image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

16 ವರ್ಷಗಳಲ್ಲಿ ಲಕ್ಷಾಂತರ ಜನರು ಸಾವನ್ನಪ್ಪಿದ್ದರೂ, ನಿಷ್ಕ್ರಿಯಗೊಳಿಸಲಾದ ಆಧಾರ್ ಕಾರ್ಡ್​ಗಳ ಸಂಖ್ಯೆ ಅತಿ ಕಡಿಮೆ...!

16 ವರ್ಷಗಳಲ್ಲಿ ಲಕ್ಷಾಂತರ ಜನರು ಸಾವನ್ನಪ್ಪಿದ್ದರೂ, ನಿಷ್ಕ್ರಿಯಗೊಳಿಸಲಾದ ಆಧಾರ್ ಕಾರ್ಡ್​ಗಳ ಸಂಖ್ಯೆ ಅತಿ ಕಡಿಮೆ...!

ನವದೆಹಲಿ: ಪ್ರಮುಖ ಗುರುತಿನ ದಾಖಲೆಯಾದ ಆಧಾರ್ ಕಾರ್ಡ್‌ ಬಗ್ಗೆ ಅಚ್ಚರಿಯ ಅಂಶವೊಂದು ಬೆಳಕಿಗೆ ಬಂದಿದೆ. ಆಧಾರ್​ ಜಾರಿಯಾದಾಗಿನಿಂದ ಅಂದರೆ ಕಳೆದ 16 ವರ್ಷಗಳಲ್ಲಿ ಲಕ್ಷಾಂತರ ಜನರು ಸಾವನ್ನಪ್ಪಿದ್ದರೂ, ನಿಷ್ಕ್ರಿಯಗೊಳಿಸಲಾದ ಕಾರ್ಡ್​ಗಳ ಸಂಖ್ಯೆ ಅತಿ ಕಡಿಮೆ ಇದೆ ಎಂದು ತಿಳಿದು ಬಂದಿದೆ. ಈ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ, ಬಂದ ಉತ್ತರವು ಅಚ್ಚರಿ ಮೂಡಿಸುತ್ತದೆ. ಆಧಾರ್ ಕಾರ್ಯಕ್ರಮ ಆರಂಭವಾದಾಗಿನಿಂದ ಯುಡಿಎಐ ಕೇವಲ 1.15 ಕೋಟಿ ಕಾರ್ಡ್ ಸಂಖ್ಯೆಗಳನ್ನು ಮಾತ್ರ ನಿಷ್ಕ್ರಿಯಗೊಳಿಸಿದೆ ಎಂದು ತಿಳಿದುಬಂದಿದೆ. ಜೂನ್ 2025 ರ ಹೊತ್ತಿಗೆ, ಭಾರತದಲ್ಲಿ 142.39 ಕೋಟಿ ಜನರು ಆಧಾರ್ ಸಂಖ್ಯೆ ಪಡೆದಿದ್ದಾರೆ. ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ಪ್ರಕಾರ, ಈ ವರ್ಷದ ಏಪ್ರಿಲ್ ವೇಳೆಗೆ ದೇಶದ ಜನಸಂಖ್ಯೆ 146.39 ಕೋಟಿ ಇದೆ ಎಂದು ಅಂದಾಜಿಸಲಾಗಿದೆ. ನಾಗರಿಕ ನೋಂದಣಿ ವ್ಯವಸ್ಥೆ (ಸಿಎಸ್‌ಆರ್) ದತ್ತಾಂಶದ ಪ್ರಕಾರ, 2007 ರಿಂದ 2019 ರವರೆಗೆ ಪ್ರತಿ ವರ್ಷ ಸರಾಸರಿ 83.5 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಈ ಲೆಕ್ಕಾಚಾರದಲ್ಲಿ ಕೋಟ್ಯಂತರ ಜನರು ಮೃತಪಟ್ಟಿದ್ದಾರೆ. ಆದರೆ, ಯುಡಿಎಐ ನಿಷ್ಕ್ರಿಯಗೊಳಿಸಿರುವ ಕಾರ್ಡ್ ಗಳ ಸಂಖ್ಯೆ ಅತಿ ಕಡಿಮೆಯಾಗಿದೆ. ಕೇವಲ ಶೇ.10 ರಷ್ಟು ಸಾವುಗಳನ್ನು ಮಾತ್ರ ಅದು ನಿಷ್ಕ್ರಿಯಗೊಳಿಸಿದೆ.

