ಜಪಾನ್ : ಕಮ್ಚಟ್ಕಾ ಪರ್ಯಾಯ ದ್ವೀಪ ಭಾಗದಲ್ಲಿ ಬುಧವಾರ ಮುಂಜಾನೆ 8.7 ತೀವ್ರತೆಯ ಭೂಕಂಪ ಸಂಭವಿಸಿದ ಬೆನ್ನಲ್ಲೇ, ರಷ್ಯಾದ ಕುರಿಲ್ ದ್ವೀಪಗಳು ಮತ್ತು ಜಪಾನ್ನ ದೊಡ್ಡ ಉತ್ತರ ದ್ವೀಪ ಹೊಕ್ಕೈಡೊದ ಕರಾವಳಿ ಪ್ರದೇಶಗಳಿಗೆ ಸುನಾಮಿ ಅಪ್ಪಳಿಸಿದೆ. ಹಲವೆಡೆ ಸುನಾಮಿ ಎಚ್ಚರಿಕೆ ಸೈರನ್ಗಳು ಮೊಳಗಿದ್ದು, ಜನರಿಗೆ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ತಿಳಿಸಲಾಯಿತು. ಜಪಾನ್ ಹವಾಮಾನ ಸಂಸ್ಥೆ ಪ್ರಕಾರ, ಹೊಕ್ಕೈಡೊದ ಪೂರ್ವ ಕರಾವಳಿಯಲ್ಲಿರುವ ನೆಮುರೊದಲ್ಲಿ ಸುಮಾರು 30 ಸೆಂಟಿಮೀಟರ್ಗಳಷ್ಟು (ಸುಮಾರು 1 ಅಡಿ) ಎತ್ತರದ ಮೊದಲ ಸುನಾಮಿ ಅಲೆಗಳು ಅಪ್ಪಳಿಸಿವೆ. ಸ್ಥಳೀಯ ಗವರ್ನರ್ ವ್ಯಾಲೆರಿ ಲಿಮರೆಂಕೊ ಪ್ರಕಾರ, ಪೆಸಿಫಿಕ್ನಲ್ಲಿರುವ ರಷ್ಯಾದ ಕುರಿಲ್ ದ್ವೀಪಗಳ ಸೆವೆರೊ-ಕುರಿಲ್ಸ್ಕ್ ಕರಾವಳಿ ಪ್ರದೇಶವನ್ನು ಮೊದಲ ಸುನಾಮಿ ಅಲೆ ಅಪ್ಪಳಿಸಿತು. ನಿವಾಸಿಗಳು ಸುರಕ್ಷಿತರಾಗಿದ್ದಾರೆ ಮತ್ತು ಪುನರಾವರ್ತಿತ ಅಲೆಯ ಬೆದರಿಕೆ ಅಂತ್ಯಗೊಳ್ಳುವವರೆಗೆ ಜನರು ಎತ್ತರದ ಪ್ರದೇಶದಲ್ಲಿ ಇರಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಹವಾಯಿ, ಚಿಲಿ, ಜಪಾನ್ ಮತ್ತು ಸೊಲೊಮನ್ ದ್ವೀಪಗಳ ಕೆಲವು ಕರಾವಳಿ ಪ್ರದೇಶಗಳಲ್ಲಿ ಉಬ್ಬರವಿಳಿತದ ಮಟ್ಟಕ್ಕಿಂತ 1 ರಿಂದ 3 ಮೀಟರ್ (ಗಜ) ಅಲೆಗಳು ಕಂಡುಬರುವ ಸಾಧ್ಯತೆಯಿದೆ ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ. ರಷ್ಯಾ ಮತ್ತು ಈಕ್ವೆಡಾರ್ನ ಕೆಲವು ಕರಾವಳಿ ಪ್ರದೇಶಗಳಲ್ಲಿ 3 ಮೀಟರ್ (ಗಜ) ಗಿಂತ ಹೆಚ್ಚಿನ ಅಲೆಗಳು ಏಳುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ರಷ್ಯಾದ ಪೂರ್ವದ ಭಾಗದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಬುಧವಾರ ಮುಂಜಾನೆ 8.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಆರಂಭದಲ್ಲಿ ಜಪಾನ್, ಅಲಾಸ್ಕಾ ಮತ್ತು ಹವಾಯಿಯ ಕೆಲವು ಭಾಗಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಕಮ್ಚಟ್ಕಾ ದ್ವೀಪದಲ್ಲಿ ಭೂಕಂಪದ ಕೇಂದ್ರಬಿಂದುವಿಗೆ ಸಮೀಪವಿರುವ ರಷ್ಯಾದ ಪ್ರದೇಶಗಳಲ್ಲಿ ಹಾನಿ ಮತ್ತು ಸ್ಥಳಾಂತರಿಸುವಿಕೆ ವರದಿಯಾಗಿದೆ. ಜಪಾನ್ ಸಮಯ ಬೆಳಗ್ಗೆ 8:25 ಕ್ಕೆ ಸಂಭವಿಸಿದ ಭೂಕಂಪವು ಪ್ರಾಥಮಿಕವಾಗಿ 8.0 ತೀವ್ರತೆಯನ್ನು