image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಬಿಹಾರದಲ್ಲಿ 125 ಯುನಿಟ್​​ ಉಚಿತ ವಿದ್ಯುತ್​: ಸಿಎಂ ನಿತೀಶ್ ಕುಮಾರ್​​ ಘೋಷಣೆ

ಬಿಹಾರದಲ್ಲಿ 125 ಯುನಿಟ್​​ ಉಚಿತ ವಿದ್ಯುತ್​: ಸಿಎಂ ನಿತೀಶ್ ಕುಮಾರ್​​ ಘೋಷಣೆ

ಬಿಹಾರ : ಚುನಾವಣೆ ಹೊಸ್ತಿಲಲ್ಲಿರುವ ಬಿಹಾರದ ಜನರಿಗೆ ಪ್ರತಿ ತಿಂಗಳು 125 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ರಾಜ್ಯದ 1.67 ಕೋಟಿ ಕುಟುಂಬಗಳು ಈ ಉಚಿತ ವಿದ್ಯುತ್ ಯೋಜನೆಯ​ ಸೌಲಭ್ಯ ಪಡೆಯಲಿದ್ದಾರೆ. ಈ ಕುರಿತು ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ನಿತೀಶ್ ಕುಮಾರ್,​ "ನಾವು ಮೊದಲಿನಿಂದಲೂ ಎಲ್ಲರಿಗೂ ಕೈಗೆಟುಕುವ ದರದಲ್ಲಿ ವಿದ್ಯುತ್​ ಒದಗಿಸುತ್ತಿದ್ದೇವೆ. ಇದೀಗ, 2025ರ ಆಗಸ್ಟ್​ 1ರಿಂದ ಜುಲೈ ತಿಂಗಳ ಬಿಲ್​ನಿಂದಲೇ ರಾಜ್ಯದ ಎಲ್ಲಾ ಗೃಹಬಳಕೆದಾರರು 125 ಯೂನಿಟ್‌ಗಳವರೆಗಿನ ವಿದ್ಯುತ್‌ಗೆ ಯಾವುದೇ ಹಣ ಪಾವತಿಸಬೇಕಾಗಿಲ್ಲ. ಇದು ರಾಜ್ಯದ 1 ಕೋಟಿ 67 ಲಕ್ಷ ಕುಟುಂಬಗಳಿಗೆ ಅನ್ವಯವಾಗಲಿದೆ" ಎಂದು​ ತಿಳಿಸಿದ್ದಾರೆ.

ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಎಲ್ಲಾ ಗೃಹ ಬಳಕೆ ಗ್ರಾಹಕರ ಒಪ್ಪಿಗೆ ಪಡೆದು, ಅವರ ಮನೆಗಳ ಮೇಲ್ಛಾವಣಿಗಳ ಮೇಲೆ ಸೌರಶಕ್ತಿ ಉಪಕರಣಗಳನ್ನು ಅಳವಡಿಸಲು, ಅಥವಾ ಹತ್ತಿರದ ಸಾರ್ವಜನಿಕ ಸ್ಥಳಗಳಲ್ಲಿ ಸೌರವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಿ, ಅವರಿಗೆ ವಿದ್ಯುತ್ ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕೂಡ ಅವರು ವಿವರಿಸಿದ್ದಾರೆ. 10,000 ಮೆಗಾವ್ಯಾಟ್ ಸೌರಶಕ್ತಿ ಉತ್ಪಾದನೆ: ಈ ಸೌರಶಕ್ತಿ ಉಪಕರಣದ ಅಳವಡಿಕೆಯ ಎಲ್ಲಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. 'ಕುಟೀರ ಜ್ಯೋತಿ' ಯೋಜನೆ ಅಡಿಯಲ್ಲಿ ಕಡುಬಡ ಕುಟುಂಬಗಳಿಗೆ ಈ ಸೌಲಭ್ಯ ನೀಡಲಾಗುವುದು. ಇತರೆ ಕುಟುಂಬಗಳಿಗೆ ಇತರೆ ಅಗತ್ಯ ಸೌಲಭ್ಯ ನೀಡುವ ಮೂಲಕ ವಿದ್ಯುತ್​ ಖರ್ಚನ್ನು ಹೋಗಲಾಡಿಸುವ ಕ್ರಮ ಕೈಗೊಳ್ಳಲಾಗುವುದು. ಈ ಯೋಜನೆಯು 125 ಯುನಿಟ್​ನ ಉಚಿತ ವಿದ್ಯುತ್​ ನೀಡುವ ಜೊತೆಗೆ, ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 10,000 ಮೆಗಾವ್ಯಾಟ್ ಸೌರಶಕ್ತಿ ಉತ್ಪಾದನೆಯ ಗುರಿಯನ್ನೂ ಹೊಂದಿದೆ ಎಂದು ಸಿಎಂ ನಿತೀಶ್​ ಹೇಳಿದ್ದಾರೆ.

ರಾಜ್ಯದಲ್ಲಿ ಬಹುಚರ್ಚೆಗೆ ಒಳಗಾಗಿದ್ದ ಜನರಿಗೆ ಉಚಿತ ವಿದ್ಯುತ್​ ನೀಡುವ ಯೋಜನೆ ಜಾರಿಯ ವಿಚಾರವನ್ನು ಸಿಎಂ ನಿತೀಶ್​ ಕುಮಾರ್​​ ಅಲ್ಲಗಳೆದಿದ್ದರು. ಅಲ್ಲದೆ, ಜೆಡಿಯು ಅಧ್ಯಕ್ಷರೂ ಆಗಿರುವ ನಿತೀಶ್ ಕುಮಾರ್,​ ಈ ಹಿಂದಿನಿಂದಲೂ ಉಚಿತ ಕೊಡುಗೆಗಳನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಅದರಲ್ಲೂ ಚುನಾವಣೆ ಸಮಯದಲ್ಲಿ ನೀಡುವ ಉಚಿತ ಘೋಷಣೆಗಳನ್ನು ಅನೇಕ ಸಂದರ್ಭಗಳಲ್ಲಿ ಅವರು ವಿರೋಧಿಸಿ ಮಾತನಾಡಿದ್ದಾರೆ. ಆದರೆ, ಇದೀಗ ಚುನಾವಣೆ ಸಮೀಪಿಸುತ್ತಿರುವಾಗಲೇ ಉಚಿತ ವಿದ್ಯುತ್​ ಯೋಜನೆ ಘೋಷಣೆ ಮಾಡಿದ್ದಾರೆ. ಬಿಹಾರ ವಿಧಾನಸಭೆಗೆ 2025ರ ನವೆಂಬರ್​ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.

Category
ಕರಾವಳಿ ತರಂಗಿಣಿ