ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಆರು ತಿಂಗಳ ಅಧಿಕಾರಾವಧಿಯಲ್ಲಿ ತಿಂಗಳಿಗೆ ಸರಾಸರಿ ಒಂದು ಶಾಂತಿ ಒಪ್ಪಂದ ಅಥವಾ ಕದನ ವಿರಾಮ ಘೋಷಣೆಯಲ್ಲಿ ಮಧ್ಯಸ್ಥಿಕೆ ವಹಿಸಿದ್ದಾರೆ. ಹೀಗಾಗಿ, ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಗುರುವಾರ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಈ ಹೇಳಿಕೆಗಳನ್ನು ನೀಡಿದರು. ಥೈಲ್ಯಾಂಡ್-ಕಾಂಬೋಡಿಯಾ ಸಂಘರ್ಷದ ಕುರಿತಂತೆ ಮಾತನಾಡಿದ ಲೀವಿಟ್, "ಅಮೆರಿಕ ಅಧ್ಯಕ್ಷ ಟ್ರಂಪ್, ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವೆ ತಕ್ಷಣ ಬೇಷರತ್ ಕದನ ವಿರಾಮ ಘೋಷಣೆ ಮಾಡುವಲ್ಲಿ ನೆರವಾದರು. ಅಧ್ಯಕ್ಷ ಟ್ರಂಪ್ ಮಧ್ಯಪ್ರವೇಶಕ್ಕೂ ಮುನ್ನ ಎರಡೂ ದೇಶಗಳು ಭೀಕರ ಸಂಘರ್ಷದಲ್ಲಿ ತೊಡಗಿದ್ದವು. ಇದರಿಂದ, 3,00,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿತ್ತು" ಎಂದರು.
"ಅಮೆರಿಕದ ಅಧ್ಯಕ್ಷರು ಥೈಲ್ಯಾಂಡ್‌ನ ಹಂಗಾಮಿ ಪ್ರಧಾನಿ ಮತ್ತು ಕಾಂಬೋಡಿಯಾ ಪ್ರಧಾನಿಯೊಂದಿಗೆ ನೇರವಾಗಿ ಫೋನ್‌ನಲ್ಲಿ ಮಾತನಾಡಿದರು. ಸಂಘರ್ಷ ಕೊನೆಗೊಳಿಸದ ಹೊರತು, ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಯಾವುದೇ ವ್ಯಾಪಾರ ಚರ್ಚೆಗಳು ಅಥವಾ ಒಪ್ಪಂದಗಳು ಸಾಧ್ಯವಿಲ್ಲ ಎಂದು ಇಬ್ಬರೂ ನಾಯಕರಿಗೆ ತಿಳಿಸಿದರು. ಈ ಮೂಲಕ ಸಾವಿರಾರು ಜೀವಗಳನ್ನು ಉಳಿಸುವ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲಾಯಿತು. ಇದರಿಂದ ಈ ದೇಶಗಳೊಂದಿಗೆ ವ್ಯಾಪಾರ ಮಾತುಕತೆ ಪುನರಾರಂಭಿಸಲು ಅವಕಾಶ ಮಾಡಿಕೊಟ್ಟಿದೆ. ಕದನ ವಿರಾಮದಲ್ಲಿ ಟ್ರಂಪ್ ಯಶಸ್ವಿಯಾದರು'' ಎಂದು ಲೀವಿಟ್ ಹೇಳಿದರು. "ಟ್ರಂಪ್ ಈಗ ಥೈಲ್ಯಾಂಡ್ ಮತ್ತು ಕಾಂಬೋಡಿಯಾ, ಇಸ್ರೇಲ್ ಮತ್ತು ಇರಾನ್, ರುವಾಂಡಾ ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಭಾರತ ಮತ್ತು ಪಾಕಿಸ್ತಾನ, ಸೆರ್ಬಿಯಾ ಮತ್ತು ಕೊಸೊವೊ, ಮತ್ತು ಈಜಿಪ್ಟ್ ಮತ್ತು ಇಥಿಯೋಪಿಯಾ ನಡುವಿನ ಸಂಘರ್ಷಗಳನ್ನು ಕೊನೆಗೊಳಿಸಿದ್ದಾರೆ. ಇದರರ್ಥ ಟ್ರಂಪ್ ತಮ್ಮ ಆರು ತಿಂಗಳ ಅಧಿಕಾರಾವಧಿಯಲ್ಲಿ ಸರಾಸರಿ ತಿಂಗಳಿಗೆ ಒಂದು ಶಾಂತಿ ಒಪ್ಪಂದ ಅಥವಾ ಕದನ ವಿರಾಮದಲ್ಲಿ ತಮ್ಮ ಮಧ್ಯಸ್ಥಿಕೆ ವಹಿಸಿದ್ದಾರೆ. ಹೀಗಾಗಿ, ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡುವ ಸಮಯವಿದು" ಎಂದು ಕ್ಯಾರೋಲಿನ್ ಲೀವಿಟ್ ಆಗ್ರಹಿಸಿದರು.