ಹೊಂದಿತ್ತು ಎಂದು ಜಪಾನ್ ಮತ್ತು ಯುಎಸ್ ಭೂಕಂಪಶಾಸ್ತ್ರಜ್ಞರು ತಿಳಿಸಿದ್ದರು. ಬಳಿಕ, ಜಪಾನ್ ಮತ್ತು ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯು ಅದನ್ನು 8.7 ತೀವ್ರತೆ ಎಂದು ನವೀಕರಿಸಿದೆ. ಯುಎಸ್ಜಿಎಸ್ ಪ್ರಕಾರ, ಭೂಕಂಪವು 19.3 ಕಿಲೋಮೀಟರ್ (12 ಮೈಲುಗಳು) ಆಳದಲ್ಲಿ ಸಂಭವಿಸಿದೆ. ಜಪಾನ್ನ ಉತ್ತರದ ತುದಿಯಲ್ಲಿರುವ ಹೊಕ್ಕೈಡೊದಿಂದ ಸುಮಾರು 250 ಕಿಲೋಮೀಟರ್ (160 ಮೈಲುಗಳು) ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
ರಷ್ಯಾದ ಟಾಸ್ ಸುದ್ದಿ ಸಂಸ್ಥೆ ವರದಿ ಪ್ರಕಾರ, ಭೂಕಂಪದ ಕೇಂದ್ರಬಿಂದುವು ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯ ಬಳಿ ದಾಖಲಾಗಿದೆ ಎಂದು ಗುರುತಿಸಲಾಗಿದೆ. ಇದರಿಂದ ಬೆಚ್ಚಿಬಿದ್ದ ಜನರು ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಮನೆಗಳಲ್ಲಿನ ವಸ್ತುಗಳು ನೆಲಕ್ಕುರುಳಿ ಬಿದ್ದಿವೆ. ಅಲ್ಲದೆ, ಬೀದಿಯಲ್ಲಿ ನಿಲ್ಲಿಸಿದ್ದ ಕಾರುಗಳು ಹಾಗೂ ಕಟ್ಟಡಗಳ ಮೇಲಿನ ಬಾಲ್ಕನಿಗಳು ಸಹ ಅಲುಗಾಡಿವೆ ಎಂದು ತಿಳಿಸಲಾಗಿದೆ. ಜಪಾನ್ನ ಹವಾಮಾನ ಸಂಸ್ಥೆಯು ಪೆಸಿಫಿಕ್ ಕರಾವಳಿಗೆ ಸುನಾಮಿ ಎಚ್ಚರಿಕೆ ನೀಡಿತ್ತು. ಕೆಲಹೊತ್ತಲ್ಲೇ ಉತ್ತರ ಜಪಾನಿನ ಕರಾವಳಿಯಲ್ಲಿ 3 ಮೀಟರ್ ಎತ್ತರದ ಅಲೆಗಳು ಕಂಡುಬರಬಹುದು ಎಂದು ಹೇಳಿತ್ತು. ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಭೂಕಂಪದಿಂದ ಸುನಾಮಿ ಉಂಟಾಗಿದೆ ಎಂದು ಹೇಳಿದೆ. ಅಲ್ಲದೆ, ಹವಾಯಿ ದ್ವೀಪಗಳ ಕರಾವಳಿಯಲ್ಲಿ ಹಾನಿಯನ್ನುಂಟು ಮಾಡಬಹುದು. ಜೀವ ಮತ್ತು ಆಸ್ತಿಯ ರಕ್ಷಣೆಗೆ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಎಚ್ಚರಿಕೆ ತಿಳಿಸಿತ್ತು. ಮಂಗಳವಾರ ಸ್ಥಳೀಯ ಸಮಯ ಸಂಜೆ 7 ಗಂಟೆಯ ಸುಮಾರಿಗೆ ಮೊದಲ ಅಲೆಗಳು ಕಾಣಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಅದು ಎಚ್ಚರಿಸಿತ್ತು. ಕಮ್ಚಟ್ಕಾದಲ್ಲಿ ವಿದ್ಯುತ್ ಕಡಿತ ಮತ್ತು ಮೊಬೈಲ್ ಫೋನ್ ಸೇವೆಗಳಲ್ಲಿ ವ್ಯತ್ಯಯ ಕಂಡುಬಂದಿದೆ ಎಂದು ಟಾಸ್ ವರದಿ ಮಾಡಿದೆ. ಸಖಾಲಿನ್ ದ್ವೀಪದಲ್ಲಿರುವ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ತುರ್ತು ಸೇವೆಗಳು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಾಗಿದೆ.