ನವದೆಹಲಿ: ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ 'ಮರಾಠಾ ಮಿಲಿಟರಿ ಭೂದೃಶ್ಯಗಳು' ಎಂದೇ ಪರಿಗಣಿಸಲಾಗುವ 12 ಕೋಟೆಗಳು ಸೇರ್ಪಡೆಗೊಂಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಮನ್ನಣೆಯಿಂದ ಪ್ರತಿಯೊಬ್ಬ ಭಾರತೀಯರೂ ಉತ್ಸುಕರಾಗಿದ್ದಾರೆ ಎಂದಿರುವ ಪ್ರಧಾನಿ, ಮರಾಠ ಸಾಮ್ರಾಜ್ಯದ ಶ್ರೀಮಂತ ಇತಿಹಾಸ ತಿಳಿಯಲು ಎಲ್ಲರೂ ಈ ಕೋಟೆಗಳಿಗೆ ಭೇಟಿ ನೀಡುವಂತೆ ಮನವಿ ಮಾಡಿದ್ದಾರೆ. ಪ್ಯಾರಿಸ್‌ನ ಯುನೆಸ್ಕೋ ಪ್ರಧಾನ ಕಚೇರಿಯಲ್ಲಿ ಜುಲೈ 6ರಿಂದ 16ರ ವರೆಗೆ ನಡೆದ 47ನೇ ಸೆಷನ್ನಲ್ಲಿ ಮಹಾರಾಷ್ಟ್ರದ 11 ಮತ್ತು ತಮಿಳುನಾಡಿನಲ್ಲಿನ ಒಂದು ಕೋಟೆ ಸೇರಿದಂತೆ ಮರಾಠರ 12 ಪ್ರಮುಖ ಕೋಟೆಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲಾಗಿದೆ.
17ನೇ ಮತ್ತು 19ನೇ ಶತಮಾನಗಳ ಅವಧಿಯ ಅಸಾಧಾರಣ ಕೋಟೆಗಳು ಮರಾಠಾ ಸಾಮ್ರಾಜ್ಯದ ರಕ್ಷಣಾ ವ್ಯವಸ್ಥೆಗಳ ಸಂಕೀರ್ಣತೆ, ಕಾರ್ಯತಂತ್ರದ ಪರಾಕ್ರಮ ಹಾಗೂ ಮರಾಠರ ಮಿಲಿಟರಿ ಪ್ರಾಬಲ್ಯದ ಸಂಕೇತವಾಗಿವೆ. ಭಾರತದ ಶ್ರೀಮಂತ ನಾಗರಿಕತೆಯ ಪರಂಪರೆಯನ್ನು ಪ್ರದರ್ಶಿಸುತ್ತವೆ. ಯುನೆಸ್ಕೊ ಮನ್ನಣೆ ಪಡೆದ ಭಾರತದ 44ನೇ ತಾಣ ಇದಾಗಿದೆ.
ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಈ ತಾಣಗಳ ಆಯ್ಕೆ ಕುರಿತು ಪೋಸ್ಟ್ ಮಾಡಿರುವ ಸಂಸ್ಕೃತಿ ಸಚಿವಾಲಯ, ''ಇದು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಅದ್ಬುತ ವಾಸ್ತುಶಿಲ್ಪ, ಪ್ರಾದೇಶಿಕ ಗುರುತು ಮತ್ತು ಐತಿಹಾಸಿಕ ವೈವಿಧ್ಯಮಯ ಸಂಪ್ರದಾಯಗಳನ್ನು ಪ್ರದರ್ಶಿಸುತ್ತದೆ'' ಎಂದಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಇದು ಹೆಮ್ಮೆಯ ಕ್ಷಣವಾಗಿದೆ ಎಂದಿದ್ದಾರೆ. ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 12 ಕೋಟೆಗಳು ಸ್ಥಾನ ಪಡೆದಿರುವುದನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ. ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಮರಾಠಾ ಮಿಲಿಟರಿ ಭೂ ದೃಶ್ಯಗಳಾದ ಮಹಾರಾಷ್ಟ್ರದ ಸಲ್ಹೇರ್, ಶಿವನೇರಿ, ಲೋಹ್‌ಗಡ್, ಖಂಡೇರಿ, ರಾಯಗಡ್, ರಾಜ್‌ಗಡ್, ಪ್ರತಾಪ್‌ಗಡ್, ಸುವರ್ಣದುರ್ಗ, ಪನ್ಹಾಲಾ, ವಿಜಯ್ ದುರ್ಗ್ ಮತ್ತು ಸಿಂಧುದುರ್ಗ ಕೋಟೆಗಳು ಮತ್ತು ತಮಿಳುನಾಡಿನ ಗಿಂಗಿ ಕೋಟೆಗಳು ಸೇರಿವೆ.