ಮುಂಬೈ : ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ ಟೆಸ್ಲಾ ಕೊನೆಗೂ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ತನ್ನ ಮೊದಲ ಶೋರೂಮ್ ಅನ್ನು ಪ್ರಾರಂಭಿಸಿದೆ. ಅಷ್ಟೇ ಅಲ್ಲ, ಉದ್ಘಾಟನೆಯೊಂದಿಗೆ ಕಂಪನಿಯು ಇಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಎಲೆಕ್ಟ್ರಿಕ್ ಕಾರು ಮಾಡೆಲ್ ವೈ ಅನ್ನು ಲಿಸ್ಟ್ ಮಾಡಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಟೆಸ್ಲಾ ಕಂಪನಿಯ ಮೊದಲ ಶೋರೂಮ್ ಅನ್ನು ಉದ್ಘಾಟಿಸಿದ್ದಾರೆ. ಉದ್ಘಾಟನೆ ಸಮಾರಂಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾತನಾಡಿ, ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಮತ್ತು ಚಾರ್ಜಿಂಗ್ ಮೂಲಸೌಕರ್ಯವನ್ನು ರಚಿಸಲು ನಮ್ಮ ನೀತಿ ಒಳ್ಳೆಯದು. ಇದು ಉತ್ತಮ ಆರಂಭ. ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಉತ್ಪಾದನೆಯನ್ನು ನಾವು ನೋಡಲು ಬಯಸುತ್ತೇವೆ. ಸರಿಯಾದ ಸಮಯದಲ್ಲಿ ಟೆಸ್ಲಾ ಈ ಬಗ್ಗೆ ಯೋಚಿಸುತ್ತದೆ ಎಂದು ನನಗೆ ಖಚಿತವಾಗಿದೆ ಎಂದು ಸಿಎಂ ಹೇಳಿದರು.
ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಶೋರೂಮ್ ಅನ್ನು ಮುಂಬೈನಲ್ಲಿ ತೆರೆದಿರುವುದು ನಮಗೆ ತುಂಬಾ ಸಂತೋಷದ ವಿಷಯವಾಗಿದೆ. ಟೆಸ್ಲಾ ಇಲ್ಲಿ ಲಾಜಿಸ್ಟಿಕ್ಸ್ ಮತ್ತು ಸರ್ವಿಸಿಂಗ್ ವ್ಯವಸ್ಥೆಯನ್ನು ಸ್ಥಾಪಿಸುತ್ತಿದೆ. ಇದರೊಂದಿಗೆ ಟೆಸ್ಲಾ ನಾಲ್ಕು ದೊಡ್ಡ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸಹ ಸ್ಥಾಪಿಸುತ್ತಿದೆ ಎಂದರು. ಮಹಾರಾಷ್ಟ್ರವು ವಿದ್ಯುತ್ ಚಲನಶೀಲತೆಯಲ್ಲಿ ಮುಂಚೂಣಿಯಲ್ಲಿರುವ ಕಾರಣ ಟೆಸ್ಲಾ ಮಹಾರಾಷ್ಟ್ರವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ. ಟೆಸ್ಲಾ ಭಾರತದಲ್ಲಿ ತನ್ನ ಮಾಡೆಲ್ ವೈ ಅನ್ನು ಪ್ರಾರಂಭಿಸುತ್ತಿದೆ. ಮಹಾರಾಷ್ಟ್ರವು ಅತ್ಯಂತ ಕ್ರಿಯಾತ್ಮಕ ವಿದ್ಯುತ್ ಚಲನಶೀಲತೆ ನೀತಿಯನ್ನು ಹೊಂದಿದೆ. ಅವರು ಭಾರತದಲ್ಲಿ ಉತ್ಪಾದಿಸಲು ನಿರ್ಧರಿಸಿದಾಗ ಮಹಾರಾಷ್ಟ್ರವು ಆದ್ಯತೆಯ ಸ್ಥಳವಾಗಿರುತ್ತದೆ ಎಂದು ನಾನು ನಂಬುತ್ತೇನೆ ಅಂತಾ ಹೇಳಿದರು. ಟೆಸ್ಲಾ ಕಂಪನಿಯ ಭಾರತದ ಯೋಜನೆಗಳ ಬಗ್ಗೆ ಸಾಕಷ್ಟು ಊಹಾಪೋಹಗಳಿದ್ದರೂ, ಕೇಂದ್ರ ಭಾರೀ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಜೂನ್‌ನಲ್ಲಿ ಸ್ಪಷ್ಟಪಡಿಸಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ‘ಟೆಸ್ಲಾ ತಮ್ಮ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಲು ಬಯಸುತ್ತದೆ. ಟೆಸ್ಲಾ ಪ್ರಸ್ತುತ ಭಾರತದಲ್ಲಿ ಶೋ ರೂಮ್ಗಳನ್ನು ತೆರೆಯಲು ಮಾತ್ರ ಆಸಕ್ತಿ ಹೊಂದಿದೆ’ ಎಂದು ಈ ಹಿಂದೆ ಅವರು ದೃಢಪಡಿಸಿದ್ದರು.