ಇರಾಕ್ : ಪೂರ್ವ ಇರಾಕ್‌ನ ವಾಸಿತ್ ಪ್ರಾಂತ್ಯದ ಕುಟ್ ಪಟ್ಟಣದಲ್ಲಿನ ಮಾಲ್‌ವೊಂದು ಬೆಂಕಿಗೆ ಆಹುತಿಯಾಗಿದ್ದು ಮಹಿಳೆಯರು, ಮಕ್ಕಳು ಸೇರಿ 50 ಮಂದಿ ಸಾವಿಗೀಡಾಗಿದ್ದಾರೆ. ದುರ್ಘಟನೆಯಲ್ಲಿ ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಲ್ಲಿನ ಗವರ್ನರ್ ತಿಳಿಸಿದ್ದಾರೆ. ಎಂದಿನಂತೆ ಮಾಲ್ನಲ್ಲಿ ಜನರು ಖರೀದಿಯಲ್ಲಿ ತೊಡಗಿದ್ದಾಗ, ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ಬಹು ಮಹಡಿಗಳಿಗೆ ವ್ಯಾಪಿಸಿದೆ. ಇದರಿಂದ ಗ್ರಾಹಕರು ಹೊರಬರಲಾಗದೇ ಬೆಂಕಿಗೆ ಸಿಲುಕಿದ್ದಾರೆ. ಇದು ಸಾವು ನೋವಿಗೆ ಕಾರಣವಾಗಿದೆ ಎಂದು ಗವರ್ನರ್ ಮೊಹಮ್ಮದ್ ಅಲ್ ಮಯ್ಯೆಹ್ ತಿಳಿಸಿದ್ದಾರೆ.
ಭೀಕರ ದುರಂತದ ಹಿನ್ನೆಲೆ, ಪ್ರಾಂತ್ಯದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಮಾಲ್ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕಟ್ಟಡ ಮಾಲೀಕರ ವಿರುದ್ಧ ಕಾನೂನುರೀತ್ಯ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಎಂದು ಗವರ್ನರ್ ಹೇಳಿದ್ದಾರೆ. ದುರ್ಘಟನೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೆಂಕಿಯಲ್ಲಿ ಬಲಿಯಾದವರ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿಕೊಡಲಾಗುವುದು ಅವರು ಭರವಸೆ ನೀಡಿದ್ದಾರೆ.
ಕಟ್ಟಡದ ಕಳಪೆ ಗುಣಮಟ್ಟ ಮತ್ತು ಬೆಂಕಿ ಎಚ್ಚರಿಕೆ ಕ್ರಮಗಳನ್ನು ಹೊಂದಿರದ ಹಿನ್ನೆಲೆ ಇರಾಕ್‌ನಲ್ಲಿ ಅಗ್ನಿ ದುರಂತಗಳು ಸಂಭವಿಸಿವೆ. 2021ರ ಜುಲೈ ತಿಂಗಳಲ್ಲಿ ನಸಿರಿಯಾ ನಗರದ ಆಸ್ಪತ್ರೆಯಲ್ಲಿ ಬೆಂಕಿ ಹೊತ್ತಿಕೊಂಡು 90 ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದರು. 2023 ರಲ್ಲಿ ನಿನೆವೆ ಪ್ರಾಂತ್ಯದ ಹಮ್ದನಿಯಾದ ಮದುವೆ ಮಂಟಪದಲ್ಲಿ ಸೀಲಿಂಗ್ ಪ್ಯಾನೆಲ್‌ಗಳಿಂದ ಬೆಂಕಿ ಹೊತ್ತಿಕೊಂಡು 100 ಕ್ಕೂ ಹೆಚ್ಚು ಮಂದಿ ಸುಟ್ಟು ಕರಕಲಾಗಿದ್ದರು. ಈ ದುರಂತಗಳ ಬಳಿಕ ಬೆಂಕಿ ಅವಘಡ ತಪ್ಪಿಸುವ ಕ್ರಮಗಳನ್ನು ಕಟ್ಟಡಗಳಲ್ಲಿ ಅಳವಡಿಸಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿತ್ತು.