ನವದೆಹಲಿ: ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ನಡೆಸಲಾದ 'ಆಪರೇಷನ್ ಸಿಂದೂರ' ಕಾರ್ಯಾಚರಣೆಯ ವೇಳೆ ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನ ಡ್ರೋನ್‌ಗಳನ್ನು ಹೆಚ್ಚಾಗಿ ಬಳಸಿತು. ಅವು ನಮ್ಮ ರಕ್ಷಣಾ ವ್ಯವಸ್ಥೆಯನ್ನು ಬೇಧಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ನಮಗೆ ಯಾವುದೇ ಹಾನಿಯಾಗಲಿಲ್ಲ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್)ಜನರಲ್ ಅನಿಲ್ ಚೌಹಾಣ್ ಹೇಳಿದರು. ದೆಹಲಿಯಲ್ಲಿ ಇಂದು (ಜುಲೈ 16) ನಡೆದ ಯುಎವಿ ಮತ್ತು ಸಿ-ಯುಎಎಸ್ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಬಳಸುತ್ತಿದ್ದ ಹೆಚ್ಚಿನ ಡ್ರೋನ್‌ಗಳನ್ನು ಸ್ಥಳೀಯ ತಂತ್ರಜ್ಞಾನದಿಂದ ಹೊಡೆದು ಹಾಕಲಾಗಿದೆ. ಡ್ರೋನ್‌ಗಳು ಈಗ ಮಿಲಿಟರಿ ಸಾಧನವಾಗಿ ಮಾರ್ಪಟ್ಟಿವೆ. ನಿನ್ನೆಯ ಶಸ್ತ್ರಾಸ್ತ್ರಗಳಿಂದ ಇಂದಿನ ಯುದ್ಧಗಳನ್ನು ಗೆಲ್ಲಲು ಸಾಧ್ಯವಿಲ್ಲ. ಇಂದಿನ ಯುದ್ಧವನ್ನು ನಾಳೆಯ ತಂತ್ರಜ್ಞಾನದಿಂದ ಹೋರಾಡಬೇಕು. ಅಭಿವೃದ್ಧಿ ಹೊಂದಿದ ಶಸ್ತ್ರಾಸ್ತ್ರಗಳನ್ನು ಸೇನಾ ಪಡೆಗಳು ಹೊಂದಬೇಕು ಎಂದು ಅವರು ತಿಳಿಸಿದರು.
ಆಪರೇಷನ್ ಸಿಂದೂರದ ವೇಳೆ ಪಾಕಿಸ್ತಾನವು ಹೆಚ್ಚಾಗಿ ಡ್ರೋನ್‌ಗಳು ಮತ್ತು ಮದ್ದುಗುಂಡುಗಳನ್ನು ಬಳಸಿತು. ಅವುಗಳಲ್ಲಿ ಯಾವುವೂ ನಮ್ಮ ಸೇನಾ ನೆಲೆಗಳು ಹಾಗೂ ನಾಗರಿಕ ಪ್ರದೇಶದ ಮೇಲೆ ಹಾನಿ ಮಾಡಲಿಲ್ಲ. ಹೆಚ್ಚಿನ ಡ್ರೋನ್‌ಗಳನ್ನು ಆಗಸದಲ್ಲೇ ನಾವು ನಾಶಪಡಿಸಿದೆವು. ಕೆಲವು ಡ್ರೋನ್‌ಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು. ಇಂದಿನ ಯುದ್ಧಗಳಲ್ಲಿ ಡ್ರೋನ್‌ಗಳ ಪಾತ್ರ ದೊಡ್ಡದಾಗಿದೆ. ಅವುಗಳೇ ಯುದ್ಧದ ದಿಕ್ಕನ್ನು ಬದಲಿಸುವ ಸಾಮರ್ಥ್ಯ ಹೊಂದಿವೆ. ಡ್ರೋನ್ ವ್ಯವಸ್ಥೆಯು ಅಭಿವೃದ್ಧಿ ಹೊಂದಬೇಕಿದೆ. ನಮ್ಮ ಸೇನೆಯು ಅವುಗಳನ್ನು ಕ್ರಾಂತಿಕಾರಿ ರೀತಿಯಲ್ಲಿ ಬಳಕೆ ಮಾಡಲು ಆರಂಭಿಸಿದೆ. ಇತ್ತೀಚಿನ ಯುದ್ಧಗಳಲ್ಲಿ ಡ್ರೋನ್‌ಗಳ ಬಳಕೆಯೇ ಅತ್ಯಧಿಕವಾಗಿದೆ ಎಂದು ಸಿಡಿಎಸ್ ತಿಳಿಸಿದರು.
ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೌಂಟರ್- ಅನ್ಮ್ಯಾನ್ಡ್ ಏರಿಯಲ್ ಸಿಸ್ಟಂ (C-UAS) ಎಷ್ಟು ಮಹತ್ವದ್ದಾಗಿವೆ ಎಂಬುದನ್ನು 'ಆಪರೇಷನ್ ಸಿಂದೂರ' ನಮಗೆ ತಿಳಿಸಿಕೊಟ್ಟಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ದೇಶೀಯ ಶಸ್ತ್ರಾಸ್ತ್ರಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಬೇಕಾಗಿದೆ. ರಕ್ಷಣೆ ಮತ್ತು ಭದ್ರತೆ ಉದ್ದೇಶಗಳಿಗಾಗಿ ನಾವು ವಿದೇಶಿ ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬನೆಯಾಗುವುದು ಅಪಾಯಕಾರಿ ಎಂದು ಅಭಿಪ್ರಾಯಪಟ್ಟರು.