image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಭಾರತದ ವೇಗವಾದ ಆರ್ಥಿಕತೆಯೊಂದಿಗೆ ದೇಶದ ಮುಂದಿರುವ ಸವಾಲುಗಳು ಸಹ ಹೆಚ್ಚುತ್ತಿವೆ : ಅಮಿತ್ ಶಾ

ಭಾರತದ ವೇಗವಾದ ಆರ್ಥಿಕತೆಯೊಂದಿಗೆ ದೇಶದ ಮುಂದಿರುವ ಸವಾಲುಗಳು ಸಹ ಹೆಚ್ಚುತ್ತಿವೆ : ಅಮಿತ್ ಶಾ

ನವದೆಹಲಿ: ಭಾರತದ ಆಂತರಿಕ ಭದ್ರತಾ ಸವಾಲುಗಳು ದೇಶದ ಭೌಗೋಳಿಕ -ರಾಜಕೀಯ ನೆರೆಹೊರೆಯಿಂದಾಗಿ ಚಲನಶೀಲವಾಗಿ ಉಳಿಯುತ್ತವೆ. ರಾಜ್ಯ ಪೊಲೀಸ್​ ಪಡೆಗಳು ಮತ್ತು ಕೇಂದ್ರ ಭದ್ರತಾ ಸಂಸ್ಥೆಗಳು 'ಸುರಕ್ಷಾ, ಸಜಕ್ತ ಮತ್ತು ಸಮನ್ವಯ' (ಭದ್ರತೆ, ಜಾಗರೂಕತೆ ಮತ್ತು ಸಮನ್ವಯ) ಧ್ಯೇಯವಾಕ್ಯಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಕೇಂದ್ರ ಗೃಹ ಸಚಿವ ಶಾ ಪ್ರೋತ್ಸಾಹಿಸಿದರು. ನವದೆಹಲಿಯಲ್ಲಿ ನಡೆದ ಎಂಟನೇ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರಗಳ ಸಮ್ಮೇಳನದಲ್ಲಿ (NSSC) ಸಮಾರೋಪ ಭಾಷಣ ಮಾಡಿದ ಅಮಿತ್​ ಶಾ, "ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಪುನರುಚ್ಚರಿಸಿದ್ದಾರೆ. ಜೊತೆಗೆ ಆಪರೇಷನ್​ ಸಿಂಧೂರ್​ ಮೂಲಕ ಅದನ್ನು ವಿಶ್ವಕ್ಕೆ ತೋರಿಸಿದ್ದಾರೆ" ಎಂದು ಹೇಳಿದರು.

"ಮೋದಿ ಸರ್ಕಾರ ವಿವಿಧ ರಾಜ್ಯಗಳಲ್ಲಿರುವ ಹಲವಾರು ಸಮಸ್ಯೆಗಳನ್ನು ಪರಿಹರಿಸಿದೆ. ವೇಗವಾಗಿ ಹೊರಹೊಮ್ಮುತ್ತಿರುವ ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಿದೆ. ಅದರ ಜೊತೆಗೆ ದೇಶದ ಮುಂದಿರುವ ಸವಾಲುಗಳು ಸಹ ಹೆಚ್ಚುತ್ತಿವೆ. ನಾವು ಹೆಚ್ಚು ಜಾಗರೂಕರಾಗಿರಬೇಕು. ಹೆಚ್ಚು ಯೋಜನೆ ಮಾಡಿ ಸಮಸ್ಯೆಗಳನ್ನು ನಿಭಾಯಿಸಬೇಕು" ಎಂದು ಕರೆ ನೀಡಿದರು. ಯುವ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳು ಮಾರ್ಗದರ್ಶನ ನೀಡಿ, ಸಮಸ್ಯೆಗಳನ್ನು ಅವರಿಗೆ ಪರಿಚಯಿಸುವ ಜೊತೆಗೆ ಪರಿಹಾರ ಕಂಡುಕೊಳ್ಳುವಂತಹ ದಾರಿಯನ್ನು ತೋರಿಸಿ. ಇದೆಲ್ಲಕ್ಕೂ ಎನ್​ಎಸ್​ಎಸ್​ಸಿ ಅನುವು ಮಾಡಿಕೊಡುತ್ತದೆ. ಎಲ್ಲಾ ರಾಜ್ಯಗಳ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ಪಡೆಗಳು ವಿಶ್ವದಲ್ಲೇ ಅತ್ಯುತ್ತಮ ಗುರಿ ಜೊತೆ ಮುಂದುವರಿಯಬೇಕು. ದೇಶ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ನೈಜ ಸಮಯದ ದತ್ತಾಂಶ ಹಂಚಿಕೆಗಾಗಿ ವಿಶ್ವಾಸಾರ್ಹ ವಾತಾವರಣ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.

