ಗಾಜ : ಗಾಜಾ ಪಟ್ಟಿಯಲ್ಲಿ ಇಸ್ರೇಲ್ ದಾಳಿ ಮುಂದುವರೆಸಿದ್ದು, ಈ ಗುಂಡಿನ ದಾಳಿಯಲ್ಲಿ 78 ಜನ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಈ ಸಮಯದಲ್ಲಿ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ತಕ್ಷಣವೇ ಅವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೇ ಇಸ್ರೇಲ್ ನೆರವಿನ ಪ್ರವೇಶದ ನಿರ್ಬಂಧ ಸಡಿಸಲು ಮುಂದಾದ ಹಿನ್ನೆಲೆ ಆಹಾರ ಅರಸುತ್ತಿದ್ದ ನೂರಾರು ಜನರ ಕೂಡ ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಗಾಜಾದಲ್ಲಿ ಹಸಿವಿನ ಬಿಕ್ಕಟ್ಟಿನಿಂದ ಜನರು ಕಂಗೆಟ್ಟಿದ್ದು, ಇಸ್ರೇಲ್ ಈ ವಾರಾಂತ್ಯದಲ್ಲಿ ಗಾಜಾ ನಗರದಲ್ಲಿ ಕಾರ್ಯಾಚರಣೆಗೆ ವಿರಾಮ ನೀಡುವುದಾಗಿ ತಿಳಿಸಿತ್ತು. ದೇರ್-ಅಲ್-ಬಲಾಹ್ ಮತ್ತು ಮುವಾಸಿ 10 ಗಂಟೆಗಳ ಕಾಲ ಸಹಾಯ ವಿತರಣೆಗಾಗಿ ಸುರಕ್ಷಿತ ಮಾರ್ಗಗಳನ್ನು ಗೊತ್ತು ಮಾಡಿದ್ದು, ಅಂತಾರಾಷ್ಟ್ರೀಯ ವಿಮಾನದಿಂದ ನೆರವು ಪ್ರಾರಂಭಿಸಲಾಗಿದೆ. ಈ ಪ್ರದೇಶದಲ್ಲಿ ಜನರು ಹಸಿವಿನಿಂದ ಕಂಗೆಟ್ಟಿದ್ದು, ಈಗ ನೀಡಲಾಗಿರುವ ನೆರವು ಯಾವುದಕ್ಕೂ ಸಾಕಾಗುವುದಿಲ್ಲ ಎಂದು ತಿಳಿದು ಬಂದಿದೆ.
ವಿಶ್ವಸಂಸ್ಥೆ ಆಹಾರ ಘಟಕದ ವಕ್ತಾರ ಮಾರ್ಟಿನ್ ಪೆನ್ನರ್ ಮಾತನಾಡಿ, ಆಹಾರ ಸಾಮಗ್ರಿಗಳನ್ನು ಹೊತ್ತು ತಂದ ಎಲ್ಲ 55 ಟ್ರಕ್ಗಳು ನಿಗದಿ ಪಡಿಸಿದ ಜಾಗದಲ್ಲಿ ಭಾನುವಾರ ಅನ್ಲೋಡ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮತ್ತೊಬ್ಬ ವಿಶ್ವಸಂಸ್ಥೆ ಅಧಿಕಾರಿ ಮಾತನಾಡಿ, ಇಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಜೊತೆಗೆ ಪರ್ಯಾಯ ಮಾರ್ಗವನ್ನು ಅನುಮತಿಸಿಲ್ಲ. ಹೊಸ ಮಾನವೀಯ ಪರಿಹಾರದ ಜೊತೆಯಲ್ಲಿಯೇ ತನ್ನ ಸೇನಾ ಕಾರ್ಯಾಚರಣೆಯನ್ನು ಮುಂದುವರೆಸುವುದಾಗಿ ಇಸ್ರೇಲ್ ತಿಳಿಸಿದೆ ಎಂದರು. ಕ್ಲಿಷ್ಟಕರ ಸಿಸೇರಿಯನ್ ಶಸ್ತ್ರಚಿಕಿತ್ಸೆಯಲ್ಲಿ ಜನಿಸಿದ ನವಜಾತ ಶಿಶುವೊಂದು ಸಾವನ್ನಪ್ಪಿದೆ. ಮಗುವನ್ನು ತಕ್ಷಣಕ್ಕೆ ಇನ್ಕ್ಯೂಬಟರ್ನಲ್ಲಿ ಇಡಲಾಯಿತು ಆದರೂ ಬದುಕುಳಿಯಲಿಲ್ಲ ಎಂದು ತಿಳಿದು ಬಂದಿದೆ. ಮಗುವಿನ ತಾಯಿ ಸೋದ್ ಅಲ್-ಶೇರ್ ಏಳು ತಿಂಗಳ ಗರ್ಭಿಣಿಯಾಗಿದ್ದು, ಖಾನ್ ಯೂನಿಸ್ನ ಮುವಾಸಿ ಪ್ರದೇಶ ಮತ್ತು ನೆರೆಯ ಡೇರೆಗಳ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಖಾನ್ ಯೂನಿಸ್ನಲ್ಲಿ ಮತ್ತೊಂದು ವೈಮಾನಿಕ ದಾಳಿ ನಡೆದಿದ್ದು, 11 ಜನರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರಾಗಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ. ಗಾಜಾದಲ್ಲಿ ಇತರ ಕಡೆ ನಡೆದ ದಾಳಿಗಳಲ್ಲಿ ಕನಿಷ್ಠ 5 ಮಂದಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಈ ದಾಳಿ ಕುರಿತು ತಕ್ಷಣಕ್ಕೆ ಇಸ್ರೇಲ್ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗಾಜಾದಲ್ಲಿ ವಿರಾಮದ ವೇಳೆ ನಡೆದ ಒಂದು ದಾಳಿಯ ಬಗ್ಗೆಯೂ ತಿಳಿದಿಲ್ಲ. ಈ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ತಾನು ಉಗ್ರಗಾಮಿಗಳನ್ನು ಮತ್ತು ಹಮಾಸ್ ಸದಸ್ಯರನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದಾಗಿ ಹೇಳಿದೆ. ಆದರೆ, ಸೇನೆ ಜನನಿಬಿಡ ಪ್ರದೇಶಗಳಲ್ಲೂ ದಾಳಿ ನಡೆಸುವ ಮೂಲಕ ನಾಗರಿಕರ ಸಾವಿಗೆ ಕಾರಣವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇಸ್ರೇಲ್ ಪ್ರತಿನಿತ್ಯ ನಡೆಸುತ್ತಿರುವ ವೈಮಾನಿಕ ದಾಳಿಗಳಿಂದ ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂದು ಆರೋಪಿಸಲಾಗಿದೆ.