ನವದೆಹಲಿ: ಜೂನ್ 12ರಂದು ಅಹಮದಾಬಾದ್ನಲ್ಲಿ ಪತನಗೊಂಡ ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ ಎಂದು ತನಿಖೆ ನಡೆಸುತ್ತಿರುವ ಎಎಐಬಿ ಪ್ರಾಥಮಿಕ ವರದಿ ತಿಳಿಸಿದೆ ಎಂದು ಏರ್ ಇಂಡಿಯಾ ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ಸೋಮವಾರ ಹೇಳಿದರು. 270ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿದ್ದ ವಿಮಾನ ದುರಂತದ ಕುರಿತು ವಿಮಾನ ಅಪಘಾತಗಳ ತನಿಖಾ ಸಂಸ್ಥೆಯು (ಎಎಐಬಿ) ಪ್ರಾಥಮಿಕ ತನಿಖಾ ವರದಿ ಬಿಡುಗಡೆ ಮಾಡಿದೆ. ಅದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಏರ್ ಇಂಡಿಯಾ ಸಿಇಒ, "ಎಎಐಬಿ ಇನ್ನೂ ತನಿಖೆ ಮುಗಿಸಿಲ್ಲ. ಯಾವುದೇ ನಿಖರ ಕಾರಣಗಳನ್ನೂ ಗುರುತಿಸಿಲ್ಲ. ಹೀಗಾಗಿ, ಈ ಹಂತದಲ್ಲಿಯೇ ತೀರ್ಮಾನಕ್ಕೆ ಬರಬೇಕಿಲ್ಲ" ಎಂದು ಹೇಳಿದ್ದಾರೆ.
ದುರಂತದ ಕುರಿತು ಆತಂಕದಲ್ಲಿರುವ ವಿಮಾನಯಾನ ಸಿಬ್ಬಂದಿಗೆ ಸಂದೇಶ ರವಾನಿಸಿರುವ ಅವರು, "ಎಂಜಿನ್ಗಳಲ್ಲಿ ಯಾವುದೇ ತಾಂತ್ರಿಕ ಅಥವಾ ನಿರ್ವಹಣಾ ಸಮಸ್ಯೆಗಳಿಲ್ಲ. ಎಲ್ಲವೂ ಉತ್ತಮ ಸ್ಥಿತಿಯಲ್ಲಿವೆ" ಎಂದು ಪ್ರಾಥಮಿಕ ವರದಿಯನ್ನು ಉಲ್ಲೇಖಿಸಿದ್ದಾರೆ. "ಇಂಧನದ ಗುಣಮಟ್ಟದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಟೇಕ್ ಆಫ್ ವೇಳೆಯೂ ಯಾವುದೇ ಅಸಹಜತೆ ಸಂಭವಿಸಿಲ್ಲ. ಪೈಲಟ್ಗಳು ಹಾರಾಟಕ್ಕೂ ಮೊದಲು ಉತ್ತಮ ಸ್ಥಿತಿಯಲ್ಲಿದ್ದರು. ವೈದ್ಯಕೀಯವಾಗಿಯೂ ಯಾವುದೇ ಲೋಪ ಇರಲಿಲ್ಲ" ಎಂದಿದ್ದಾರೆ.
"ವಿಮಾನಯಾನದ ನಿಯಂತ್ರಕ ಸಂಸ್ಥೆಯಾದ ಡಿಜಿಸಿಎ, ಏರ್ ಇಂಡಿಯಾದಲ್ಲಿನ ಪ್ರತಿಯೊಂದು ಬೋಯಿಂಗ್ 787 ವಿಮಾನಗಳನ್ನು ಪರಿಶೀಲಿಸಿದೆ. ಅವೆಲ್ಲವೂ ಸೇವೆಗೆ ಯೋಗ್ಯವಾಗಿವೆ ಎಂದು ದೃಢೀಕರಿಸಿದೆ" ಎಂದು ವಿಲ್ಸನ್ ಹೇಳಿದ್ದಾರೆ. ಅಹಮದಾಬಾದ್ ವಿಮಾನ ದುರಂತದ ಕಾರಣ ತಿಳಿಯಲು ತನಿಖೆ ನಡೆಸುತ್ತಿರುವ AAIB ಜೂನ್ 11ರಂದು ಮಧ್ಯರಾತ್ರಿ ತನ್ನ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಎಂಜಿನ್ಗಳ ಇಂಧನ ಸರಬರಾಜು ಮಾಡುವ ಸ್ವಿಚ್ಗಳು ಬಂದ್ ಆಗಿದ್ದವು ಎಂದು ಪ್ರಸ್ತಾಪಿಸಿದೆ.
