ಬಿಜೀಂಗ್: ನೆರೆಯ ದೇಶದೊಂದಿಗೆ ದ್ವಿಪಕ್ಷೀಯ ಸಂಬಂಧ ಸುಧಾರಣೆ ಗಮನದಲ್ಲಿರಿಸಿಕೊಂಡು ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಇಂದು ಚೀನಾ ಉಪಾಧ್ಯಕ್ಷ ಹಾನ್ ಝೆಂಗ್ ಅವರನ್ನು ಬಿಜೀಂಗ್ನಲ್ಲಿ ಭೇಟಿ ಮಾಡಿ ಚರ್ಚಿಸಿದ್ದಾರೆ. ಭಾರತ ಮತ್ತು ಚೀನಾ ನಡುವಿನ ಆರ್ಥಿಕತೆಯಲ್ಲಿ ಅಭಿಪ್ರಾಯಗಳು ಮತ್ತು ದೃಷ್ಟಿಕೋನಗಳ ಮುಕ್ತ ವಿನಿಮಯವು ಬಹಳ ಮುಖ್ಯವಾಗಿದೆ. ಈ ಭೇಟಿಯು ಸಕಾರಾತ್ಮಕ ಚರ್ಚೆಗೆ ಹಾದಿಯಾಗಲಿದೆ ಎಂಬ ಆತ್ಮವಿಶ್ವಾಸವನ್ನು ಜೈಶಂಕರ್ ವ್ಯಕ್ತಪಡಿಸಿದ್ದಾರೆ. ಹಾನ್ ಝೆಂಗ್ ಅವರೊಂದಿಗಿನ ಭೇಟಿಯಲ್ಲಿ ಚೀನಾದ ಶಾಂಘೈ ಸಹಕಾರ ಸಂಸ್ಥೆಯ ಅಧ್ಯಕ್ಷತೆಗೆ ಭಾರತದ ಬೆಂಬಲವನ್ನು ಜೈಶಂಕರ್ ವ್ಯಕ್ತಪಡಿಸಿದರು.
ಈ ಕುರಿತು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಜೈಶಂಕರ್, ಬಿಜೀಂಗ್ಗೆ ಇಂದು ಬಂದಿಳಿದಾಕ್ಷಣ ಹಾಂಗ್ ಝೆಂಗ್ ಅವರನ್ನು ಭೇಟಿ ಮಾಡಲಾಗಿದ್ದು, ಎಸ್ಸಿಒಗೆ ಚೀನಾ ಅಧ್ಯಕ್ಷತೆಗೆ ಬೆಂಬಲ ನೀಡಲಾಯಿತು. ಇದೇ ವೇಳೆ ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಯನ್ನು ಗಮನಿಸಲಾಗಿದೆ. ದ್ವಿಪಕ್ಷೀಯ ಮಾತುಕತೆಗಳು ಸಕಾರಾತ್ಮಕವಾಗಿ ಸಾಗುವ ವಿಶ್ವಾಸವಿದೆ ಎಂದು ಕೂಡ ತಿಳಿಸಿದ್ದಾರೆ. ಎಸ್ಸಿಒಯಲ್ಲಿ ಚೀನಾದ ಅಧ್ಯಕ್ಷತೆಯನ್ನು ಭಾರತ ಬೆಂಬಲಿಸಿದೆ. ಕಳೆದ ಅಕ್ಟೋಬರ್ನಲ್ಲಿ ಕಜಾನ್ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ನಮ್ಮ ದ್ವಿಪಕ್ಷೀಯ ಸಂಬಂಧವೂ ನಿರಂತರವಾಗಿ ಸುಧಾರಣೆ ಕಾಣುತ್ತಿರುವುದುನ್ನು ಜೈಶಂಕರ್ ಸೂಚ್ಯವಾಗಿ ತಿಳಿಸಿದ್ದಾರೆ. ಜೊತೆಗೆ ತಮ್ಮ ಈ ಭೇಟಿಯಲ್ಲಿ ಸಕಾರಾತ್ಮಕತೆ ಕಾಯ್ದುಕೊಳ್ಳುವ ಮತ್ತು ಈ ಮೂಲಕ ಚರ್ಚೆ ನಡೆಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.