ಎಲ್ಲಾ ಸಂಸ್ಥೆಗಳು ಭದ್ರತೆಗೆ ಮೊದಲ ಸ್ಥಾನವನ್ನು ನೀಡಬೇಕು. ಅಭ್ಯಾಸದ ಜಾಗರೂಕತೆ ಮತ್ತು ಸಮನ್ವಯವನ್ನು ತಮ್ಮ ಕಾರ್ಯ ವಿಧಾನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು. ಪ್ರಧಾನಮಂತ್ರಿ ಅವರ ಬಲವಾದ ಸಂಕಲ್ಪ ಮತ್ತು ನಾಗರಿಕರ ಬೆಂಬಲ ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಟುತೆಯ ಬಲವಾದ ಸಂದೇಶವನ್ನು ಪ್ರಪಂಚಕ್ಕೆ ರವಾನಿಸಿದೆ ಎಂದು ಹೇಳಿದರು. ಭಾರತದ ಆರ್ಥಿಕತೆ ಜಾಗತಿಕವಾಗಿ ನಾಲ್ಕನೇ ಸ್ಥಾನಕ್ಕೆ ಏರಿದೆ. ಭಾರತ ಈಗ ಹೊಸ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳು, ನವೋದ್ಯಮಗಳು, ಗ್ರೀನ್​ ಪವರ್​ ಮತ್ತು ನಾವೀನ್ಯತೆಗಳಲ್ಲಿ ವಿಶ್ವ ನಾಯಕನಾಗಿದೆ. ಭಾರತದ ಹೆಚ್ಚುತ್ತಿರುವ ಸ್ಥಾನಮಾನ ಮುಂಬರುವ ವರ್ಷಗಳಲ್ಲಿ ರಾಷ್ಟ್ರೀಯ ಭದ್ರತಾ ಸವಾಲುಗಳ ಹೆಚ್ಚಳಕ್ಕೂ ಕಾರಣವಾಗುತ್ತದೆ ಎಂದು ಒತ್ತಿ ಹೇಳಿದರು.

ಮುಂದಿನ 5ರಿಂದ 10 ವರ್ಷಗಳು ಭಾರತದ ಅಭಿವೃದ್ಧಿ ಹಾಗೂ ಭದ್ರತೆ ಬಹಳ ಮುಖ್ಯವಾಗುತ್ತವೆ. ಆ ನಿಟ್ಟಿನಲ್ಲಿ ಎಲ್ಲಾ ತರಬೇತಿ ಕಾರ್ಯಕ್ರಮಗಳಲ್ಲಿ ಯುವ ಪೊಲೀಸ್​ ಅಧಿಕಾರಿಗಳನ್ನು ಸೇರಿಸಿಕೊಂಡು, ರಾಷ್ಟ್ರೀಯ ಡಾಟಾಬೇಸ್​ಗಳಾದ NATGRID, NIDAAN, iMoT ಮತ್ತು CBIಯ ಪ್ಯುಗಿಟಿವ್​ ಡೇಟಾಬೇಸ್​ಗಳನ್ನು ಬಳಸಿಕೊಳ್ಳುವಂತೆ ಒತ್ತಾಯಿಸಿದರು. ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳಲ್ಲಿನ ಸಾಧನೆಗಳನ್ನು ಶ್ಲಾಘಿಸಿದ ಅಮಿತ್​ ಶಾ, ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಯ ಅಗತ್ಯವನ್ನು ಒತ್ತಿ ಹೇಳಿದರು. ಜೊತೆಗೆ ಮೂರು ಹೊಸ ಕ್ರಿಮಿನಲ್​ ಕಾನೂನುಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಮಾದಕ ವಸ್ತುಗಳ ಸರಬರಾಜು ಸವಾಲನ್ನು ನಿಭಾಯಿಸಲು ಇದೇ ರೀತಿಯ ವಿಧಾನವನ್ನು ಅಳವಡಿಸಿಕೊಳ್ಳಿ. ಹಾಗೂ ನಶ ಮುಕ್ತ ಭಾರತ ನಿರ್ಮಿಸುವ ಹಾದಿಯಲ್ಲಿ ಮುಂದಿನ ಮೂರು ವರ್ಷಗಳ ಕಾಲ ಇದನ್ನೇ ಪೊಲೀಸರು ತಮ್ಮ ಪ್ರಮುಖ ಕಾರ್ಯಸೂಚಿಯನ್ನಾಗಿ ಮಾಡಿಕೊಳ್ಳಲು ಡಿಜಿಪಿಗಳಿಗೆ ನಿರ್ದೇಶನ ನೀಡಿದರು.

Category
ಕರಾವಳಿ ತರಂಗಿಣಿ