ಅಮೆರಿಕ : "ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸುತ್ತಿರುವುದಕ್ಕೆ ಭಾರತದ ತೈಲ ಖರೀದಿ ಸಹಾಯ ಮಾಡುತ್ತಿದೆ. ವಾಷಿಂಗ್ಟನ್‌ನೊಂದಿಗಿನ ನವದೆಹಲಿಯ ಸಂಬಂಧಕ್ಕೆ ಖಂಡಿತವಾಗಿಯೂ ಇದು ಕಿರಿಕಿರಿ ಉಂಟುಮಾಡುವ ಅಂಶ" ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದರು. ಫಾಕ್ಸ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಭಾರತದ ಮೇಲೆ ಶೇ.25ರಷ್ಟು ಸುಂಕ ಮತ್ತು ರಷ್ಯಾದ ಮಿಲಿಟರಿ ಉಪಕರಣಗಳು ಹಾಗೂ ಇಂಧನ ಖರೀದಿಸುತ್ತಿರುವುದಕ್ಕೆ ಹೆಚ್ಚುವರಿ ದಂಡ ವಿಧಿಸುವ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆ ಕುರಿತ ಪ್ರಶ್ನೆಗೆ ಅವರು, "ನೋಡಿ, ಜಾಗತಿಕ ವ್ಯಾಪಾರದಲ್ಲಿ ಭಾರತ ನಮ್ಮ ಮಿತ್ರರಾಷ್ಟ್ರ. ವಿದೇಶಾಂಗ ನೀತಿಯ ಯಾವುದೇ ವಿಷಯದಂತೆ, ನೀವು(ಭಾರತ) ಎಲ್ಲದರಲ್ಲೂ, ಎಲ್ಲಾ ಸಮಯದಲ್ಲೂ ಶೇ.100ರಷ್ಟು ಸಹಮತ ಸಾಧಿಸಲು ಸಾಧ್ಯವಿಲ್ಲ" ಎಂದು ಹೇಳಿದರು. "ಭಾರತಕ್ಕೆ ಇಂಧನ ಅಗತ್ಯತೆ ಹೆಚ್ಚಿದೆ ಮತ್ತು ಭಾರತ ತೈಲ, ಕಲ್ಲಿದ್ದಲು, ಅನಿಲವನ್ನು ಖರೀದಿಸುವ ಸಾಮರ್ಥ್ಯ ಹೊಂದಿದೆ. ಆದರೆ ಭಾರತ ರಷ್ಯಾದಿಂದ ಹೆಚ್ಚು ಇಂಧನ ಖರೀದಿಸುತ್ತಿದೆ, ಏಕೆಂದರೆ ರಷ್ಯಾದ ತೈಲ ಅಗ್ಗವಾಗಿದೆ. ರಷ್ಯಾ ಅನೇಕ ಸಂದರ್ಭಗಳಲ್ಲಿ ನಿರ್ಬಂಧಗಳ ಕಾರಣದಿಂದಾಗಿ ಜಾಗತಿಕ ಇಂಧನ ಬೆಲೆಗಿಂತ ಕಡಿಮೆ ಬೆಲೆಗೆ ಇಂಧನ ಮಾರಾಟ ಮಾಡುತ್ತಿದೆ" ಎಂದರು.
"ದುರದೃಷ್ಟವಶಾತ್, ಭಾರತದ ಇಂಧನ ಖರೀದಿ ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಮುಂದುವರೆಸಲು ಸಹಾಯ ಮಾಡುತ್ತಿದೆ. ಆದ್ದರಿಂದ ಇದು ಭಾರತದೊಂದಿಗಿನ ನಮ್ಮ ಸಂಬಂಧಕ್ಕೆ ಖಂಡಿತ ಕಿರಿಕಿರಿಯಾಗುತ್ತಿದೆ. ಇದೊಂದೇ ಅಂಶವಲ್ಲ, ನಾವು ಅವರೊಂದಿಗೆ(ಭಾರತ) ಸಹಕಾರದ ಇತರ ಹಲವು ಅಂಶಗಳನ್ನೂ ಸಹ ಹೊಂದಿದ್ದೇವೆ" ಎಂದು ಹೇಳಿದರು. "ಅಮೆರಿಕ ಅಧ್ಯಕ್ಷರ ಆಕ್ಷೇಪವೆಂದರೆ, ಇಂಧನ ಖರೀದಿಗೆ ಇತರ ಹಲವು ತೈಲ ಮಾರಾಟಗಾರರು ಲಭ್ಯವಿರುವಾಗ, ಭಾರತ ರಷ್ಯಾದಿಂದ ಹೆಚ್ಚು ಪ್ರಮಾಣದಲ್ಲಿ ಇಂಧನ ಖರೀದಿಸುವುದನ್ನು ಮುಂದುವರೆಸಿದೆ, ಇದು ಮೂಲಭೂತವಾಗಿ ಯುದ್ಧಕ್ಕೆ ಆರ್ಥಿಕ ನೆರವು ಒದಗಿಸಲು ಸಹಾಯ ಮಾಡುತ್ತಿದೆ ಮತ್ತು ಉಕ್ರೇನ್‌ನಲ್ಲಿ ಈ ಯುದ್ಧ ಮುಂದುವರಿಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಭಾವಿಸುತ್ತೇನೆ" ಎಂದು ತಿಳಿಸಿದರು. ಆಗಸ್ಟ್ 1ರಿಂದ ಭಾರತದಿಂದ ಅಮೆರಿಕಕ್ಕೆ ಬರುವ ಎಲ್ಲಾ ಸರಕುಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ ಒಂದು ದಿನದ ನಂತರ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರ ಈ ಹೇಳಿಕೆ ಅಮೆರಿಕ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧದ ಕುರಿತು ಚರ್ಚೆ ಹುಟ್ಟು ಹಾಕಿದೆ. ಜಪಾನ್, ಯುಕೆ ಮತ್ತು ಯುರೋಪಿಯನ್ ಒಕ್ಕೂಟದಂತಹ ಪ್ರಮುಖ ಪಾಲುದಾರರೊಂದಿಗೆ ಅನುಕೂಲಕರ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿರುವ ಅಮೆರಿಕ, ತನ್ನ ಬೇಡಿಕೆಗಳಿಗೆ ನವದೆಹಲಿ ಒಪ್ಪದಿದ್ದಕ್ಕಾಗಿ ಸುಂಕ ವಿಧಿಸುವ ಮೂಲಕ ಒತ್ತಡ ಹೇರುತ್ತಿದೆ ಎಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಮತ್ತು ಸುಂಕಗಳ ಪರಿಣಾಮಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.