ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ (SIR) ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಈ ಕುರಿತು ಸಲ್ಲಿಸಲಾದ ಅರ್ಜಿಗಳನ್ನು ಒಟ್ಟು ಮಾಡಿ ವಿಚಾರಣೆ ನಡೆಸುವುದಾಗಿ ಹೇಳಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠದ ಮುಂದೆ ಅರ್ಜಿದಾರರಲ್ಲಿ ಒಬ್ಬರಾದ ಮತ್ತು ಸರ್ಕಾರೇತರ ಸಂಸ್ಥೆಯ ಪರವಾಗಿ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರ್ ನಾರಾಯಣನ್ ಮತದಾರರ ಪಟ್ಟಿ ಪರಿಷ್ಕರಣೆಗೆ ಮಧ್ಯಂತರ ತಡೆ ನೀಡುವಂತೆ ಕೋರಿದರು. ಮಧ್ಯಂತರ ಆದೇಶ ಕೋರಿದ ಈ ಹಿಂದಿನ ಆದೇಶವನ್ನು ಪೀಠವು ಪ್ರಸ್ತಾಪಿಸಿ, ಈ ಹಂತದಲ್ಲಿ ಪಟ್ಟಿ ಪರಿಷ್ಕರಣೆಗೆ ತಡೆ ನೀಡಲು ಸಾಧ್ಯವಿಲ್ಲ. ಈ ಕುರಿತು ಅರ್ಜಿಗಳನ್ನು ಒಟ್ಟು ಮಾಡಿ ಒಮ್ಮೆಲೇ ನಿರ್ಧರಿಸುವುದಾಗಿ ಅದು ಹೇಳಿತು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಆಧಾರ್ ಮತ್ತು ಮತದಾರರ ಕಾರ್ಡ್‌ಗಳನ್ನು ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲಾಗಿತ್ತು, ಇದನ್ನು ಆಯೋಗವೂ ಒಪ್ಪಿಕೊಂಡು ಅಫಿಡವಿಟ್ ಸಲ್ಲಿಸಿದೆ.
ಪಡಿತರ ಕಾರ್ಡ್‌ಗಳನ್ನು ಸುಲಭವಾಗಿ ನಕಲಿ ಮಾಡಬಹುದು ಎಂದು ಹೇಳಿರುವ ಪೀಠವು, ಆಧಾರ್ ಮತ್ತು ಮತದಾರರ ಕಾರ್ಡ್‌ಗಳಿಗೆ ತನ್ನದೇ ಆದ ಪಾವಿತ್ರ್ಯತೆ ಮತ್ತು ದೃಢೀಕರಣವಿದೆ. ಹೀಗಾಗಿ, ಅವುಗಳನ್ನು ಮತದಾರರ ಪರಿಷ್ಕರಣೆಗೆ ಪರಿಗಣಿಸಲು ಸೂಚಿಸಿತ್ತು. ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ವಿರುದ್ಧ ಇಂಡಿಯಾ ಕೂಟದ ಪಕ್ಷಗಳ ಹಲವಾರು ಸಂಸದರು ಸಂಸತ್ತಿನ ಹೊರಗಡೆ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ಸದಸ್ಯೆ ಸೋನಿಯಾ ಗಾಂಧಿ ಮತ್ತಿತರ ಸಂಸದರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 'ಪ್ರಜಾಪ್ರಭುತ್ವದ ಮೇಲೆ ದಾಳಿ' ಎಂಬ ಬ್ಯಾನರ್‌ಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಸಮಾಜವಾದಿ ಪಕ್ಷ, ಆರ್‌ಜೆಡಿ ಮತ್ತು ಎಡ ಪಕ್ಷಗಳು ಸೇರಿದಂತೆ ಇಂಡಿಯಾ ಕೂಟದ ಹಲವಾರು ಸಂಸದರು 'STOP SIR' ಎಂಬ ಫಲಕಗಳೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, "ಸಂಸತ್ತಿನಲ್ಲಿ ಇಂಡಿಯಾ ಒಕ್ಕೂಟವು ಜನರ ಹಕ್ಕುಗಳಿಗಾಗಿ ತನ್ನ ಧ್ವನಿಯನ್ನು ಎತ್ತುವುದನ್ನು ಮುಂದುವರಿಸುತ್ತದೆ. ದುರ್ಬಲ ವರ್ಗಗಳ ಮತದಾನದ ಹಕ್ಕುಗಳನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳಲು ದೇಶಾದ್ಯಂತ ಎಸ್‌ಐಆರ್ ಅನುಷ್ಠಾನವನ್ನು ನಾವು ಸಹಿಸುವುದಿಲ್ಲ. ಆರ್‌ಎಸ್‌ಎಸ್-ಬಿಜೆಪಿ ಸಿದ್ಧಾಂತಗಳು ಸಂವಿಧಾನದ ಮೇಲೆ ಪ್ರಾಬಲ್ಯ ಸಾಧಿಸಲು ನಾವು ಬಿಡುವುದಿಲ್ಲ" ಎಂದು ಅವರು ಹೇಳಿದ್ದಾರೆ.