ಲೇ ನಕಲಿ ಮತದಾರರ ಗುರುತಿನ ಚೀಟಿಯನ್ನು ವಾಪಸ್ ನೀಡುವಂತೆ ಚುನಾವಣಾ ಆಯೋಗ ತೇಜಸ್ವಿ ಯಾದವ್ ಅವರಿಗೆ ಸೂಚಿಸಿ ನೋಟಿಸ್ ನೀಡಿದೆ. ಅಧಿಕೃತವಾಗಿ ತಮಗೆ ನೀಡದ ಗುರುತಿನ ಚೀಟಿಯನ್ನು ಆಯೋಗಕ್ಕೆ ವಾಪಸ್ ನೀಡಬೇಕು. ಈ ಬಗ್ಗೆ ತನಿಖೆ ನಡೆಸಲಾಗುವುದು. ಮತದಾರರ ಪಟ್ಟಿ ಪರಿಷ್ಕರಣೆಯ ವೇಳೆ ತಮ್ಮ ನಿಗದಿತ ಸಂಖ್ಯೆಯಲ್ಲಿರುವ ಚೀಟಿಯನ್ನು ಮಾತ್ರ ಹೊಂದಬೇಕು ಎಂದು ಚುನಾವಣಾ ಅಧಿಕಾರಿಗಳು ನೋಟಿಸ್ನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾಜಿ ಡಿಸಿಎಂಗೆ ಪತ್ರ ಬರೆದಿರುವ ದಿಘಾ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿ, ಆಗಸ್ಟ್ 2ನೇ ತಾರೀಖಿನಂದು ನೀವು ಪರದೆಯ ಮೇಲೆ ಪ್ರದರ್ಶಿಸಿದ ಎಪಿಕ್ ನಂಬರ್ ಅನ್ನು ಚುನಾವಣಾ ಆಯೋಗ ಅಧಿಕೃತವಾಗಿ ನೀಡಿಲ್ಲ. ನಕಲಿ ಚೀಟಿ ಹೇಗೆ ರೂಪಿಸಲಾಯಿತು ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗುವುದು. ಹೀಗಾಗಿ, ಎರಡನೇ ಚೀಟಿಯನ್ನು ಆಯೋಗಕ್ಕೆ ಸಲ್ಲಿಸಿ ಎಂದು ನಿರ್ದೇಶಿಸಲಾಗಿದೆ. ನಕಲಿ ಮತದಾರರ ಗುರುತಿನ ಚೀಟಿಯನ್ನು ಸಲ್ಲಿಸುವಂತೆ ಚುನಾವಣಾ ಆಯೋಗ ಸೂಚಿಸಿದ ಬಳಿಕ, ತಮ್ಮ ಎಪಿಕ್ ಸಂಖ್ಯೆಯನ್ನು ಬದಲಿಸಲಾಗಿದೆ ಎಂದು ಆರ್ಜೆಡಿ ನಾಯಕ ಆರೋಪಿಸಿದ್ದಾರೆ. ಇದನ್ನು ನಿರಾಕರಿಸಿರುವ ಅಧಿಕಾರಿಗಳು, "ಮತದಾರರ ಪಟ್ಟಿಯಲ್ಲಿರುವ ಎಪಿಕ್ ಸಂಖ್ಯೆಯು ವಿರೋಧ ಪಕ್ಷದ ನಾಯಕ ತೇಜಸ್ವಿ ಅವರು, 2020 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಫಿಡವಿಟ್‌ನಲ್ಲಿ ಸಲ್ಲಿಸಿದ ಸಂಖ್ಯೆಯಾಗಿದೆ. ಮತ್ತೊಂದು ಸಂಖ್ಯೆಯುಳ್ಳ ಗುರುತಿನ ಚೀಟಿಯನ್ನು ಹೊಂದಿದ್ದರೆ ಅಪರಾಧವಾಗಲಿದೆ ಎಂದು ತಿಳಿಸಿದ್ದಾರೆ. ಎರಡೆರಡು ಗುರುತಿನ ಚೀಟಿಯನ್ನು ಹೊಂದುವ ಮೂಲಕ ಕಾನೂನು ಉಲ್ಲಂಘಿಸಿರುವ ತೇಜಸ್ವಿ ವಿರುದ್ಧ ಕ್ರಮ ಜರುಗಿಸುವಂತೆ ಬಿಜೆಪಿ ಆಗ್ರಹಿಸಿದೆ. ವಿಪಕ್ಷ ನಾಯಕ ಎರಡು ಎಪಿಕ್ ಸಂಖ್ಯೆಗಳನ್ನು ಹೊಂದಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಎರಡು ಕಾರ್ಡ್ ಹೊಂದುವ ಮೂಲಕ ತೇಜಸ್ವಿ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 'ಆಟಂ ಬಾಂಬ್' ಬೆದರಿಕೆಗೆ ಸಾಕ್ಷಿ ನೀಡಿದ್ದಾರೆ ಎಂದು ವ್ಯಂಗ್ಯವಾಡಿದೆ.