ತಿರುವಳ್ಳೂರ್: ಡೀಸೆಲ್ ಸಾಗಿಸುತ್ತಿದ್ದ ಗೂಡ್ಸ್ ರೈಲು ಹಳ್ಳಿ ತಪ್ಪಿದ ಪರಿಣಾಮ, ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿ ಉರಿದ ಘಟನೆ ಇಂದು ಬೆಳಗ್ಗೆ ತಮಿಳುನಾಡಿನ ತಿರುವಳ್ಳೂರು ಬಳಿ ಸಂಭವಿಸಿದೆ.ಚೆನ್ನೈ ಬಂದರಿನಿಂದ ಡೀಸೆಲ್ ಸಾಗಿಸುತ್ತಿದ್ದ ಸರಕು ಸಾಗಣೆ ರೈಲು ತಿರುವಳ್ಳೂರು ಬಳಿ ಇದ್ದಕ್ಕಿದ್ದಂತೆ ಹಳಿತಪ್ಪಿದೆ. ಈ ವೇಳೆ ರೈಲಿನಲ್ಲಿದ್ದ ಡೀಸೆಲ್ ಟ್ಯಾಂಕರ್ನಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಧಗಧಗಿಸುತ್ತಿರುವ ಬೆಂಕಿಯ ಜ್ವಾಲೆಯ ಹಿನ್ನೆಲೆಯಲ್ಲಿ ಸುತ್ತಲೂ ದಟ್ಟ ಹೊಗೆ ಆವರಿಸಿಕೊಂಡಿತ್ತು.
ಟ್ಯಾಂಕರ್ಗಳಲ್ಲಿ ಅಪಾರ ಪ್ರಮಾಣದ ಇಂಧನ ಇರುವುದರಿಂದ ಬೆಂಕಿಯ ವ್ಯಾಪ್ತಿ ಮತ್ತಷ್ಟು ಹರಡಬಹುದು ಎಂದು ಅಧಿಕಾರಿಗಳು ಆಂತಕ ವ್ಯಕ್ತಪಡಿಸಿದ್ದಾರೆ. ಘಟನೆಯಿಂದ ಇದುವರೆಗೆ ಒಟ್ಟು ಐದು ಬೋಗಿಗಳು ಸಂಪೂರ್ಣವಾಗಿ ಬೆಂಕಿಯಲ್ಲಿ ಸುಟ್ಟುಕರಕಲಾಗಿವೆ.10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸುತ್ತಿದ್ದರೂ ಬೆಂಕಿಯನ್ನು ನಂದಿಸಲು ಸಾಧ್ಯವಾಗುತ್ತಿಲ್ಲ. ಹತ್ತಿರದ ವಸತಿ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಪೊಲೀಸರು ಸ್ಥಳಾಂತರಿಸಿದ್ದಾರೆ. ಸುರಕ್ಷತಾ ಕಾರಣಗಳಿಗಾಗಿ ವಿದ್ಯುತ್ ಸರಬರಾಜು ಕೂಡ ಕಡಿತಗೊಳಿಸಲಾಗಿದೆ. ಘಟನೆ ನಡೆದ ಸ್ಥಳದ ಸಮೀಪವಿರುವ ಮನೆಗಳಲ್ಲಿನ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರ ಮಾಡಲಾಗಿದೆ.
ಇಲ್ಲಿನ ಜಿಲ್ಲಾಧಿಕಾರಿ ಎಂ.ಪ್ರತಾಪ್ ಅವರು ಅಗ್ನಿಶಾಮಕ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಆದೇಶಿಸಿದ್ದಾರೆ. ಅಪಘಾತದಲ್ಲಿ ಇಲ್ಲಿಯವರೆಗೆ ಯಾವುದೇ ಜೀವಹಾನಿ ಸಂಭವಿಸಿದ ವರದಿಯಾಗಿಲ್ಲ. ರಕ್ಷಣಾ ಕಾರ್ಯಾಚರಣೆಗಾಗಿ ಅರಕ್ಕೋಣಂನಿಂದ ವಿಪತ್ತು ಪರಿಹಾರ ತಂಡಗಳು ಘಟನಾ ಸ್ಥಳಕ್ಕೆ ತಲುಪಿವೆ.
ಘಟನೆಯಿಂದ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ದಕ್ಷಿಣ ರೈಲ್ವೆ ಇಲಾಖೆಯು ಎಕ್ಸ್ ಪೋಸ್ಟ್ ಮೂಲಕ ಮಾಹಿತಿ ನೀಡಿದೆ. "ತಿರುವಳ್ಳೂರು ಬಳಿ ಸಂಭವಿಸಿದ ಘಟನೆಯಿಂದ ಮುಂಜಾಗೃತವಾಗಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಬೆಂಕಿ ನಂದಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದ್ದರಿಂದ ರೈಲು ಸೇವೆಗಳಲ್ಲಿ ಈ ಕೆಳಗಿನ ಬದಲಾವಣೆಗಳನ್ನು ಮಾಡಲಾಗಿದೆ" ಎಂದು ರೈಲುಗಳ ಪಟ್ಟಿಯನ್ನು ಹಂಚಿಕೊಂಡಿದೆ. ತುರ್ತು ಸಹಾಯಕ್ಕಾಗಿ ಸಹಾಯವಾಣಿ: 044-25354151, 044-24354995 ತೆರೆಯಲಾಗಿದೆ.