ಈ ಕುರಿತು ಯುಐಡಿಎಐ ಪ್ರತಿಕ್ರಿಯಿಸಿದ್ದು, ಮೃತ ವ್ಯಕ್ತಿಗಳ ಆಧಾರ್ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯು ತುಂಬಾ ಜಟಿಲವಾಗಿದೆ. ರಾಜ್ಯ ಸರ್ಕಾರಗಳು ನೀಡುವ ಮರಣ ಪ್ರಮಾಣಪತ್ರಗಳು ಮತ್ತು ಮೃತರ ಕುಟುಂಬ ಸದಸ್ಯರು ಒದಗಿಸುವ ಮಾಹಿತಿಯ ಆಧಾರದ ಮೇಲೆ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಪ್ರತಿ ವರ್ಷ ಮರಣಗಳ ಆಧಾರದ ಮೇಲೆ ಆಧಾರ್ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸುವ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಮೃತ ವ್ಯಕ್ತಿಗಳ ಆಧಾರ್ ಸಂಖ್ಯೆಯ ಬಗ್ಗೆ ನಮ್ಮ ಬಳಿ ಯಾವುದೇ ನಿರ್ದಿಷ್ಟ ದಾಖಲೆ ಇಲ್ಲ ಎಂದು ಅದು ತಿಳಿಸಿದೆ. ಮೃತ ವ್ಯಕ್ತಿಗಳ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸದಿರುವ ಬಗ್ಗೆ ಇರುವ ಕಳವಳದಷ್ಟೇ, ಅವುಗಳು ಸಕ್ರಿಯವಾಗಿರುವುದು ಭೀತಿ ಮೂಡಿಸುತ್ತದೆ. ಮೃತರ ಸಕ್ರಿಯ ಆಧಾರ್‌ ಸಂಖ್ಯೆಗಳು ದುರುಪಯೋಗವಾಗುವ ಸಾಧ್ಯತೆಯಿದೆ ಎಂದು ಅನೇಕ ತಜ್ಞರು ಹೇಳುತ್ತಾರೆ. ಈ ಐಡಿಗೆ ಲಿಂಕ್ ಮಾಡಲಾದ ಸರ್ಕಾರಿ ಯೋಜನೆಗಳು, ಸಬ್ಸಿಡಿಗಳು ಮತ್ತು ಇತರ ಸೇವೆಗಳು ಮತ್ತೊಬ್ಬರ ಪಾಲಾಗುವ ಸಾಧ್ಯತೆ ಇರುತ್ತದೆ.

ಕೇಂದ್ರ ಸರ್ಕಾರವು 16 ವರ್ಷಗಳ ಹಿಂದೆ ಅಂದರೆ, 2009 ರಲ್ಲಿ ಆಧಾರ್ ಕಾರ್ಯಕ್ರಮವನ್ನು ಪರಿಚಯಿಸಿತು. ಅಂದಿನಿಂದ, ದೇಶದಲ್ಲಿ 142.39 ಕೋಟಿ ಜನರು ಆಧಾರ್ ಕಾರ್ಡ್‌ಗಳನ್ನು ಪಡೆದಿದ್ದಾರೆ. ಇದು ದೇಶದ ಪ್ರಮುಖ ಗುರುತಿನ ದಾಖಲೆಯಾಗಿದೆ. ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್‌ಗಳನ್ನು ಪಡೆದವರು ತಮ್ಮ ಫೋನ್‌ಗಳಲ್ಲಿ UIDAI ನಿಂದ ನವೀಕರಿಸಲು ಸಂದೇಶಗಳನ್ನು ಸ್ವೀಕರಿಸುತ್ತಾರೆ. ಇದಕ್ಕಾಗಿ ವಿಶೇಷ ಕೇಂದ್ರಗಳೂ ಇವೆ. ಇದು 10 ವರ್ಷಗಳವರೆಗೆ ಮಾತ್ರ ಮಾನ್ಯವಾಗಿರುವಂತೆ ನಿಯಮಗಳನ್ನು ರಚಿಸಲಾಯಿತು. ಬಳಿಕ ನವೀಕರಿಸಲು ಸೂಚಿಸಲಾಗುತ್ತದೆ. ಆಧಾರ್ ಸಂಖ್ಯೆಯು ಎಲ್ಲದಕ್ಕೂ ಅನಿವಾರ್ಯವಾಗಿದೆ. ಬ್ಯಾಂಕ್ ಖಾತೆ ಆರಂಭ, ವಿದ್ಯಾರ್ಥಿಗಳ ಪ್ರವೇಶ, ಪಿಂಚಣಿ, ಉದ್ಯೋಗ ಭತ್ಯೆಗಳು, ಪಡಿತರ ಚೀಟಿಗಳು, ಸರ್ಕಾರಿ ಯೋಜನೆಗಳು, ಸಬ್ಸಿಡಿಗಳು ಮತ್ತು ರೈತ ವಿಮೆಗೆ ಆಧಾರ್ ಕಡ್ಡಾಯವಾಗಿದೆ.

Category
ಕರಾವಳಿ ತರಂಗಿಣಿ