ವಿಮಾನ ಹಾರಿದ ಕೆಲವೇ ಸೆಕೆಂಡುಗಳಲ್ಲಿ ಎರಡು ಇಂಜಿನ್ಗಳಿಗೆ ಇಂಧನ ಪೂರೈಕೆ ನಿಂತಿದೆ. ಅದರ ಸ್ವಿಚ್ಗಳು RUN ನಿಂದ CUT OFF ಆಗಿದ್ದವು. ಇದರಿಂದ ಇಂಧನ ಸರಬರಾಜಾಗದೆ ವಿಮಾನ ಮೇಲೆಕ್ಕೆ ಹಾರಲು ಸಾಧ್ಯವಾಗಿಲ್ಲ ಎಂದು ತಿಳಿಸಿದೆ. ವಿಮಾನ ದುರಂತಕ್ಕೀಡಾಗುವ ಮೊದಲು ಪೈಲಟ್ಗಳಿಬ್ಬರು ಮಾತನಾಡಿಕೊಂಡಿದ್ದು, ಬ್ಲ್ಯಾಕ್ಬಾಕ್ಸ್ನಲ್ಲಿ ದಾಖಲಾಗಿದೆ. ಒಬ್ಬ ಪೈಲಟ್ 'ಇಂಧನವನ್ನು ಏಕೆ ಆಫ್ ಮಾಡಿದ್ದೀರಿ' ಎಂದು ಕೇಳುತ್ತಾರೆ. ಅದಕ್ಕೆ ಇನ್ನೊಬ್ಬ ಪೈಲಟ್ 'ನಾನು ಮಾಡಿಲ್ಲ' ಎಂದು ಹೇಳುತ್ತಾರೆ. ಇಂಧನ ಸ್ವಿಚ್ಗಳನ್ನು ಮರುಚಾಲನೆ ಮಾಡಿದರೂ, ಅವು ಸಕ್ರಿಯವಾಗಿಲ್ಲ ಎಂದು ತನಿಖಾ ವರದಿ ಹೇಳಿದೆ.
ಜೂನ್ 12ರಂದು 229 ಪ್ರಯಾಣಿಕರು, 12 ಸಿಬ್ಬಂದಿ ಒಳಗೊಂಡ ಏರ್ ಇಂಡಿಯಾದ ಬೋಯಿಂಗ್ ಡ್ರೀಮ್ಲೈನರ್ ಅಹಮದಾಬಾದ್ನಿಂದ ಲಂಡನ್ನ ಗ್ವಾಟಿಕ್ಗೆ ತೆರಳುತ್ತಿತ್ತು. ಟೇಕ್ ಆಫ್ ಆದ 38 ಸೆಕೆಂಡ್ಗಳಲ್ಲಿ ಪತನಕ್ಕೀಡಾಗಿತ್ತು. ವಿಮಾನದಲ್ಲಿದ್ದ 242 ಪ್ರಯಾಣಿಕರ ಪೈಕಿ ಓರ್ವ ವ್ಯಕ್ತಿ ಬಚಾವಾಗಿ, ಉಳಿದವರು ಸಾವಿಗೀಡಾಗಿದ್ದರು. ವೈದ್ಯಕೀಯ ಹಾಸ್ಟೆಲ್ನ ಕಟ್ಟಡದ ಮೇಲೆ ಪತನವಾದ್ದರಿಂದ ಅಲ್ಲಿಯೂ ಹಲವರು ಸಾವಿಗೀಡಾಗಿದ್ದರು. ಹೀಗಾಗಿ, ಒಟ್ಟು 274 ಮಂದಿ ಮೃತಪಟ್ಟಿದ್ದಾರೆ.