ಆಂಧ್ರ ಪ್ರದೇಶ : ಡ್ರೋನ್ ಮೂಲಕ ಉಡಾಯಿಸುವ ಕ್ಷಿಪಣಿಯನ್ನು ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿದ್ದು, ಭಾರತದ ರಕ್ಷಣಾ ವ್ಯವಸ್ಥೆಯ ಬತ್ತಳಿಕೆಗೆ ಮತ್ತೊಂದು ಅಸ್ತ್ರ ಸೇರಿದೆ. ಭಾರತದ ಡ್ರೋನ್ ಯುದ್ಧ ಸಾಮರ್ಥ್ಯಗಳಿಗೆ ಗಮನಾರ್ಹ ಉತ್ತೇಜನ ನೀಡುವ ಸಲುವಾಗಿ, ಮಾನವರಹಿತ ವೈಮಾನಿಕ ವಾಹನದಿಂದ (UAV) ಉಡಾವಣೆ ಮಾಡಲಾದ 'ನಿಖರ-ನಿರ್ದೇಶಿತ ಕ್ಷಿಪಣಿ'ಯನ್ನು ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಮಾನವರಹಿತ ವೈಮಾನಿಕ ವಾಹನ ಉಡಾವಣೆಯಾದ ನಿಖರ ಮಾರ್ಗದರ್ಶಿ ಕ್ಷಿಪಣಿ - ಆವೃತ್ತಿ 3 (ULPGM-V3) ಎಂಬ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಶಸ್ತ್ರಾಸ್ತ್ರವನ್ನು ಈ ಪರೀಕ್ಷೆ ಒಳಗೊಂಡಿತ್ತು. ಪರೀಕ್ಷೆಯು ರಾಷ್ಟ್ರೀಯ ಮುಕ್ತ ಪ್ರದೇಶ ಶ್ರೇಣಿಯಲ್ಲಿ (NOAR) ನಡೆಯಿತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯು ಡ್ರೋನ್ ಮೂಲಕ ಉಡಾವಣೆ ಮಾಡುವ ನಿಖರ ಮಾರ್ಗದರ್ಶಿ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪರೀಕ್ಷೆಯ ಛಾಯಾಚಿತ್ರ ಹಂಚಿಕೊಂಡಿರುವ ಅವರು, ''ಭಾರತದ ರಕ್ಷಣಾ ಸಾಮರ್ಥ್ಯಗಳಿಗೆ ಪ್ರಮುಖ ಉತ್ತೇಜನವಾಗಿ, ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿರುವ ರಾಷ್ಟ್ರೀಯ ಮುಕ್ತ ಪ್ರದೇಶ ಶ್ರೇಣಿಯ ಪರೀಕ್ಷಾ ವ್ಯಾಪ್ತಿಯಲ್ಲಿ ಉಡಾವಣೆಯ 'ನಿಖರ-ನಿರ್ದೇಶಿತ ಕ್ಷಿಪಣಿ' (ULPGM) V-3ನ ಹಾರಾಟದ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ'' ಎಂದು ತಿಳಿಸಿದ್ದಾರೆ. ಕ್ಷಿಪಣಿಯ ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ತೊಡಗಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), MSMEಗಳು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಅಭಿನಂದಿಸಿ ಶುಭಾಶಯ ಕೋರಿರುವ ಕೇಂದ್ರ ಸಚಿವರು, ''ಇಂದು ನಡೆಸಿದ ಪರೀಕ್ಷೆಯು ಭಾರತದ ಕ್ಷಿಪಣಿಗಳ ಬಲಾಢ್ಯತೆಗೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ಸಿಕ್ಕಿದೆ. ಇದರಿಂದ ಭಾರತೀಯ ರಕ್ಷಣಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ಬಂದಿದೆ. ಸುಧಾರಿತ ರಕ್ಷಣಾ ತಂತ್ರಜ್ಞಾನಗಳನ್ನು ಕರಗತ ಮಾಡಿಕೊಳ್ಳುವ ಮತ್ತು ಉತ್ಪಾದಿಸುವಲ್ಲಿ ಭಾರತದ ಬೆಳೆಯುತ್ತಿರುವ ಪರಿಣತಿಗೆ ಪುರಾವೆ'' ಎಂದು ಶ್ಲಾಘಿಸಿದ್ದಾರೆ.
ಪರೀಕ್ಷಾರ್ಹ ULPGM-V3ನ ತಾಂತ್ರಿಕ ಅಂಶಗಳನ್ನು ಸದ್ಯಕ್ಕೆ ಬಹಿರಂಗಪಡಿಸಲಾಗಿಲ್ಲ. ಈ ಕ್ಷಿಪಣಿಯು ಈ ಹಿಂದೆ ಪರೀಕ್ಷಿಸಲಾದ ULPGM-V2 ಪ್ಲಾಟ್‌ಫಾರ್ಮ್‌ನ ಸಾಮರ್ಥ್ಯಗಳ ಮೇಲೆ ನಿರ್ಮಿಸಲ್ಪಟ್ಟಿದೆ ಎಂದು ಹೇಳಲಾಗುತ್ತಿದೆ. 2,200 ಎಕರೆಗಳಲ್ಲಿ ಹರಡಿರುವ ರಾಷ್ಟ್ರೀಯ ಮುಕ್ತ ಪ್ರದೇಶ (NOAR) ಶ್ರೇಣಿಯು, DRDO ಅಡಿಯಲ್ಲಿ ಅತ್ಯಾಧುನಿಕ ಎಲೆಕ್ಟ್ರಾನಿಕ್ ಯುದ್ಧ ಪರೀಕ್ಷಾ ಸೌಲಭ್ಯವಾಗಿದ್ದು, 2016–17ರಲ್ಲಿ ಇದನ್ನು ಉದ್ಘಾಟನೆಯಾಗಿದೆ. ಇದು ಈ ಹಿಂದೆ ಸ್ಥಿರ-ವಿಂಗ್ UAVಗಳನ್ನು ತಟಸ್ಥಗೊಳಿಸುವ ಗುರಿಯನ್ನು ಹೊಂದಿರುವ ಡೈರೆಕ್ಟೆಡ್ ಎನರ್ಜಿ ವೆಪನ್ಸ್ (DEWs)ಗಾಗಿ ಪ್ರಯೋಗಗಳನ್ನು ಆಯೋಜಿಸಿತ್ತು.