ನವದೆಹಲಿ: ಏಪ್ರಿಲ್ 22, 2025ರಂದು ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಈ ದಾಳಿಯ ಹೊಣೆ ಹೊತ್ತುಕೊಂಡಿದ್ದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಅನ್ನು ಅಮೆರಿಕವು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಇದು ಪಾಕಿಸ್ತಾನದ ಭಯೋತ್ಪಾದಕ ದಾಳಿ ವಿರುದ್ಧವಾಗಿ ಭಾರತಕ್ಕೆ ಸಿಕ್ಕ ದೊಡ್ಡ ರಾಜತಾಂತ್ರಿಕ ಗೆಲುವಾಗಿದೆ. ಈ ಸಂಬಂಧ ಅಮೆರಿಕ ವಿದೇಶಾಂಗ ಇಲಾಖೆಯು ಗುರುವಾರ ಬಿಡುಗಡೆ ಮಾಡಿದ್ದು, ಪಹಲ್ಗಾಮ್ ದಾಳಿಗೆ ನ್ಯಾಯ ಒದಗಿಸುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಅಮೆರಿಕವು ಬದ್ಧತೆ ಪ್ರದರ್ಶಿಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ. ದಾಳಿಯ ಹೊಣೆಯನ್ನು ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿತು, ಆದರೆ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾದಂತೆ, ಅದು ಹಿಂದೆ ಸರಿಯಿತು. ವಿದೇಶಾಂಗ ಇಲಾಖೆಯು ಟಿಆರ್‌ಎಫ್ ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ (FTO) ಹಾಗೂ ವಿಶೇಷವಾಗಿ ಗುರುತಿಸಲ್ಪಟ್ಟ ಜಾಗತಿಕ ಭಯೋತ್ಪಾದಕರು (SDGT) ಎಂದು ಹೆಸರಿಸಿದೆ ಎಂದು ರುಬಿಯೊ ತಿಳಿಸಿದ್ದಾರೆ.
"ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯ ಸೆಕ್ಷನ್ 219 ಮತ್ತು ಕಾರ್ಯನಿರ್ವಾಹಕ ಆದೇಶ 13224ರ ಪ್ರಕಾರ, ಟಿಆರ್‌ಎಫ್ ಮತ್ತು ಇತರ ಸಂಘಟನೆಗಳನ್ನು ಎಲ್ಇಟಿಯ ಎಫ್ಟಿಒ ಹಾಗೂ ಎಸ್ಡಿಜಿಟಿ ಎಂದು ಹೆಸರಿಸಲಾಗಿದೆ. ವಿದೇಶಾಂಗ ಇಲಾಖೆಯು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಂಡಿದೆ'' ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ. ''ಟಿಆರ್‌ಎಫ್ ವಿರುದ್ಧದ ಈ ಕ್ರಮವು, ನಮ್ಮ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳನ್ನು ರಕ್ಷಣೆ, ಭಯೋತ್ಪಾದನೆ ಎದುರಿಸಲು ಮತ್ತು ಪಹಲ್ಗಾಮ್ ದಾಳಿಗೆ ನ್ಯಾಯ ಒದಗಿಸಲು ಅಧ್ಯಕ್ಷ ಟ್ರಂಪ್ ಅವರ ಕರೆಯನ್ನು ಜಾರಿಗೆ ತರುವಲ್ಲಿ ನಮ್ಮ ಆಡಳಿತದ ಬದ್ಧತೆಯನ್ನು ತೋರುತ್ತದೆ'' ಎಂದು ಮಾರ್ಕೊ ರುಬಿಯೊ ವಿವರಿಸಿದ್ದಾರೆ.
"2008ರ ಮುಂಬೈ ದಾಳಿಯ ಬಳಿಕ ಭಾರತದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಮಾರಕ ದಾಳಿ ಇದು (ಪಹಲ್ಗಾಮ್ ದಾಳಿ). ಇತ್ತೀಚೆಗೆ 2024ರಲ್ಲಿ ನಡೆದ ದಾಳಿ ಸೇರಿದಂತೆ ಭಾರತೀಯ ಭದ್ರತಾ ಪಡೆಗಳ ವಿರುದ್ಧದ ಹಲವಾರು ದಾಳಿಗಳಿಗೆ ಟಿಆರ್‌ಎಫ್ ಹೊಣೆ ಹೊತ್ತುಕೊಂಡಿದೆ'' ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದರು. ಪಹಲ್ಗಾಮ್ ದಾಳಿಗೆ ಪ್ರತಿಯಾಗಿ, ಭಾರತವು ಮೇ 7ರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಮೂಲಸೌಕರ್ಯ ತಾಣಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ನಡೆಸಿತ್ತು. ನಾಲ್ಕು ದಿನಗಳ ಸಂಘರ್ಷದ ಬಳಿಕ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿದ್ದವು. ತದನಂತರ, ಭಾರತದಿಂದ ಏಳು ಬಹುಪಕ್ಷ ನಿಯೋಗಗಳು ವಾಷಿಂಗ್ಟನ್ ಸೇರಿದಂತೆ 33 ಜಾಗತಿಕ ರಾಜಧಾನಿಗಳಿಗೆ ಭೇಟಿ ನೀಡಿ, ಪಾಕಿಸ್ತಾನದ ಭಯೋತ್ಪಾದನೆಯ ಸಂಪರ್ಕದ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ವಿವರಣೆ ನೀಡಿದ್ದರು.